ದೆಹಲಿ: ಮುಂಬರುವ ಭವಾನಿಪುರ ವಿಧಾನಸಭಾ ಉಪಚುನಾವಣೆಗೆ (Bhabanipur bypoll) ನಾಮಪತ್ರ ಸಲ್ಲಿಸುವಾಗ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬರೆವಾಲ್ (Priyanka Tibrewal) ಕೊವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಚುನಾವಣಾ ಆಯೋಗ (Election Commission of India) ನೋಟಿಸ್ ನೀಡಿದೆ. ನೋಟಿಸ್‌ನಲ್ಲಿ ಭವಾನಿಪುರ ಕ್ಷೇತ್ರದ ಚುನಾವಣಾಧಿಕಾರಿ ಬುಧವಾರ ಸಂಜೆ 5 ಗಂಟೆಯೊಳಗೆ ಟಿಬರೆವಾಲ್ನಿಂದ ಪ್ರತಿಕ್ರಿಯೆ ಕೇಳಿದ್ದಾರೆ. ಆಕೆಯ ಮುಂದಿನ ರ್ಯಾಲಿಗಳಿಗೆ ಏಕೆ ಅನುಮತಿ ನಿರಾಕರಿಸಬಾರದು ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ. ಬಿಜೆಪಿಯ ಯುವ ಘಟಕದ ನಾಯಕ ಮತ್ತು ವಕೀಲರಾಗಿರುವ ಟಿಬರೆವಾಲ್ ಸೆಪ್ಟೆಂಬರ್ 30 ರಂದು ಭವಾನಿಪುರ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ದಕ್ಷಿಣ ಕೊಲ್ಕತ್ತಾದ ಸರ್ವೇ ಕಟ್ಟಡದಿಂದ ಟಿಬರೆವಾಲ್ ಸೋಮವಾರ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಪ್ರತಿಪಕ್ಷದ ನಾಯಕ ಮತ್ತು ನಂದಿಗ್ರಾಮ ಶಾಸಕ ಸುವೇಂದು ಅಧಿಕಾರಿ, ಸಂಸದ ಅರ್ಜುನ್ ಸಿಂಗ್, ಪಕ್ಷದ ಹಿರಿಯ ನಾಯಕ ದಿನೇಶ್ ತ್ರಿವೇದಿ ಮತ್ತು ನಟ ರುದ್ರನೀಲ್ ಘೋಷ್ ಇತರರು ಇದ್ದರು.
ಚುನಾವಣಾ ಆಯೋಗದ ನೋಟಿಸ್ ಮಾದರಿ ನೀತಿ ಸಂಹಿತೆ ಮತ್ತು ಕೊವಿಡ್ -19 ಪ್ರೋಟೋಕಾಲ್‌ಗಳ ಉಲ್ಲಂಘನೆಯನ್ನು ಉಲ್ಲೇಖಿಸಿದೆ.
ಮಂಗಳವಾರ ಮಮತಾ ಬ್ಯಾನರ್ಜಿ ನಾಮಪತ್ರದಲ್ಲಿ ಕ್ರಿಮಿನಲ್ ದಾಖಲೆಗಳ ವಿವರಗಳ ಕೊರತೆಯನ್ನು ಉಲ್ಲೇಖಿಸಿ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.
ಟಿಬರೆವಾಲ್ ನ ಮುಖ್ಯ ಚುನಾವಣಾ ಏಜೆಂಟ್ ಸಜಲ್ ಘೋಷ್ ಅವರು ಚುನಾವಣಾ ಸಮಿತಿಗೆ ಪತ್ರ ಬರೆದಿದ್ದಾರೆ. “ಆಕೆಯ ಚುನಾವಣಾ ಅಫಿಡವಿಟ್‌ನಲ್ಲಿ ಆಕೆಯ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಸ್ಸಾಂನಲ್ಲಿ ಆಕೆಯ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಮತ್ತು ಆಕೆ ಅವುಗಳನ್ನು ತನ್ನ ಅಫಿಡವಿಟ್ ನಲ್ಲಿ ಬಹಿರಂಗಪಡಿಸಿಲ್ಲ. ಆದ್ದರಿಂದ ನಾನು ಮಮತಾ ಬ್ಯಾನರ್ಜಿ ಸಲ್ಲಿಸಿದ ನಾಮನಿರ್ದೇಶನ/ಘೋಷಣೆಯನ್ನು ಆಕ್ಷೇಪಿಸಲು ಮನವಿ ಮಾಡುತ್ತೇನೆ. ನಾಮಪತ್ರವನ್ನು ಅಸಿಂಧು ಎಂದು ಘೋಷಿಸಲು ಮತ್ತು ಆಕೆಯ ಉಮೇದುವಾರಿಕೆಯನ್ನು ರದ್ದುಗೊಳಿಸುವಂತೆ ನಾನು ಚುನಾವಣಾ ಸಮಿತಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಸೆಪ್ಟೆಂಬರ್ 30 ರಂದು ಸಂಸರ್‌ಗಂಜ್ ಮತ್ತು ಜಂಗೀಪುರದಲ್ಲಿ ಎರಡು ಮತದಾನ ನಡೆಯಲಿದೆ. ಈ ಉಪಚುನಾವಣೆಗಳ ಎಣಿಕೆ ಅಕ್ಟೋಬರ್ 3 ರಂದು ನಡೆಯಲಿದ್ದು, ಮಮತಾ ತನ್ನ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ನವೆಂಬರ್ 5 ರೊಳಗೆ ಆಯ್ಕೆಯಾಗಬೇಕಿದೆ.
(ECI serves notice to BJP Bhabanipur candidate Priyanka Tibrewal over violation of Covid protocols)