ಆಕ್ಷೇಪಾರ್ಹ ಹೇಳಿಕೆ: ಬಿಜೆಪಿಯ ದಿಲೀಪ್ ಘೋಷ್, ಕಾಂಗ್ರೆಸ್‌ನ ಸುಪ್ರಿಯಾ ಶ್ರಿನೇಟ್‌ಗೆ ಚುನಾವಣಾ ಆಯೋಗ ನೋಟಿಸ್
ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ದಿಲೀಪ್ ಘೋಷ್ ಮತ್ತು ಕಂಗನಾ ರಣಾವತ್ ವಿರುದ್ಧ ಸುಪ್ರಿಯಾ ಶ್ರೀನೇಟ್ ಅವರ ಟೀಕೆಗಳನ್ನು 'ಅಸಭ್ಯ ಮತ್ತು ಕೆಟ್ಟ ಅಭಿರುಚಿ'ಯದ್ದು ಎಂದು ಹೇಳಿದ್ದು ಮಾರ್ಚ್ 29, ಶುಕ್ರವಾರ ಸಂಜೆ 5 ಗಂಟೆಯೊಳಗೆ ಆಯೋಗಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ದೆಹಲಿ ಮಾರ್ಚ್ 27: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಬಿಜೆಪಿ ನಾಯಕ ದಿಲೀಪ್ ಘೋಷ್ (Dilip Ghosh) ಮತ್ತು ಬಿಜೆಪಿಯ ಲೋಕಸಭಾ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) ವಿರುದ್ದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ (Supriya Shrinate) ಅವರ ಆಕ್ಷೇಪಾರ್ಹ ಹೇಳಿಕೆಗಾಗಿ ಭಾರತೀಯ ಚುನಾವಣಾ ಆಯೋಗ ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಚುನಾವಣಾ ಆಯೋಗವು ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಘೋಷ್ ಮತ್ತು ಕಂಗನಾ ರಣಾವತ್ ವಿರುದ್ಧ ಶ್ರೀನೇಟ್ ಅವರ ಟೀಕೆಗಳನ್ನು ‘ಅಸಭ್ಯ ಮತ್ತು ಕೆಟ್ಟ ಅಭಿರುಚಿ’ಯದ್ದು ಎಂದು ಹೇಳಿದ್ದು ಮಾರ್ಚ್ 29, ಶುಕ್ರವಾರ ಸಂಜೆ 5 ಗಂಟೆಯೊಳಗೆ ಆಯೋಗಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ಈ ಎರಡೂ ನೋಟೀಸ್‌ಗಳಲ್ಲಿ, ನಾಯಕರ ಹೇಳಿಕೆಗಳು ಲೋಕಸಭೆ ಚುನಾವಣೆಗೆ ಮುನ್ನ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ (ಎಂಸಿಸಿ) ಅನ್ನು ಪ್ರಾಥಮಿಕವಾಗಿ ಉಲ್ಲಂಘಿಸುತ್ತವೆ ಎಂದು ಇಸಿ ಹೇಳಿದೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಮಾದರಿ ನೀತಿ ಸಂಹಿತೆಯ ಭಾಗ I ರ ‘ಸಾಮಾನ್ಯ ನಡವಳಿಕೆ’ ಖಂಡ (2) ರ ಪ್ರಕಾರ, ಇತರ ರಾಜಕೀಯ ಪಕ್ಷಗಳ ಟೀಕೆಗಳನ್ನು ಮಾಡಿದಾಗ, ಅವರ ನೀತಿಗಳು ಮತ್ತು ಕಾರ್ಯಕ್ರಮ, ದಾಖಲೆ ಮತ್ತು ಕೆಲಸಗಳಿಗೆ ಸೀಮಿತವಾಗಿರುತ್ತದೆ. ಪಕ್ಷಗಳು ಮತ್ತು ಅಭ್ಯರ್ಥಿಗಳು ಇತರ ಪಕ್ಷಗಳ ನಾಯಕರು ಅಥವಾ ಕಾರ್ಯಕರ್ತರ ಸಾರ್ವಜನಿಕ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿಲ್ಲದ ಖಾಸಗಿ ಜೀವನದ ಎಲ್ಲಾ ಅಂಶಗಳ ಟೀಕೆಗಳಿಂದ ದೂರವಿರಬೇಕು. ಇದು ಪರಿಶೀಲಿಸದ ಆರೋಪಗಳು ಅಥವಾ ತಿರುಚುವಿಕೆಯ ಆಧಾರದ ಮೇಲೆ ಇತರ ಪಕ್ಷಗಳು ಅಥವಾ ಅವರ ಕಾರ್ಯಕರ್ತರ ಟೀಕೆಗಳನ್ನು ತಪ್ಪಿಸಬೇಕು ಎಂದು ಹೇಳುತ್ತದೆ.
ಕಂಗನಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಸುಪ್ರಿಯಾ
ಮುಂಬರುವ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ಕಂಗನಾ ರಣಾವತ್ ಬಗ್ಗೆ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಆಕ್ಷೇಪಾರ್ಹ ಪೋಸ್ಟ್ ಮಾಡಿದ ನಂತರ ಕಾಂಗ್ರೆಸ್ ನಾಯಕಿ ಭಾರೀ ವಿವಾದವನ್ನು ಹುಟ್ಟುಹಾಕಿದರು. “ಮಂಡಿಯಲ್ಲಿ (ಮಾರುಕಟ್ಟೆ) ಪ್ರಸ್ತುತ ದರ ಎಷ್ಟು ಎಂದು ಯಾರಾದರೂ ಹೇಳಬಹುದೇ?” ಎಂಬ ಬರಹದೊಂದಿಗೆ ಕಂಗನಾಳ ಹಾಟ್ ಫೋಟೋ ಪೋಸ್ಟ್ ಮಾಡಿದ್ದರು ಶ್ರಿನೇಟ್. ಈ ಪೋಸ್ಟ್ ಈಗ ಅಳಿಸಲಾಗಿದೆ. ಆದಾಗ್ಯೂ, ತನ್ನ ಖಾತೆ ಹ್ಯಾಕ್ ಆಗಿತ್ತು ಎಂದು ಸುಪ್ರಿಯಾ ಹೇಳಿದ್ದರು. ತನ್ನ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಸುಪ್ರಿಯಾಗೆ ಪ್ರತಿಕ್ರಿಯಿಸಿದ ಕಂಗನಾ ಪ್ರತಿ ಮಹಿಳೆ ಘನತೆಗೆ ಅರ್ಹರು ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ ದಿಲೀಪ್ ಘೋಷ್ ಟೀಕೆ
ಕಂಗನಾ ರಣಾವತ್ – ಸುಪ್ರಿಯಾ ಶ್ರಿನೇಟ್ ವಿವಾದದ ನಡುವೆಯೇ ಮೇದಿನಿಪುರದ ಬಿಜೆಪಿ ಸಂಸದ ದಿಲೀಪ್ ಘೋಷ್ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಈ ಬಾರಿ ಬಿಜೆಪಿಯಿಂದ ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಕ್ಷದ ಉಪಾಧ್ಯಕ್ಷರು ಮಂಗಳವಾರ ಟಿಎಂಸಿಯ “ಬಾಂಗ್ಲಾ ನಿಜೇರ್ ಮೇಯೆ ಕೆ ಚಾಯ್ (ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತದೆ)” ಎಂಬ ಘೋಷಣೆಯನ್ನು ಲೇವಡಿ ಮಾಡಿದ್ದಾರೆ. “ಗೋವಾಕ್ಕೆ ಹೋದಾಗ ಗೋವಾದ ಮಗಳು ಎನ್ನುತ್ತಾಳೆ. ತ್ರಿಪುರಾದಲ್ಲಿ ತ್ರಿಪುರಾ ಮಗಳು ಎನ್ನುತ್ತಾಳೆ. ಮೊದಲು ಸ್ಪಷ್ಟನೆ ನೀಡಲಿ ಎಂದು ಘೋಷ್ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಸಹಾನುಭೂತಿ ಪಡೆಯಲು ಕೇಜ್ರಿವಾಲ್ ನಡೆಸಿದ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ: ಮನ್ಸುಖ್ ಮಾಂಡವಿಯಾ
ಈ ಹೇಳಿಕೆಗಳು ಎಂಸಿಸಿಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಟಿಎಂಸಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಘೋಷ್ ಅವರ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಬಿಜೆಪಿ ವಿವರಣೆಯನ್ನು ಕೇಳಿದ್ದು ಇದು “ಅಸಂಸದೀಯ” ಮತ್ತು ಪಕ್ಷದ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಬಿಜೆಪಿ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಮಾತನಾಡಿ, ಮಹಿಳೆಯರ ಬಗ್ಗೆ ಮತ್ತು ಅದೂ ಮುಖ್ಯಮಂತ್ರಿಯಾಗಿರುವ ಯಾರೊಬ್ಬರ ವಿರುದ್ಧದ ಹೇಳಿಕೆಗಳನ್ನು ತಮ್ಮ ಪಕ್ಷ ಬೆಂಬಲಿಸುವುದಿಲ್ಲ, ಅದಕ್ಕಾಗಿಯೇ ಅವರಿಂದ ವಿವರಣೆಯನ್ನು ಕೇಳಲಾಗಿದೆ ಎಂದಿದ್ದಾರೆ.
ಘೋಷ್, ನಂತರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮುಖ್ಯಮಂತ್ರಿಯೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಯಾರೇ ತಪ್ಪು ಮಾಡಿದರೂ ನಾನು ನೇರಾನೇರವಾಗಿ ಹೇಳಿದಾಗಿನಿಂದ ನನ್ನ ಹೇಳಿಕೆ ಬಗ್ಗೆ ವಿವಾದ ಭುಗಿಲೆದ್ದಿರುವುದು ಇದೇ ಮೊದಲಲ್ಲ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Wed, 27 March 24