ಅಗತ್ಯ ಸರಕುಗಳ ಕಾಯ್ದೆ ಎಂದರೇನು? ಎಲ್​ಪಿಜಿ, ಪೈಪ್ಡ್ ಗ್ಯಾಸ್, ಸಿಎನ್​ಜಿ ಸರಬರಾಜು ಖಾತ್ರಿಪಡಿಸಲು ಸರ್ಕಾರದ ಸೂತ್ರವೇನು? ಇಲ್ಲಿದೆ ಡೀಟೇಲ್ಸ್

Essential Commodities act to ensure fair supply of natural gas: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಅಭಾವ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಆದ್ಯತಾನುಸಾರ ಪೂರೈಕೆ ವ್ಯವಸ್ಥೆ ಮಾಡಿದೆ. ಗೃಹಬಳಕೆಗೆ ಉಪಯೋಗಿಸುವ ಎಲ್​ಪಿಜಿ ಹಾಗೂ ಪಿಎನ್​ಜಿಯ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಎಚ್ಚರ ವಹಿಸಲಾಗುತ್ತಿದೆ. ಹಾಗೆಯೇ, ವಾಹನಗಳಿಗೆ ಉಪಯೋಗಿಸುವ ಸಿಎನ್​ಜಿ ಗ್ಯಾಸ್ ಪೂರೈಕೆ ನೂರಕ್ಕೆ ನೂರು ಇರುತ್ತದೆ.

ಅಗತ್ಯ ಸರಕುಗಳ ಕಾಯ್ದೆ ಎಂದರೇನು? ಎಲ್​ಪಿಜಿ, ಪೈಪ್ಡ್ ಗ್ಯಾಸ್, ಸಿಎನ್​ಜಿ ಸರಬರಾಜು ಖಾತ್ರಿಪಡಿಸಲು ಸರ್ಕಾರದ ಸೂತ್ರವೇನು? ಇಲ್ಲಿದೆ ಡೀಟೇಲ್ಸ್
ಎಲ್​ಪಿಜಿ

Updated on: Mar 10, 2026 | 4:48 PM

ನವದೆಹಲಿ, ಮಾರ್ಚ್ 10: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ತೈಲ ಮತ್ತು ಅನಿಲ ಬಿಕ್ಕಟ್ಟು ಪರಿಸ್ಥಿತಿ ಉದ್ಭವವಾಗಿದೆ. ಭಾರತಕ್ಕೂ ಇದರ ಬಿಸಿ ತಟ್ಟಿದೆ. ಪೆಟ್ರೋಲ್ ಮತ್ತು ಡೀಸಲ್ ಜೊತೆಗೆ ಅನಿಲದ ಅಭಾವ ಭಾರತಕ್ಕೆ ತಾಕತೊಡಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆಯನ್ನು ಸಕ್ರಿಯಗೊಳಿಸಿದೆ. ಎಲ್​ಪಿಜಿ ಮತ್ತು ನ್ಯಾಚುರಲ್ ಗ್ಯಾಸ್ ಬಳಸುವವರ ಪೈಕಿ ಆದ್ಯತೆ ಮೇರೆಗೆ ಹಂಚಿಕೆ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ.

ಗೃಹ ಬಳಕೆ ಮತ್ತು ವಾಹನಗಳಿಗೆ ಬೇಕಿರುವ ಎಲ್​ಪಿಜಿ, ಪಿಎನ್​ಜಿ ಮತ್ತು ಸಿಎನ್​ಜಿ ಗ್ಯಾಸ್​ಗಳ ಪೂರೈಕೆಯನ್ನು ಖಚಿತಪಡಿಸುವುದಕ್ಕೆ ಮೊದಲ ಆದ್ಯತೆ ಇರುತ್ತದೆ. ಉದ್ಯಮಗಳು, ರಸಗೊಬ್ಬರ ಕಾರ್ಖಾನೆಗಳಿಗೆ ಬೇಕಾದ ನೈಸರ್ಗಿಕ ಅನಿಲದ ಸರಬರಾಜಿಗೆ ನಂತರದ ಆದ್ಯತೆ ಇರುತ್ತದೆ.

ಇದನ್ನೂ ಓದಿ: ಎಲ್​ಪಿಜಿ ಬಿಕ್ಕಟ್ಟು ಎದುರಿಸಲು ಹರ್ದೀಪ್ ಪುರಿ ಮತ್ತು ಜೈಶಂಕರ್ ಜೊತೆ ಪ್ರಧಾನಿ ಮೋದಿ ಸಭೆ

ಭಾರತಕ್ಕೆ ಬೇಕಾದ ಶೇ. 30ರಷ್ಟು ನೈಸರ್ಗಿಕ ಅನಿಲವು ಹಾರ್ಮುಜ್ ಮಾರ್ಗದಿಂದ ಪೂರೈಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲದ ಬಳಕೆಗೆ ಆದ್ಯತೆಗಳನ್ನು ನಿಗದಿ ಮಾಡಲಾಗಿದೆ. ಹಾರ್ಮುಜ್​ನಿಂದ ಪೂರೈಕೆ ಸ್ಥಗಿತಗೊಂಡಿದ್ದರಿಂದ ಇತರ ಮಾರ್ಗಗಳ ಮೂಲಕ ಭಾರತವು ನೈಸರ್ಗಿಕ ಅನಿಲವನ್ನು ಖರೀದಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹೇಳಿದೆ.

ನೈಸರ್ಗಿಕ ಅನಿಲ ಪೂರೈಕೆಯ ಆದ್ಯತೆಗಳಿವು…

  • ಮನೆಗಳಿಗೆ ಕೊಳವೆ ಗ್ಯಾಸ್ ಸರಬರಾಜು ನೂರಕ್ಕೆ ನೂರು.
  • ವಾಹನಗಳಿಗೆ ಸಿಎನ್​ಜಿ ಗ್ಯಾಸ್ ಸರಬರಾಜು ನೂರಕ್ಕೆ ನೂರು.
  • ನ್ಯಾಚುರಲ್ ಗ್ಯಾಸ್ ಗ್ರಿಡ್​ಗೆ ಕನೆಕ್ಟ್ ಆಗಿರುವ ಚಹಾ ಉದ್ಯಮ, ಮ್ಯಾನುಫ್ಯಾಕ್ಚರಿಂಗ್, ಕೈಗಾರಿಕಾ ಗ್ರಾಹಕರಿಗೆ ಹಿಂದಿನ ಆರು ತಿಂಗಳ ಸರಾಸರಿ ಸರಬರಾಜಿನ ಶೇ 80ರಷ್ಟನ್ನು ಈಗ ಪೂರೈಸಲಾಗುವುದು.
  • ಕೈಗಾರಿಕೆ ಮತ್ತು ಕಮರ್ಷಿಯಲ್ ನ್ಯಾಚುರಲ್ ಗ್ಯಾಸ್ ಬಳಕೆದಾರರಿಗೆ ಹಿಂದಿನ ಆರು ತಿಂಗಳ ಸರಾಸರಿ ಸರಬರಾಜಿನ ಶೇ. 80ರಷ್ಟನ್ನು ಪೂರೈಸಲಾಗುವುದು.
  • ರಸಗೊಬ್ಬರ ಘಟಕಗಳಿಗೆ ಆರು ತಿಂಗಳ ಸರಾಸರಿ ಸರಬರಾಜಿನ ಶೇ. 70ರಷ್ಟನ್ನು ಪೂರೈಸಲಾಗುವುದು.

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್​​​ನಲ್ಲಿ ಮಹತ್ವದ ಬದಲಾವಣೆ

ದೇಶೀಯವಾಗಿ ಎಲ್​ಪಿಜಿ ಉತ್ಪಾದನೆ ಹೆಚ್ಚಿಸಲು ಸರ್ಕಾರವು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ನಿರ್ದೇಶನ ನೀಡಿದೆ. ಪ್ರೊಪೇನ್, ಬುಟೇನ್​ನಂತಹ ಹೈಡ್ರೋಕಾರ್ಬನ್ ಸ್ಟ್ರೀಮ್​ಗಳನ್ನು ಕೈಗಾರಿಕೆಗಳಿಗೆ ನೀಡುವ ಬದಲು ಎಲ್​ಪಿಜಿ ಸಂಗ್ರಹಕ್ಕೆ ತಲುಪಿಸುವಂತೆಯೂ ನಿರ್ದೇಶನ ಕೊಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us