ಎಲ್ಲರೂ ಮನೆಯಲ್ಲೇ ಇದ್ದರು; ನೊಯ್ಡಾದಲ್ಲಿ ಬೆಂಕಿಗಾಹುತಿಯಾದ ನಿಕ್ಕಿಯ ತಂಗಿ ಬಿಚ್ಚಿಟ್ಟ ರಹಸ್ಯ
ನೊಯ್ಡಾದಲ್ಲಿ ವರದಕ್ಷಿಣೆಗಾಗಿ ನಡೆದ ನಿಕ್ಕಿ ಎಂಬ ಮಹಿಳೆಯ ಕೊಲೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ನಿಕ್ಕಿ ಎಂಬ ಮಹಿಳೆಗೆ ಆಕೆಯ ಗಂಡ ಹಾಗೂ ಅತ್ತೆ ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಆದರೆ, ಆಕೆಯ ಗಂಡ ಆ ವೇಳೆ ಮನೆಯ ಹೊರಗೆ ಇದ್ದ ಎಂದು ಸಿಸಿಟಿವಿಯಲ್ಲಿ ಬಯಲಾಗಿತ್ತು. ಈ ಬಗ್ಗೆ ನಿಕ್ಕಿಯ ತಂಗಿ ಕಾಂಚನ ಇದೀಗ ಅಚ್ಚರಿಯ ಮಾಹಿತಿಯನ್ನು ನೀಡಿದ್ದಾರೆ.

ನೊಯ್ಡಾ, ಆಗಸ್ಟ್ 28: ವರದಕ್ಷಿಣೆಗಾಗಿ ನೊಯ್ಡಾದಲ್ಲಿ (Noida Dowry Case) ನಡೆದ ಕೊಲೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಪ್ರಕರಣದ ಪ್ರತ್ಯಕ್ಷದರ್ಶಿ ನಿಕ್ಕಿಯ ಅಕ್ಕ ಕಾಂಚನ ತನ್ನ ಅಕ್ಕನ ಕೊಲೆಯ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಈ ಘಟನೆ ನಡೆದಾಗ ಎಲ್ಲರೂ ಮನೆಯಲ್ಲಿಯೇ ಇದ್ದರು ಎಂದು ಆಕೆ ಪ್ರತಿಪಾದಿಸಿದ್ದಾರೆ. ಆದರೆ, ಮನೆಯ ಹೊರಗಿನ ಸಿಸಿಟಿವಿ ವಿಡಿಯೋ ರೆಕಾರ್ಡಿಂಗ್ ಕಾಂಚನ ಅವರ ಹೇಳಿಕೆಗೆ ಹೊಂದಿಕೆಯಾಗುತ್ತಿಲ್ಲ.
ನಿಕ್ಕಿಯ ಮರಣದ ಸಮಯದಲ್ಲಿ ಅವರ ಪತಿ ವಿಪಿನ್ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಸಿರ್ಸಾ ಗ್ರಾಮದಲ್ಲಿರುವ ತಮ್ಮ ಮನೆಯ ಹೊರಗೆ ನಿಂತಿರುವ ಸಿಸಿಟಿವಿ ದೃಶ್ಯ ವೈರಲ್ ಆಗಿತ್ತು. ಇದೇ ಮನೆಯಲ್ಲಿ ನಿಕ್ಕಿ ಬೆಂಕಿ ಹೊತ್ತಿಕೊಂಡ ಮೈಯಲ್ಲಿಯೇ ಹೊರಗೆ ಓಡಿಬಂದಿದ್ದರು. ಸಿಸಿಟಿವಿ ದೃಶ್ಯಾವಳಿಯ ನಂತರ ಕಾಂಚನ ತನ್ನ ಅಕ್ಕನ ಸಾವಿನ ಸಮಯದಲ್ಲಿ ಎಲ್ಲರೂ ಮನೆಯೊಳಗೇ ಇದ್ದರು ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಭಾರತದಂತಹ ಬಲಿಷ್ಠ ರಾಷ್ಟ್ರದೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳಬೇಡಿ: ಟ್ರಂಪ್ಗೆ ನಿಕ್ಕಿ ಹ್ಯಾಲಿ ಸಲಹೆ
ತನ್ನ ಅಕ್ಕನ ಸಾವಿನ ನಂತರ ಕಾಂಚನ ಇದುವರೆಗೂ ಕ್ಯಾಮೆರಾ ಮುಂದೆ ಬಂದು ಹೇಳಿಕೆ ನೀಡಿರಲಿಲ್ಲ. ಆಕೆಯ ಆರೋಗ್ಯ ಸರಿಯಾಗಿಲ್ಲ ಎಂದು ಕುಟುಂಬಸ್ಥರು ಹೇಳಿದ್ದರು. ಆದರೆ, ಕೊನೆಗೂ ಅವರು ಅಂದು ನಡೆದ ಘಟನೆಯ ಬಗ್ಗೆ ಪೂರ್ತಿ ವಿವರ ನೀಡಿದ್ದಾರೆ. “ಪೊಲೀಸ್ ಆಡಳಿತ ಮತ್ತು ಯೋಗಿ ಸರ್ಕಾರದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ನಾನು ನಾಪತ್ತೆಯಾಗಿದ್ದೇನೆ ಎಂದು ಹೇಳುತ್ತಿರುವವರು ಅಂತಹ ವಿಷಯಗಳನ್ನು ಹರಡಬಾರದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ನಾವು ಅವರ ಕೆಲಸವನ್ನು ನಂಬುತ್ತೇವೆ” ಎಂದು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಿಕ್ಕಿಯ ಸಾವಿನ ವೇಳೆ ವಿಪಿನ್ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ ಎಂಬ ಕುರಿತು ಸ್ಪಷ್ಟನೆ ನೀಡಿರುವ ಕಾಂಚನ, “ಸಿಲಿಂಡರ್ ಸ್ಫೋಟದಿಂದ ಸಾವು ಸಂಭವಿಸಿದೆಯೇ ಅಥವಾ ಇನ್ನೇನಾದರೂ ಸಂಭವಿಸಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೀವು ಅವರಿಂದಲೇ ಉತ್ತರಗಳನ್ನು ಪಡೆಯಿರಿ. ಆ ಘಟನೆ ವೇಳೆ ವಿಪಿನ್, ನಮ್ಮ ಮಾವ ಸತ್ವೀರ್, ಅತ್ತೆ ದಯಾ ಮತ್ತು ನನ್ನ ಗಂಡ ರೋಹಿತ್ ಎಲ್ಲರೂ ಮನೆಯೊಳಗೆ ಇದ್ದರು” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ನೊಯ್ಡಾ ವರದಕ್ಷಿಣೆ ಕಿರುಕುಳ ಪ್ರಕರಣ; ನಿಕ್ಕಿಯನ್ನು ಸುಟ್ಟು ಕೊಲ್ಲಲು 1 ತಿಂಗಳಿಂದ ರೆಡಿಯಾಗಿತ್ತು ಪ್ಲಾನ್!
ನಿಕ್ಕಿ ಭಾಟಿ ಕುಟುಂಬದ ಮನೆಯ ಹೊರಗೆ ಹಾಕಲಾಗಿರುವ ಸಿಸಿಟಿವಿ ವಿಡಿಯೋದಲ್ಲಿ, ಈ ಘಟನೆಯ ಸಮಯದಲ್ಲಿ ಮತ್ತು ಅದರ ನಂತರ 15 ನಿಮಿಷಗಳ ಕಾಲ ನಿಕ್ಕಿಯ ಗಂಡ ವಿಪಿನ್ ಮನೆಯ ಹೊರಗೆ ಕಾಣಿಸಿಕೊಂಡಿದ್ದರು. ಮನೆಯೊಳಗೆ ಕೂಡ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಘಟನೆ ನಡೆದ ಮೇಲೆ ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡಲಾಗಿದೆ. ನೆರೆಹೊರೆಯವರು ವಿಪಿನ್ ನಿರಪರಾಧಿ ಎಂದು ಹೇಳಿದ್ದಾರೆ. ನಿಕ್ಕಿಯ ಕುಟುಂಬ ವರದಕ್ಷಿಣೆಗಾಗಿ ನಡೆದ ಕೊಲೆ ಎಂದು ಆರೋಪಿಸಿದೆ. ಪೊಲೀಸರು ಇಡೀ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ. ತನಿಖೆಯ ನಂತರವೇ ಇಡೀ ಘಟನೆ ಬೆಳಕಿಗೆ ಬರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




