ಕತ್ತಲೆಯಿಂದ ಬೆಳಕಿನೆಡೆಗೆ; ಯುದ್ಧದ ಆಘಾತಕ್ಕೊಳಗಾದ ಉಕ್ರೇನ್ ಸೈನಿಕರಿಗೆ ಆರ್ಟ್ ಆಫ್ ಲಿವಿಂಗ್ನಿಂದ ಧ್ಯಾನ ಶಿಬಿರ
ಕಳೆದ 2 ವರ್ಷಗಳಿಂದ ರಷ್ಯಾದೊಂದಿಗಿನ ಉಕ್ರೇನ್‌ನ ಸಂಘರ್ಷವು ಇಡೀ ಜಗತ್ತಿನ ಆತಂಕವನ್ನು ಹೆಚ್ಚಿಸಿದೆ. ಯುದ್ಧದ ನಂತರ, ನಾಗರಿಕರು ಮತ್ತು ಸೈನಿಕರು ಅದರ ಪರಿಣಾಮದಿಂದ ಇನ್ನೂ ಹೊರಗೆ ಬಂದಿಲ್ಲ. ಹೀಗಾಗಿ, ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಉಕ್ರೇನ್‌ನ ದುಃಖಪೀಡಿತ ಸೈನಿಕರಿಗೆ ಭರವಸೆ, ಸುಧಾರಣೆಯ ಮೂಲಕ ಅವರಿಗೆ ಪರಿಹಾರ ಶಿಬಿರಗಳನ್ನು ತೆರೆದಿದೆ.

ನವದೆಹಲಿ, ಆಗಸ್ಟ್ 28: ಕ್ರೂರ ಯುದ್ಧದ ನೆರಳಿನಲ್ಲಿ, ಅವಶೇಷಗೊಳ್ಳುತ್ತಿರುವ ನಗರಗಳು ಮತ್ತು ಆಘಾತಕ್ಕೊಳಗಾದ ನಾಗರಿಕರ ಮಧ್ಯೆ ಶಾಂತಿ ಮತ್ತು ಅನುಕಂಪದಿಂದ ಕ್ರಾಂತಿಯೊಂದು ಸದ್ದಿಲ್ಲದೆಯೇ ಸುಧಾರಣೆಯನ್ನು ತರುತ್ತಿದೆ. ರವಿಶಂಕರ್ ಗುರೂಜಿ ನೇತೃತ್ವದ ಆರ್ಟ್ ಆಫ್ ಲಿವಿಂಗ್ (Art of Living) ಸಂಸ್ಥೆಯು, ಉಕ್ರೇನ್‌ನ ಯುದ್ಧದಿಂದ ಆಘಾತಕ್ಕೊಳಗಾಗಿರುವ ಅಲ್ಲಿನ ಸೈನಿಕರ ಜೊತೆ ನಿಂತಿದೆ. ಹಾಗಂತ ಈ ಸಂಸ್ಥೆ ಶಸ್ತ್ರಾಸ್ತ್ರಗಳೊಂದಿಗೆ ಅವರಿಗೆ ಬೆಂಬಲ ನೀಡುತ್ತಿಲ್ಲ. ಅದರ ಬದಲಾಗಿ, ಭರವಸೆ, ಸುಧಾರಣೆ ಮತ್ತು ಅವರ ಉಸಿರಾಟದ ಪ್ರಕ್ರಿಯೆಗಳೊಂದಿಗೆ ಅವರನ್ನು ಆ ಆಘಾತದಿಂದ ಹೊರಗೆ ಕರೆತರಲು ಪ್ರಯತ್ನಿಸುತ್ತಿದೆ.
ಉಕ್ರೇನಿಯನ್ ಸೇನಾ ಅಧಿಕಾರಿಗಳು ಮೊದಲ ಬಾರಿಗೆ ಆರ್ಟ್ ಆಫ್ ಲಿವಿಂಗ್ ಆಘಾತ-ಪರಿಹಾರ ಶಿಬಿರಕ್ಕೆ ಕಾಲಿಟ್ಟಾಗ ಆ ದೃಶ್ಯ ಭಯಾನಕವಾಗಿತ್ತು. “ಅವರನ್ನು ನೋಡಿ ನನ್ನ ಹೃದಯ ಕುಗ್ಗಿಹೋಯಿತು. ಅವರ ಕೈಗಳು, ಕಾಲುಗಳು ಮತ್ತು ಬೆನ್ನಿನಲ್ಲಿ ಗಾಯಗಳಾಗಿದ್ದವು. ಅವರ ಕಣ್ಣುಗಳಲ್ಲಿನ ಭಯ ಮತ್ತು ಶೂನ್ಯತೆಯ ಭಾವ ನನ್ನ ಮೇಲೆ ಭಾರ ಹೇರಿತು” ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಂತರ ಅವರು ಆರ್ಟ್ ಆಫ್ ಲಿವಿಂಗ್‌ನ ಉಸಿರಾಟದ ಪ್ರಕ್ರಿಯೆ ಮತ್ತು ಧ್ಯಾನವನ್ನು ಕಲಿತ ಮೇಲೆ, ಅಸಾಮಾನ್ಯ ರೀತಿಯಲ್ಲಿ ಅವರಲ್ಲಿ ಸುಧಾರಣೆ ಕಾಣತೊಡಗಿತು. ಇದೇ ಅಧಿಕಾರಿಗಳು ಶಿಬಿರದ ನಂತರ ತಾವು “ಶಾಂತಿ, ವಿಶ್ರಾಂತಿ, ಸುರಕ್ಷಿತ ಮತ್ತು ಕೇಂದ್ರೀಕೃತವಾದ ಭಾವನೆಗಳನ್ನು” ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲಿನ ಜನರಲ್ಲಿ ಯುದ್ಧದ ಗೋಚರ ಪರಿಣಾಮಗಳಾದ ಶೂನ್ಯತೆ, ಕೋಪ ಮತ್ತು ದುಃಖ ಕಡಿಮೆಯಾಗಲು ಪ್ರಾರಂಭಿಸಿದೆ.
ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್‌ನ ಪರಿಶ್ರಮದಿಂದ ಮಹಿಮಾಪುರ ಗುಡ್ಡ ಈಗ ಹಸಿರುಮಯ
ಇದರ ಪರಿಣಾಮವು ಎಷ್ಟು ಗಹನವಾಗಿತ್ತೆಂದರೆ, ಉಕ್ರೇನ್‌ನ ಮಿಲಿಟರಿ ನಾಯಕರು ರವಿಶಂಕರ್ ಅವರ ಕೆಲಸವನ್ನು ಸಾರ್ವಜನಿಕವಾಗಿ ಗುರುತಿಸಿ, ಗೌರವಿಸಿದರು. ಅಲ್ಲಿನ ಬೆಟಾಲಿಯನ್ ಕಮಾಂಡರ್ ಸ್ವತಃ ರವಿಶಂಕರ್ ಅವರ ಮುಂದೆ ನಿಂತು, ಗೌರವ ಪ್ರಶಸ್ತಿಯನ್ನು ನೀಡಿದರು. ಆ ಸಮಯದಲ್ಲಿ ಅವರು ತಮ್ಮ ಸೈನಿಕರ ಪರವಾಗಿ ಮಾತನಾಡುತ್ತಾ, “ಗುರುದೇವ್! ನಮ್ಮ ಸೈನಿಕರು ನಿಮ್ಮಿಂದ ಪಡೆದ ಜ್ಞಾನ ಮತ್ತು ಉಸಿರಾಟದ ಪ್ರಕ್ರಿಯೆಗಳಿಗೆ ನಾವು ಅಭಾರಿಗಳಾಗಿದ್ದೇವೆ. ನಮ್ಮ ದೇಶದ ಮೇಲೆ ಬಾಂಬ್‌ಗಳು ಬಿದ್ದಾಗ ನಾವೆಲ್ಲರೂ ಸತ್ಪ್ರಜೆಗಳಾಗಿ ದೇಶಕ್ಕಾಗಿ ಹೋರಾಡಲು ಸಜ್ಜಾದೆವು. ಆದರೆ ಯುದ್ಧದ ಇನ್ನೊಂದು ಮುಖದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಯುದ್ಧಾನಂತರದಲ್ಲಿ ಅದರಿಂದ ಉಂಟಾದ ನಷ್ಟದಿಂದ ನಾವು ಅನುಭವಿಸುವ ಕೋಪ, ದ್ವೇಷ, ಹತಾಶೆ ಮತ್ತು ಅಪಾರ ಶೂನ್ಯತೆಯ ತೀವ್ರತೆ ನಮ್ಮನ್ನು ದಿನದ 24 ಗಂಟೆಗಳೂ ಕಾಡುತ್ತದೆ. ಆದರೆ ಆರ್ಟ್ ಆಫ್ ಲಿವಿಂಗ್‌ನ ಶಿಬಿರದ ನಂತರ, ನಮ್ಮ ಜೀವನವು ಬದಲಾಗಲು ಪ್ರಾರಂಭಿಸಿದೆ. ಗಂಭೀರವಾದ ದೈಹಿಕ ಗಾಯಗಳನ್ನು ಹೊಂದಿರುವವರು ಸಹ ಈಗ ತಮ್ಮ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅವರ ಕಣ್ಣುಗಲ್ಲಿ ಈಗ ಮತ್ತೆ ಜೀವನದ ಬಗ್ಗೆ ಉತ್ಸಾಹವು ತುಂಬಿದೆ.” ಎಂದಿದ್ದಾರೆ.
ಈ ಮನ್ನಣೆ ಆರ್ಟ್ ಆಫ್ ಲಿವಿಂಗ್ ಕಲಿಸುವ ‘ನಾಯಕತ್ವ ತರಬೇತಿ ಕಾರ್ಯಕ್ರಮ’ಗಳಿಗೆ ಸಹ ವಿಸ್ತರಿಸಿದೆ. ಈ ಕಾರ್ಯಕ್ರಮಗಳು, ಉಕ್ರೇನಿಯನ್ ಮಿಲಿಟರಿ ನಾಯಕರಲ್ಲಿ ನಾಯಕತ್ವ ಮತ್ತು ಅಪಾಯದ ಅನಿರೀಕ್ಷಿತ ಪರಿಸ್ಥಿತಿಗಳಲ್ಲಿ ಉತ್ತಮ ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಉಕ್ರೇನಿಯನ್ ಮಿಲಿಟರಿ ಆರ್ಟ್ ಆಫ್ ಲಿವಿಂಗ್‌ನ ಈ ಬೆಂಬಲವನ್ನು ಶ್ಲಾಘಿಸಿದೆ.
2022ರಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸೈನಿಕರು, ಸ್ಥಳಾಂತರಗೊಂಡ ನಾಗರಿಕರು ಮತ್ತು ಆಕ್ರಮಿತ ಪ್ರದೇಶಗಳ ಮಕ್ಕಳನ್ನು ಒಳಗೊಂಡಂತೆ 8,000ಕ್ಕೂ ಹೆಚ್ಚು ಜನರಿಗೆ ಈ ಪ್ರಕ್ರಿಯೆಗಳನ್ನು ತಮ್ಮ ಶಿಬಿರಗಳ ಮೂಲಕ ಕಲಿಸಿದೆ. ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅಗತ್ಯವಿರುವಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




