ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೆ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿ ಮನೆಕೆಲಸದಾಕೆ ಮನೆಯಲ್ಲಿ ಹಿಟ್ಟು ಮತ್ತು ಪಾತ್ರೆಗಳಲ್ಲಿ ಮೂತ್ರವನ್ನು ಬೆರೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದೀಗ ಕೋಮು ಹೇಳಿಕೆಯೊಂದಿಗೆ ಪುನಃ ಈ ವಿಡಿಯೋ ಹರಿದಾಡುತ್ತಿದ್ದು, ಮನೆಗೆಲಸದಾಕೆ ಮುಸ್ಲಿಂ ಎಂದು ಹೇಳಲಾಗುತ್ತಿದೆ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಉಗುಳಿನ ಬಳಿಕ ಈಗ ಮೂತ್ರ ಜಿಹಾದ್ ಶುರುವಾಗಿದೆ. ಗಾಜಿಯಾಬಾದ್‌ನಲ್ಲಿ ಮುಸ್ಲಿಂ ಮನೆಕೆಲಸದಾಕೆ ಪಾತ್ರೆಯೊಂದರಲ್ಲಿ ಮೂತ್ರ ಮಾಡಿ ಅದರಲ್ಲಿಯೇ ರೊಟ್ಟಿ ತಯಾರಿಸಿರುವ ಆಘಾತಕಾರಿ ಘಟನೆ ಮನೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
ಉಗುಳಿನ ಬಳಿಕ ಈಗ ಮೂತ್ರ ಜಿಹಾದ್ ಶುರುವಾಗಿದೆ. ಗಾಜಿಯಾಬಾದ್‌ನಲ್ಲಿ ಮುಸ್ಲಿಂ ಮನೆಕೆಲಸದಾಕೆ ಪಾತ್ರೆಯೊಂದರಲ್ಲಿ ಮೂತ್ರ ಮಾಡಿ ಅದರಲ್ಲಿಯೇ ರೊಟ್ಟಿ ತಯಾರಿಸಿರುವ ಆಘಾತಕಾರಿ ಘಟನೆ ಮನೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. pic.twitter.com/pGleJt9sOP
— ಅರುಣ್ ಕುಮಾರ್ ಹಿಂದೂ 🚩 (@arukumrhin11669) October 17, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಗೂಗಲ್ ಓಪನ್ ಸರ್ಚ್ ಟೂಲ್ ಅನ್ನು ಬಳಸಿ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ನಾವು ಈ ಘಟನೆಗೆ ಸಂಬಂಧಿಸಿದಂತೆ ಅನೇಕ ಸುದ್ದಿಯನ್ನು ಕಂಡುಕೊಂಡಿದ್ದೇವೆ. ಇದರಲ್ಲಿ ಟಿವಿ9 ಕನ್ನಡ ಪ್ರಕಟಿಸಿದೆ ಸುದ್ದಿ ಕೂಡ ಸಿಕ್ಕಿತು.
ಅಕ್ಟೋಬರ್ 16, 2024 ರಂದು ಟಿವಿ9 ಕನ್ನಡ ‘ಮೂತ್ರ ಬೆರೆಸಿ ರೊಟ್ಟಿ ತಯಾರಿಸುತ್ತಿರುವ ವೇಳೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಮನೆಕೆಲಸದಾಕೆ; ವೈರಲ್ ಆಯ್ತು ವಿಡಿಯೋ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದ್ದು, ಇಲ್ಲಿನ ಥಾನಾ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದ ಫ್ಲಾಟ್ ಒಂದರಲ್ಲಿ ವಾಸವಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಕೆಲಸದಾಕೆ ತನ್ನ ಮೂತ್ರ ಬೆರೆಸಿ ರೊಟ್ಟಿ ತಯಾರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ರೀನಾ ಹೆಸರಿನ ಆ ಮಹಿಳೆ ಕಳೆದ 8 ವರ್ಷದಿಂದ ಈ ಉದ್ಯಮಿಯ ಮನೆಯಲ್ಲಿಯೇ ಕೆಲಸವನ್ನು ಮಾಡುತ್ತಿದ್ದು, ಇದೀಗ ಆಕೆ ಉಂಡ ಮನೆಗೆಯೇ ದ್ರೋಹ ಬಗೆಯುವ ಕೆಲಸವನ್ನು ಮಾಡಿದ್ದಾಳೆ ಎಂದು ಬರೆಯಲಾಗಿದೆ.
ಇನ್ನು ಹುಡುಕಾಟದ ಸಮಯದಲ್ಲಿ, ಎಎನ್‌ಐನ ಅಧಿಕೃತ ಹ್ಯಾಂಡಲ್‌ನಲ್ಲಿ ಆರೋಪಿ ರೀನಾ ಅವರ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಇದಲ್ಲದೇ ಗಾಜಿಯಾಬಾದ್ ವೇವ್ ಸಿಟಿಯ ಎಸಿಪಿ ಲಿಪಿ ನಾಗೈಚ್ ಅವರ ಹೇಳಿಕೆ ನಮಗೆ ಸಿಕ್ಕಿದೆ. ಇದರಲ್ಲಿಯೂ ಆರೋಪಿ ಮಹಿಳೆಯ ಹೆಸರು ರೀನಾ ಎಂದು ನಮೂದಿಸಲಾಗಿದೆ.
#WATCH | Uttar Pradesh: A woman, identified by Police as Reena, arrested by Crossings Republic PS team for allegedly mixing urine to make flour dough at a flat in a residential society in Ghaziabad.
(Video: Ghaziabad Police) pic.twitter.com/I0gXGfFcRv
— ANI (@ANI) October 16, 2024
ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಪ್ರತಿ ಕೂಡ ನಮಗೆ ಸಿಕ್ಕಿದೆ. ಇದರ ಪ್ರಕಾರ ಅಕ್ಟೋಬರ್ 14 ರಂದು ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ಸಂಖ್ಯೆ 0391/2024 ರ ಪ್ರಕಾರ ಆರೋಪಿ ಮಹಿಳೆಯ ಹೆಸರನ್ನು ರೀನಾ ಎಂದು ನಮೂದಿಸಲಾಗಿದ್ದು, ಗಂಡನ ಹೆಸರನ್ನು ಪ್ರಮೋದ್ ಕುಮಾರ್ ಎಂದು ಬರೆಯಲಾಗಿದೆ.
ಹೀಗಾಗಿ ಟಿವಿ9 ಕನ್ನಡ ತನಿಖೆಯಿಂದ ವೈರಲ್ ಆಗುತ್ತಿರುವ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ ಎಂಬುದು ಕಂಡುಬಂದಿದೆ. ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್‌ನಲ್ಲಿ ಆಹಾರದಲ್ಲಿ ಮೂತ್ರವನ್ನು ಬೆರೆಸಿದ ಮಹಿಳೆಯ ಹೆಸರು ರೀನಾ. ಘಟನೆಯಲ್ಲಿ ಯಾವುದೇ ಕೋಮುವಾದಿ ಕೋನ ಇಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.
Published On - 6:28 pm, Fri, 18 October 24