Fact Check: ಉತ್ತರ ಪ್ರದೇಶದಲ್ಲಿ ರೌಡಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಕಲಬುರಗಿಯ ವಿಡಿಯೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 03, 2024 | 9:43 AM

ಜನನಿಬಿಡ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸುತ್ತ ನಿಂತಿದ್ದ ಜನರಿಗೆ ಚಾಕುವನ್ನು ತೋರಿಸುತ್ತಿರುವಾಗ ಪೊಲೀಸರು ಗುಂಡು ಹಾರಿಸಿದ ವಿಡಿಯೋ ವೈರಲ್ ಆಗುತ್ತಿದ್ದು, ಇದು ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಕರ್ನಾಟಕದಲ್ಲಿ ನಡೆದ ಘಟನೆ ಆಗಿದೆ.

Fact Check: ಉತ್ತರ ಪ್ರದೇಶದಲ್ಲಿ ರೌಡಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಕಲಬುರಗಿಯ ವಿಡಿಯೋ ವೈರಲ್
ವೈರಲ್​​​​ ವಿಡಿಯೋ (Fact Check)
Follow us on

ಜನನಿಬಿಡ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಕಾಲಿಗೆ ಗುಂಡು ಹಾರಿಸಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್ ಅವರ ಸರ್ಕಾರದಿಂದ ನಡೆದಿದೆ ಎಂದು ಹೇಳುತ್ತಿದ್ದಾರೆ. ಆದರೆ, ಈ ಸುದ್ದಿಯ ನಿಜಾಂಶ ಬೇರೆಯೇ ಇದೆ. ಸುಳ್ಳು ಹೇಳಿಕೆಯೊಂದಿಗೆ ಇದೀಗ ವಿಡಿಯೋ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವುದು ಏನು?

ಸೆಪ್ಟೆಂಬರ್ 27, 2024 ರಿಂದ ಈ ವೈರಲ್ ಎಕ್ಸ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ‘‘ಉತ್ತರ ಪ್ರದೇಶದಲ್ಲಿ ರೌಡಿಸಂನಿಂದ ಮೆರೆಯುವ ಯಾವುದೇ ಪುಂಡನಿಗೂ ಯೋಗಿ ಆದಿಥ್ಯನಾಥ್ ಇರೋ ತನಕ ಇದೇ ಚಿಕಿತ್ಸೆ. ಉತ್ತರ ಪ್ರದೇಶದ ಸಹರಾನ್‌ಪುರದ ಸಂಡೇ ಮಾರ್ಕೆಟ್‌ನಲ್ಲಿ ಆ ಊರಿನ ರೌಡಿ ಅಬ್ದುಲ್ ಗಫಾರ್ ಸಾರ್ವಜನಿಕರಿಗೆ ಚಾಕು ತೋರಿಸಿ ಬೆದರಿಸುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ಮುದ್ದಾದ ಚಿಕಿತ್ಸೆ ನೀಡಿದ್ದಾರೆ…’’ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Fact Check:

ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ವಿಡಿಯೋದಲ್ಲಿ ನೀಡಿರುವ ಹೇಳಿಕೆ ತಪ್ಪುದಾರಿಗೆಳೆಯುವಂತಿವೆ ಎಂದು ಕಂಡುಹಿಡಿದಿದೆ. ಈ ವಿಡಿಯೋ ಇತ್ತೀಚಿನ ಘಟನೆಯಲ್ಲ, ಕಳೆದ ವರ್ಷ ಕಲಬುರಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಘಟನೆಯಾಗಿದೆ.

ಸತ್ಯವನ್ನು ತಿಳಿಯಲು, ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್​​ನಲ್ಲಿ ಹುಡುಕಲು ಪ್ರಾರಂಭಿಸಿದ್ದೇವೆ. ಆಗ ಸ್ವತಃ ಟಿವಿ9 ಕನ್ನಡ ವೆಬ್​ವೈಟ್ ಈ ಕುರಿತು ಸುದ್ದಿ ಪ್ರಕಟಿಸಿರುವುದು ಸಿಕ್ಕಿತು. ‘ಕಲಬುರಗಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಮೇಲೆ ಫೈರಿಂಗ್‌’ ಎಂಬ ಹೆಡ್​ಲೈನ್​ನೊಂದಿಗೆ ಫೆಬ್ರವರಿ 5, 2023 ರಂದು ಸುದ್ದಿ ಪಬ್ಲಿಶ್ ಆಗಿದೆ.

ಕಲಬುರಗಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಮೇಲೆ ಫೈರಿಂಗ್‌

ಇದರಲ್ಲಿರುವ ಮಾಹಿತಿಯ ಪ್ರಕಾರ, ಮಾರಕಾಸ್ತ್ರಗಳನ್ನು ಹಿಡಿದ ಜನಬಿಡ ಪ್ರದೇಶಕ್ಕೆ ಬಂದ ವ್ಯಕ್ತಿಯೊಬ್ಬ ಸಾರ್ವಜನಿಕಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ತಿಳಿದ ಚೌಕ್ ಠಾಣೆ ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಗಂಡೇಟು ತಿಂದ ಆರೋಪಿ ಅಬ್ದುಲ್ ಜಾಫರ್ ಪೊಲೀಸರು ಜಿಮ್ಸ್ ಆಸ್ಪತ್ರೆಗೆ ಸೇರಿಸಿದ್ದು, ಚೇತರಿಕೆ ನಂತರ ಜೈಲಿಗಟ್ಟಲಿದ್ದಾರೆ.

ತಮ್ಮ ಮೇಲೆ ದಾಳಿ ಮಾಡುವ ವಾತಾವರಣ ತಿಳಿದ ಪಿಎಸ್​ಐ ತಮ್ಮ ಹಾಗೂ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸುತ್ತಾರೆ. ಇದಕ್ಕೂ ಜಗ್ಗದಿದ್ದಾಗ ಪಿಎಸ್​ಐ ವಹೀದ್ ಕೊತ್ವಾಲ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಸ್ಥಳದಲ್ಲಿ ಕುಸಿದುಬಿದ್ದ ಆರೋಪಿಗೆ ಪೊಲೀಸರು ಹಿಗ್ಗಾಮುಗ್ಗ ಲಾಠಿ ರುಚಿ ತೋರಿಸಿದರು. ಬಳಿಕ ವಶಕ್ಕೆ ಪಡೆದು ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಎಂಬ ಮಾಹಿತಿ ಇದರಲ್ಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಹಿಂದೂ ಹುಡುಗಿಯರನ್ನು ಲಿಫ್ಟ್​ನಲ್ಲಿ ಕಿಡ್ನಾಪ್ ಮಾಡಿದ ಸುದ್ದಿ ನಿಜವೇ?

ನಾವು ಕಲಬುರಗಿ ವರದಿಗಾರರನ್ನು ಕೂಡ ಸಂಪರ್ಕಿಸಿದ್ದೆವು. ವೈರಲ್ ಆಗಿರುವ ವಿಡಿಯೋ ಬಗ್ಗೆ ಹೇಳುತ್ತಿರುವ ಆರೋಪಗಳು ಸುಳ್ಳು ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಒಂದರಲ್ಲಿ ನಡೆದ ಘಟನೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆತ್ಮರಕ್ಷಣೆಗಾಗಿ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಹೀಗಾಗಿ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಆಯುಧ ತೋರಿಸಿ ಬೆದರಿಸುವ ವಿಡಿಯೋ ಉತ್ತರ ಪ್ರದೇಶದ್ದಲ್ಲ. ಇದು ಕಳೆದ ವರ್ಷ ಕರ್ನಾಟಕದ ಕಲಬುರಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಘಟನೆಯಾಗಿದೆ ಎಂದು ಟಿವಿ9 ಕನ್ನಡ ಖಚಿತ ಪಡಿಸುತ್ತದೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ