ಬಿಹಾರದ ಬಲ್ರಾಮ್ಪುರದಲ್ಲಿ ಐದನೇ ಬಾರಿ ಶಾಸಕರಾಗಿ ಆಯ್ಕೆಯಾದ ಸಿಪಿಐ(ಎಂ)(ಎಲ್) ಪಕ್ಷದ ಮೆಹಬೂಬ್ ಅಲಮ್ ಅವರ ಮಗ ಚಿಕ್ಕ ಮನೆಯಲ್ಲಿ ಶುಭಾಶಯ ಕೋರುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಅಲ್ಲದೇ ಅಲನ್ ಸರಳ ಜೀವಿ, ಸ್ವಂತ ಮನೆಯೂ ಇಲ್ಲದ ಶಾಸಕ ಎಂಬ ವರದಿಗಳು ಆಂಗ್ಲ ಸುದ್ದಿತಾಣಗಳಲ್ಲಿ ಹರಿದಾಡುತ್ತಿವೆ.
ಈ ಮಾಹಿತಿಯ ಸತ್ಯಾಸತ್ಯತೆಯನ್ನು ಬೆನ್ನತ್ತಿದ ಟಿವಿ9 ಡಿಜಿಟಲ್ ತಂಡಕ್ಕೆ ಹಲವು ಅಚ್ಚರಿಯ ಮಾಹಿತಿಗಳು ಲಭಿಸಿತು. ಈ ಬಾರಿ ಚುನಾವಣೆಯಲ್ಲಿ ಅವರು ಘೋಷಿಸಿದ ಆಸ್ತಿಯ ಮೌಲ್ಯ 31.8 ಲಕ್ಷ. 2015ರ ಬಿಹಾರ ವಿಧಾನಸಭೆ ಚುನಾವಣೆಗಿಂತ ಅವರ ಆಸ್ತಿ 8.84 ಲಕ್ಷ ಏರಿಕೆಯಾಗಿದೆ! ಸ್ವಂತ ಮನೆ ಇಲ್ಲದಿದ್ದರೂ ಅಲನ್ ಅವರು ಲಕ್ಷಾಧೀಶ್ವರರೇ.
ಅಬ್ಬಬ್ಬಾ..ಎಷ್ಟೆಲ್ಲಾ ಕೇಸ್!
ಅಲನ್ ಅವರ ಕ್ರಿಮಿನಲ್ ಹಿನ್ನೆಲೆ ತಿಳಿದರೆ ನೀವು ನಿಜಕ್ಕೂ ದಂಗಾಗುತ್ತೀರಿ!. ಬಿಹಾರದಲ್ಲಿ ಆಯ್ಕೆಯಾದ ಶೇ.70 ಎಂಎಲ್ಎಗಳಿಗೆ ಶುದ್ಧಾಂಗ ಅಪರಾಧ ಹಿನ್ನೆಲೆಯಿದೆ. ಅಲನ್ ಅವರೂ ಈ ಲೆಕ್ಕದಲ್ಲಿ ಹಿಂದೆಬಿದ್ದಿಲ್ಲ. 2015ರಲ್ಲಿ ಚುನಾವಣೆಗೆ ನಿಲ್ಲುವಾಗ 3 ಕೊಲೆ ಆರೋಪವೂ ಸೇರಿ 13 ಅಪರಾಧಗಳನ್ನು ಅಫಿಡವಿಟ್ನಲ್ಲಿ ಘೋಷಿಸಿದ್ದರು. ಈಬಾರಿ ಈ ಸಂಖ್ಯೆಯಲ್ಲೂ ಪ್ರಗತಿ ಕಂಡಿದೆ. ಒಟ್ಟು 28 ಪ್ರಕರಣಗಳಲ್ಲಿ ಮೆಹಬೂಬ್ ಅಲನ್ ಆರೋಪಿಯಾಗಿದ್ದಾರೆ.
ಅಫಿಡವಿಟ್ನಲ್ಲಿ ಕೃಷಿಕರೆಂದು ಅಲನ್ ಘೋಷಿಸಿಕೊಳ್ಳುತ್ತಾರೆ. ಅವರ ಮೇಲಿನ ಆರೋಪಗಳನ್ನು ಗಮನಿಸಿದರೆ ಕೊಲೆ, ದಂಗೆಗೆ ಪ್ರಚೋದನೆ, ಅಧಿಕಾರಿಗಳಿಗೆ ದೈಹಿಕ ಹಲ್ಲೆ ಪ್ರಕರಣಗಳು ಕಾಣಸಿಗುತ್ತವೆ. 2014ರ ಲೋಕಸಭೆ ಚುನಾವಣೆಗೆ ಕಾತಿಹಾರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವರನ್ನು ಕೊಲೆ ಪ್ರಕರಣದಲ್ಲಿ ನಾಮಿನೇಶನ್ ಫೈಲ್ ಮಾಡಿದ ನಂತರ ಪೋಲೀಸರು ಬಂಧಿಸಿದ್ದರು.
ಬಿಹಾರ ಸಿಪಿಐ(ಎಂ)(ಎಲ್) ನ ರಾಜ್ಯ ಶಾಖೆಯ ಸದಸ್ಯರೂ ಆದ ಅವರನ್ನು ಪಕ್ಷ ಸಮರ್ತಿಸಿಕೊಂಡಿದೆ. ಮೆಹಬೂಬ್ ಅಲನ್ ಅವರನ್ನು ವ್ಯವಸ್ಥಿತ ಸಂಚಿಗೆ ಗುರಿಪಡಿಸಲಾಗುತ್ತಿದೆ. ಹೀಗಾಗಿಯೇ ಅವರ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿಕೆ ನೀಡಿದೆ.