
(ಬೆಂಗಳೂರು ಮಾ: 05): ಫೆಬ್ರವರಿ 26 ರ ಮಹಾಶಿವರಾತ್ರಿಯಂದು ರಾಜಮನೆತನದ ಸ್ನಾನದೊಂದಿಗೆ ಮಹಾ ಕುಂಭಮೇಳವು (Mahakumbh Mela) ಮುಕ್ತಾಯಗೊಂಡಿದೆ. 45 ದಿನಗಳ ಕಾಲ ನಡೆದ ಮಹಾಕುಂಭ ಮೇಳಕ್ಕೆ ಅದ್ಧೂರಿ ತೆರೆಬಿದ್ದಿತು. ಇದೀಗ 20 ಸೆಕೆಂಡುಗಳ ವಿಡಿಯೋ ಕ್ಲಿಪ್ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ, ಲೆಕ್ಕಕ್ಕೆ ಸಿಗದಷ್ಟು ಆಮೆಗಳು ನೀರಿನಿಂದ ದಡದ ಕಡೆಗೆ ಬರುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ಈ ವಿಡಿಯೋ ತುಣುಕನ್ನು ಮಹಾ ಕುಂಭಕ್ಕೆ ಲಿಂಕ್ ಮಾಡುವ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಮಹಾ ಕುಂಭಮೇಳ ಮುಗಿದ ತಕ್ಷಣ, ಪ್ರಯಾಗ್ರಾಜ್ನಲ್ಲಿ ಆಮೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಲು ಪ್ರಾರಂಭಿಸಿದವು ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, “ಕುಂಭಮೇಳ ಮುಗಿದ ನಂತರ ಈ ಹಠಾತ್ ಘಟನೆಯನ್ನು ನೋಡಿ” ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘‘ಕುಂಭಮೇಳ ಮುಗಿದ ನಂತರ, ಲಕ್ಷಾಂತರ ಆಮೆಗಳು ಗಂಗಾ ನದಿಯ ದಡದಲ್ಲಿ ಮುಕ್ತವಾಗಿ ವಿಹರಿಸುತ್ತಿರುವುದು ಕಂಡುಬಂದಿದೆ’’ ಎಂದು ಹೇಳುತ್ತಿದ್ದಾರೆ. ಅನೇಕ ಬಳಕೆದಾರರು ಇದನ್ನು ನಿಜವೆಂದು ಪರಿಗಣಿಸಿ ವೈರಲ್ ಮಾಡುತ್ತಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ ಎಂದು ಕಂಡುಬಂದಿದೆ. ಒಡಿಶಾದ ವಿಡಿಯೋವನ್ನು ಮಹಾಕುಂಭ ಮೇಳಕ್ಕೆ ಲಿಂಕ್ ಮಾಡುವ ಮೂಲಕ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ.
Fact Check: ಮಹಾ ಶಿವರಾತ್ರಿಯ ಹಿಂದಿನ ದಿನ ಮಹಾ ಕುಂಭದಲ್ಲಿ ವಾಯುಪಡೆಯ ಜೆಟ್‌ಗಳು ತ್ರಿಶೂಲಾಕಾರದಲ್ಲಿ ಹಾರಾಡಿವೆಯೇ?
ಸತ್ಯವನ್ನು ಕಂಡುಹಿಡಿಯಲು ನಾವು ವೈರಲ್ ಕ್ಲಿಪ್‌ನ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಇನ್ಸ್ಟಾಗ್ರಾಮ್ ಬಳಕೆದಾರರ ಖಾತೆಯಲ್ಲಿ ಫೆಬ್ರವರಿ 23 ರಂದು ಪೋಸ್ಟ್ ಮಾಡಲಾದ ಇದೇ ವಿಡಿಯೋ ಸಿಕ್ಕಿದೆ. ಇದರಲ್ಲಿ ಒಡಿಶಾ ಎಂದು ಬರೆಯಲಾಗಿದೆ. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಸುಮಾರು 7 ಲಕ್ಷ ಆಲಿವ್ ರಿಡ್ಲಿ ಆಮೆಗಳು ಕಂಡುಬಂದಿವೆ ಎಂಬ ಮಾಹಿತಿ ಇದರಲ್ಲಿದೆ.
ತನಿಖೆಯನ್ನು ಮತ್ತಷ್ಟು ಮುಂದುವರಿಸಿದಾಗ ದಿ ಬೆಟರ್ ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್ ಈ ಕ್ಲಿಪ್ ಅನ್ನು ಕಿರುಚಿತ್ರವಾಗಿ ಅಪ್‌ಲೋಡ್ ಮಾಡಿ ಏಳು ಲಕ್ಷ ಆಲಿವ್ ರಿಡ್ಲಿ ಆಮೆಗಳು ಒಡಿಶಾಗೆ ಬಂದಿವೆ ಎಂದು ಹೇಳಿದೆ. ಈ ಕಿರು ವೀಡಿಯೊವನ್ನು ಫೆಬ್ರವರಿ 25, 2025 ರಂದು ಅಪ್‌ಲೋಡ್ ಮಾಡಲಾಗಿದೆ.
ಇದೇ ಸಂದರ್ಭ ಟಿವಿ9 ತೆಲುಗು ವೈರಲ್ ವೀಡಿಯೊಕ್ಕೆ ಹೋಲಿಕೆಯಾಗುವ ಸ್ಕ್ರೀನ್ ಶಾಟ್ ಬಳಸಿಕೊಂಡು ಫೆಬ್ರವರಿ 26 ರಂದು ಸುದ್ದಿ ಪ್ರಕಟಿಸಿರುವುದು ಕಂಡುಬಂದಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ನದಿಯ ಮುಖಭಾಗದಲ್ಲಿ 6.82 ಲಕ್ಷಕ್ಕೂ ಹೆಚ್ಚು ಆಮೆಗಳು ಮೊಟ್ಟೆ ಇಡಲು ಒಟ್ಟುಗೂಡಿದ್ದವು. 2024 ಮತ್ತು 2023 ರಲ್ಲಿ, ಈ ಸಂಖ್ಯೆ ಸುಮಾರು 6.37 ಲಕ್ಷವಾಗಿದ್ದರೆ, 2022 ರಲ್ಲಿ, 5.50 ಲಕ್ಷ ಆಮೆಗಳು ಮೊಟ್ಟೆ ಇಡಲು ಅಲ್ಲಿ ಒಟ್ಟುಗೂಡಿದವು. ಈ ಅಳಿವಿನಂಚಿನಲ್ಲಿರುವ ಆಮೆಗಳು ಈ ವರ್ಷ ಫೆಬ್ರವರಿ 16 ರಿಂದ ಫೆಬ್ರವರಿ 25 ರ ನಡುವೆ ಮೊಟ್ಟೆಗಳನ್ನು ಇಟ್ಟವು. ನ್ಯೂ ಪೋಡಂಪೇಟೆಯಿಂದ ಪ್ರಯಾಗಿವರೆಗಿನ ಸುಮಾರು 9 ಕಿ.ಮೀ ಪ್ರದೇಶದಲ್ಲಿ ಆಮೆಗಳು ಗೂಡುಕಟ್ಟುತ್ತಿವೆ. ಅರಣ್ಯ ಇಲಾಖೆಯು ಅವುಗಳ ಮೊಟ್ಟೆಗಳನ್ನು ಪರಭಕ್ಷಕಗಳಿಂದ ರಕ್ಷಿಸಲು ಕಡಲತೀರದ ಉದ್ದಕ್ಕೂ ಬೇಲಿಯನ್ನು ಅಳವಡಿಸಿದೆ. ಪ್ರತಿ ಆಮೆ 50 ರಿಂದ 100 ಮೊಟ್ಟೆಗಳನ್ನು ಇಡುತ್ತದೆ. ಅವುಗಳ ಕಾವು ಕಾಲಾವಧಿ ಸುಮಾರು 45 ದಿನಗಳು. ಅಲ್ಲಿಯವರೆಗೆ ಮೊಟ್ಟೆಗಳನ್ನು ರಕ್ಷಿಸಲು ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಕಲ್ಲಿಕೋಟೆ ಶ್ರೇಣಿ ಅಧಿಕಾರಿ ದಿಬ್ಯಾ ಶಂಕರ್ ಬೆಹೆರಾ ಹೇಳಿದರು’’ ಎಂದು ಬರೆಯಲಾಗಿದೆ.
ಅಲ್ಲದೆ, ವೈರಲ್ ವಿಡಿಯೋದಲ್ಲಿ ಒಂದು ಬ್ಯಾನರ್ ಕೂಡ ಗೋಚರಿಸುತ್ತದೆ. ಅದರ ಮೇಲೆ ಒಡಿಶಾ ಸರ್ಕಾರ ಮತ್ತು ಆಲಿವ್ ರಿಡ್ಲಿ ಸಮುದ್ರ ಆಮೆ ಸಂರಕ್ಷಣಾ ಶಿಬಿರ, ಪೊಡಂಪೇಟ ಎಂದು ಬರೆಯಲಾಗಿದೆ. ಪೊಡಂಪೇಟವು ಒಡಿಶಾದ ಗಂಜಾಂ ಜಿಲ್ಲೆಯಲ್ಲಿದೆ, ಅಲ್ಲಿ ರುಸಿಕುಲ್ಯ ನದೀಮುಖ ಬೀಚ್ ಇದೆ. ಈ ಬ್ಯಾನರ್ ಅನ್ನು ಅದೇ ಬೀಚ್‌ನಲ್ಲಿ ಇರಿಸಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಒಡಿಶಾದಲ್ಲಿ ದಡಕ್ಕೆ ಬಂದ ಆಮೆಗಳ ವಿಡಿಯೋವನ್ನು ಪ್ರಯಾಗ್‌ರಾಜ್ ಮಹಾಕುಂಭ ಹೆಸರಿನಲ್ಲಿ ಸುಳ್ಳು ಮಾಹಿತಿ ಹರಡಲು ವೈರಲ್ ಮಾಡಲಾಗುತ್ತಿದೆ ಎಂದು ಟಿವಿ9 ಕನ್ನಡ ತನ್ನ ತನಿಖೆಯಿಂದ ಕಂಡುಹಿಡಿದಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Wed, 5 March 25