AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಬಿಹಾರದಲ್ಲಿ ವಂದೇ ಭಾರತ್ ರೈಲು ಮೇಲೆ ಕಲ್ಲು ತೂರಾಟ ನಡೆಸಿದ್ದು ನಿಜಕ್ಕೂ ಮುಸ್ಲಿಮರೇ?

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಮುಸ್ಲಿಮರಲ್ಲ, ಹಿಂದೂಗಳು ಎಂಬುದು ತಿಳಿದುಬಂದಿದೆ.

Fact Check: ಬಿಹಾರದಲ್ಲಿ ವಂದೇ ಭಾರತ್ ರೈಲು ಮೇಲೆ ಕಲ್ಲು ತೂರಾಟ ನಡೆಸಿದ್ದು ನಿಜಕ್ಕೂ ಮುಸ್ಲಿಮರೇ?
ವೈರಲ್​​ ಪೋಸ್ಟ್​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 25, 2024 | 4:09 PM

ಇತ್ತೀಚಿನ ದಿನಗಳಲ್ಲಿ ರೈಲು ಹಳಿಯಲ್ಲಿ ಕಲ್ಲುಗಳನ್ನು ಇಡುತ್ತಿರುವುದು, ಮರಗಳ ಕೊಂಬೆ ಇಡುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಈ ರೀತಿಯ ಅನೇಕ ಪ್ರಕರಣಗಳು ವರದಿ ಆಗಿವೆ. ಇದರ ನಡುವೆ ಇತ್ತೀಚೆಗಷ್ಟೆ ಬಿಹಾರದ ಗಯಾ ನಗರದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಪೊಲೀಸರೊಂದಿಗೆ ಇಬ್ಬರು ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಚಿತ್ರವು ಬಿಹಾರದ ಗಯಾ ನಗರದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಬಂಧಿತರಾದ ಶಾಹಿದ್ ಹುಸೇನ್ ಮತ್ತು ಸಲ್ಮಾನ್ ಎಂಬ ಇಬ್ಬರು ಮುಸ್ಲಿಂ ಪುರುಷರು ಎಂದು ಹೇಳಿಕೊಳ್ಳಲಾಗುತ್ತಿದೆ.

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಮುಸ್ಲಿಮರಲ್ಲ, ಹಿಂದೂಗಳು ಎಂಬುದು ತಿಳಿದುಬಂದಿದೆ.

ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.

https://www.facebook.com/groups/ChaloChaleModiKeSath/posts/9114224548635272/

ನಿಜಾಂಶವನ್ನು ತಿಳಿಯಲು ನಾವು ಕೀವರ್ಡ್ ಮೂಲಕ ಗೂಗಲ್​​ನಲ್ಲಿ ಹುಡುಕಾಟ ನಡೆಸಿದ್ದೇವೆ. ಆಗ ನವೆಂಬರ್ 22, 2024 ರಂದು ರೈಲ್ವೆ ಸಚಿವಾಲಯದ ಟ್ವೀಟ್‌ನಲ್ಲಿ ನಾವು ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಗಯಾದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ನಡೆಸಿದ ಇಬ್ಬರು ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ ಎಂದು ಬರೆಯಲಾಗಿದೆ.

ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್, “ಶಾಹಿದ್ ಹುಸೇನ್ ಮತ್ತು ಸಲ್ಮಾನ್” ಎಂದು ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಈ ಟ್ವೀಟ್‌ನಿಂದ ಪ್ರಾರಂಭವಾಗಿರುವ ಸಾಧ್ಯತೆಯಿದೆ.

ಇನ್ನು ಈ ಘಟನೆಯ ಕುರಿತು ಹಲವು ವರದಿಗಳು ಪ್ರಕಟಗೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಅದರ ಪ್ರಕಾರ, ಗಯಾದ ಮನ್ಪುರ್ ರೈಲ್ವೆ ವಿಭಾಗದಲ್ಲಿ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆ ನಡೆದಿದೆ. ಪ್ರಕರಣದಲ್ಲಿ ಇಬ್ಬರನ್ನು ಆರ್‌ಪಿಎಫ್ ಬಂಧಿಸಿದೆ. ಈ ವರದಿಗಳಲ್ಲಿ ಆರೋಪಿಗಳ ಹೆಸರನ್ನು ವಿಕಾಸ್ ಕುಮಾರ್ ಮತ್ತು ಮನೀಶ್ ಕುಮಾರ್ ಎಂದು ಬರೆಯಲಾಗಿದ್ದು, ಅವರು ಮಾನ್ಪುರ ನಿವಾಸಿಗಳಾಗಿದ್ದಾರೆ. ಇಬ್ಬರೂ ಹಳಿಯಲ್ಲಿ ಗಂಟೆಗಟ್ಟಲೆ ರೈಲಿಗಾಗಿ ಕಾದು ಕುಳಿತಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬಂದ ಕೂಡಲೇ ಕಲ್ಲು ತೂರಾಟ ನಡೆಸಿದ್ದಾರೆ.

ನವೆಂಬರ್ 16, 2024 ರಂದು ಮನ್ಪುರ್ ರೈಲ್ವೆ ಸೆಕ್ಷನ್ ಸೆಂಟ್ರಲ್ ಬಳಿ ಪಾಟ್ನಾ-ಟಾಟಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಗಯಾ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಟ್ವೀಟ್ ಮೂಲಕ ದೂರು ನೀಡಲಾಗಿದೆ ಎಂದು ಸುದ್ದಿಯಲ್ಲಿ ವರದಿಯಾಗಿದೆ. ಈ ಘಟನೆಯಲ್ಲಿ ರೈಲಿನ ಗಾಜು ಒಡೆದಿದೆ. ಮಾಹಿತಿ ಪಡೆದ ತಕ್ಷಣ ಆರ್‌ಪಿಎಫ್ ವಿಶೇಷ ತಂಡ ರಚಿಸಿ ಘಟನಾ ಸ್ಥಳದ ಬಳಿ ದಾಳಿ ನಡೆಸಿ ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

ಇನ್ನೊಂದು ವರದಿಗಳ ಪ್ರಕಾರ, ಇಬ್ಬರೂ ಆರೋಪಿಗಳು ಹಿಂದಿನ ಅಪರಾಧ ಇತಿಹಾಸವನ್ನು ಹೊಂದಿದ್ದು, ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡು ಇತರ ರೈಲುಗಳನ್ನು ಗುರಿಯಾಗಿಸಲು ಯೋಜಿಸಿದ್ದರು ಎಂದು ಹೇಳಿದ್ದಾರೆ.

ರೈಲ್ವೆ ಸಂರಕ್ಷಣಾ ಪಡೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ನವೆಂಬರ್ 23, 2024 ರಂದು ಪತ್ರಿಕೆಯ ಸುದ್ದಿಯನ್ನು ಟ್ವೀಟ್ ಮಾಡಿದೆ. ಇದೇ ಮಾಹಿತಿ ನೀಡಿ ಆರೋಪಿಗಳ ಹೆಸರನ್ನು ವಿಕಾಸ್ ಕುಮಾರ್ ಮತ್ತು ಮನೀಶ್ ಕುಮಾರ್ ಎಂದು ನಮೂದಿಸಲಾಗಿದೆ. ಅಲ್ಲದೆ, ಈ ಕುರಿತು ಮಾಧ್ಯಮಗಳಿಗೆ ನೀಡಿರುವ ರೈಲ್ವೇ ಅಧಿಕೃತ ಹೇಳಿಕೆಯಲ್ಲಿ ಮನೀಶ್ ಕುಮಾರ್ ಅವರ ತಂದೆಯ ಹೆಸರನ್ನು ಸೂರಜ್ ಪ್ರಸಾದ್ ಎಂದು ನಮೂದಿಸಿದ್ದರೆ, ವಿಕಾಸ್ ಕುಮಾರ್ ಅವರ ತಂದೆಯ ಹೆಸರನ್ನು ಛೋಟಾನ್ ಪಾಸ್ವಾನ್ ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬಿಹಾರದ ಗಯಾದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಕಲ್ಲು ತೂರಾಟ ನಡೆಸಿ ಬಂಧಿತ ಹಿಂದೂ ಆರೋಪಿಗಳನ್ನು ಮುಸ್ಲಿಮರು ಎಂದು ಕರೆದು ಗೊಂದಲ ಮೂಡಿಸುತ್ತಿರುವುದು ಸ್ಪಷ್ಟವಾಗಿದೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ