Fact Check: ಕರ್ನಾಟಕ ಪೊಲೀಸರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಪಕ್ಷದ ಬೆಂಬಲಿಗರು; ವೈರಲ್ ವಿಡಿಯೊ ಇಲ್ಲಿಯದ್ದಲ್ಲ
ಮುಸ್ಲಿಂ ಟೋಪಿ ಧರಿಸಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಬೆದರಿಕೆ ಹಾಕಿರುವ 15 ಸೆಕೆಂಡ್‌ಗಳ ವಿಡಿಯೊ ಕರ್ನಾಟಕದ್ದು, ಇಲ್ಲಿ ಬೆದರಿಕೆ ಹಾಕುತ್ತಿರುವವರು ಕಾಂಗ್ರೆಸ್ ಬೆಂಬಲಿಗರು ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ವಿಡಿಯೊ ಇಲ್ಲಿಯದ್ದಲ್ಲ. ಅದರಲ್ಲಿರುವ ವ್ಯಕ್ತಿಗಳು ಕಾಂಗ್ರೆಸ್ ಬೆಂಬಲಿಗರೂ ಅಲ್ಲ.
ಕಾಂಗ್ರೆಸ್ (Congress) ಗೆಲುವು: ಮುಖ್ಯಮಂತ್ರಿ ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ ಮತ್ತು ಇದು ಕರ್ನಾಟಕದ (Karnataka) ಪರಿಸ್ಥಿತಿ ಎಂದು ಹಿಂದಿ ಶೀರ್ಷಿಕೆ ಜತೆ ಕರ್ನಾಟಕದ್ದು ಎನ್ನಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಮುಸ್ಲಿಂ ಟೋಪಿ ಧರಿಸಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಬೆದರಿಕೆ ಹಾಕಿರುವ 15 ಸೆಕೆಂಡ್‌ಗಳ ವಿಡಿಯೊ ಇದಾಗಿದೆ. ಟ್ವಿಟರ್ ಬ್ಲೂ ಟಿಕ್ ಹೊಂದಿರುವ ವಿನಿ ಎಂಬವರು ಈ ವಿಡಿಯೊವನ್ನು ಮೇ 15 ರಂದು ಹಂಚಿಕೊಂಡಿದ್ದಾರೆ. ಅದೇ ರೀತಿ ಅನೇಕ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ಬರಹಗಳೊಂದಿಗೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ನರೇನ್ ಮುಖರ್ಜಿ ಎಂಬ ಟ್ವೀಟಿಗರು ಕೂಡಾ ಇದೇ ವಿಡಿಯೊ ಟ್ವೀಟ್ ಮಾಡಿದ್ದು, ಕೆಲವು ಬಳಕೆದಾರರು ಈ ವಿಡಿಯೊ ಹಳೆಯದು ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ಮಹಾರಾಷ್ಟ್ರದ್ದು ಎಂದಿದ್ದಾರೆ.
कांग्रेस की जीत : अभी तो मुख्य मंत्री ने शपथ भी नही ली और ये हाल है कर्नाटक में। ???? pic.twitter.com/epzphCS6Es
— Naren Mukherjee (@NMukherjee6) May 16, 2023
ಫ್ಯಾಕ್ಟ್ ಚೆಕ್
ಈ ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ಮಾಡಿದ ಆಲ್ಟ್ ನ್ಯೂಸ್, ಮೊದಲಿಗೆ ವಿಡಿಯೊದ ಕೀ-ಫ್ರೇಮ್‌ಗಳನ್ನು ವಿಭಜಿಸಿ ಅದರ ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಹೀಗೆ ಹುಡುಕಿದಾಗ ಸೆಪ್ಟೆಂಬರ್ 20, 2018 ರಂದು ಮಾಡಿದ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಲಾದ ವೈರಲ್ ವಿಡಿಯೊದ ದೀರ್ಘ ಆವೃತ್ತಿಗೆ ಸಿಕ್ಕಿದೆ. ವಿಡಿಯೊದ 0:20 ನಿಮಿಷದಲ್ಲಿ ಒಬ್ಬ ವ್ಯಕ್ತಿ ಮರಾಠಿಯಲ್ಲಿ ಪೊಲೀಸರೊಂದಿಗೆ ಮಾತನಾಡುವುದನ್ನು ಕಾಣಬಹುದು. ಈ ವಿಡಿಯೊ ಅಡಿಯಲ್ಲಿ ಮಾರ್ಚ್ 9, 2021 ರಂದು ಮರಾಠಿಯಲ್ಲಿ ಮಾಡಿದ ಕಾಮೆಂಟ್ ಕೂಡಾ ಇದೆ,. ಈ ವಿಡಿಯೊ ಚೋಪ್ಡಾ ಬಸ್ ನಿಲ್ದಾಣದ್ದು,ಇದು 3 ವರ್ಷಗಳ ಹಿಂದಿನದು. ಹಣ್ಣು ಮಾರುವವನಿಗೆ ಪೊಲೀಸ್ ಹೊಡೆದಿದ್ದು, ಈ ವಿಷಯದಲ್ಲಿ ನಡೆದ ವಾಗ್ವಾದ ಇದು ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
ಮೇಲಿನ ಎಲ್ಲಾ ಮಾಹಿತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟ ಮಾಡಿದಾಗ ಸೆಪ್ಟೆಂಬರ್ 2018 ರಲ್ಲಿ ಪೋಸ್ಟ್ ಮಾಡಿದ ವಿಡಿಯೊ ಸಿಕ್ಕಿದೆ.
ಸತ್ಯವನ್ನು ಖಚಿತಪಡಿಸಲು ಆಲ್ಟ್ ನ್ಯೂಸ್ ಚೋಪ್ಡಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ನಿಯಂತ್ರಣ ಕೊಠಡಿಯ ಪೊಲೀಸ್ ಸಿಬ್ಬಂದಿ ಘಟನೆಯು 2018ರದ್ದು. ಇದು ಚೋಪ್ಡಾ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ ಎಂದು ಹೇಳಿದರು. ಪೊಲೀಸ್ ಕಾನ್ಸ್‌ಟೇಬಲ್ ಶ್ರೀಕಾಂತ್ ಗಂಗುರ್ಡೆ ಅವರನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಅವರು ಬಸ್ ನಿಲ್ದಾಣದೊಳಗೆ ಹಣ್ಣಿನ ಅಂಗಡಿ ಇಟ್ಟಿದ್ದ ವ್ಯಕ್ತಿಯಲ್ಲಿ ದೂರ ಹೋಗುವಂತೆ ಹೇಳಿದ್ದರು,ಆ ಪ್ರದೇಶವು ದೈಹಿಕ ವಿಕಲಾಂಗರಿಗೆ ಮೀಸಲಾಗಿದೆ. ಆಗ ಪೊಲೀಸರ ಜತೆ ವ್ಯಾಪಾರಿ ಜಗಳವಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Fact Check: ಬಿಜೆಪಿ ಧ್ವಜದ ಮೇಲೆ ಗೋಹತ್ಯೆ ಮಾಡಿದ ಫೋಟೋ ಕರ್ನಾಟಕದ್ದು ಅಲ್ಲ, ಮಣಿಪುರದ ಫೋಟೊ ವೈರಲ್
ಗಂಗುರ್ಡೆ ಅವರು ಕರ್ತವ್ಯದಲ್ಲಿದ್ದಾಗ ತೊಂದರೆ ನೀಡಿದವರ ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ನೌಕರನ ಕರ್ತವ್ಯ ನಿರ್ವಹಣೆಯನ್ನು ತಡೆಯಲು ಕ್ರಿಮಿನಲ್ ಬಲದ ಹಲ್ಲೆ ಅಥವಾ ಬಳಕೆ) ಅಡಿಯಲ್ಲಿ ಆರೋಪ ಹೊರಿಸಿರುವುದಾಗಿ ನಿಯಂತ್ರಣ ಕೊಠಡಿ ತಿಳಿಸಿದೆ. ಅಂದಹಾಗೆ ಈ ವಿಷಯವು ಇನ್ನೂ ನ್ಯಾಯಾಲಯದಲ್ಲಿದೆ.
ಈ ವೈರಲ್ ಆಗಿರುವ ವಿಡಿಯೋಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. 2018ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಘಟನೆಯನ್ನು ಕರ್ನಾಟಕಕ್ಕೆ ಲಿಂಕ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ