ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರೊಂದಿಗೆ ಪಂಜಾಬ್‌ನ ಗೋಲ್ಡಿ ಬ್ರಾರ್ (Goldy Brar) ಹೆಸರಿನ ಮೊಹಾಲಿಯ ಉದ್ಯಮಿಯೊಬ್ಬರ ಫೋಟೋವನ್ನು ಅವರು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ (Gangster Goldy Brar) ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಭಾನುವಾರ ಹತ್ಯೆಯಾದ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ (Sidhu Moose Wala) ಅವರ ಹತ್ಯೆಯ ಹೊಣೆಯನ್ನು ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದಾನೆ. ಪಂಜಾಬ್‌ನಿಂದ ದರೋಡೆಕೋರನ ಹೆಸರಿನೊಂದಿಗೆ ತನ್ನ ಫೋಟೋ ವೈರಲ್ ಆಗುತ್ತಿರುವುದನ್ನು ಗಮನಿಸಿರುವ ಉದ್ಯಮಿ ಗೋಲ್ಡಿ ಬ್ರಾರ್ ಈ ಫೋಟೊವನ್ನು ಹಂಚಿಕೊಳ್ಳಬೇಡಿ, ನಾನು ಆರೋಪಿಯಲ್ಲ ಎಂದು ವಿಡಿಯೊ ಮೂಲಕ ಮನವಿ ಮಾಡಿದ್ದಾರೆ. 28ರ ಹರೆಯದ ಪಂಜಾಬಿ ರಾಪ್ ಗಾಯಕ ಶುಬ್ದೀಪ್ ಸಿಂಗ್ ಸಿಧು (ಸಿಧು ಮೂಸೆ ವಾಲ) ಅವರನ್ನು ದುಷ್ಕರ್ಮಿಗಳು ಭಾನುವಾರ ಸಂಜೆ ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಪಂಜಾಬ್ ಸರ್ಕಾರವು ಮೂಸೆ ವಾಲಾರಿಗೆ ಇದ್ದ ಭದ್ರತೆ ಕಡಿತಗೊಳಿಸಿದ ಮರುದಿನವೇ ಈ ದಾಳಿ ನಡೆದಿದೆ. ಗಾಯಕ ಪಂಜಾಬ್‌ನಲ್ಲಿ ನಡೆದ 2022 ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ಗೆ ಸೇರಿಕೊಂಡಿದ್ದರು.
ಗ್ಯಾಂಗ್ಸ್ಟರ್ಗೆ ಆಮ್ ಆದ್ಮಿ ಪಕ್ಷದ ಸರ್ಕಾರದೊಂದಿಗೆ ನಂಟಿದೆ ಎಂಬ ಶೀರ್ಷಿಕೆಯೊಂದಿಗೆ ಉದ್ಯಮಿಯ ಫೋಟೊ ಶೇರ್ ಆಗುತ್ತಿದೆ. ಭಗವಂತ್ ಮನ್ ಪಕ್ಕದಲ್ಲಿ ನಿಂತಿರುವ ಈ ವ್ಯಕ್ತಿ ಗೋಲ್ಡಿ ಬ್ರಾರ್ ಆಗಿದ್ದು, ಈತ ಸಿಧು ಮೂಸ್ ವಾಲಾ ಅವರ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ವೈರಲ್ ಫೋಟೊಗೆ ವಿವರಣೆ ನೀಡಲಾಗಿದೆ.
इस फोटो में जो भगवंत मान के साथ खड़ा Goldy Brar है इसी ने सिद्धू मूसेवाला की हत्या की जिम्मेदारी ली है अब सवाल ये की किसके कहने पर मूसेवाला की सुरक्षा हटाई pic.twitter.com/h53J7BzIiE
— e s jadon (@esjadon4) May 29, 2022
ಫ್ಯಾಕ್ಟ್ ಚೆಕ್
ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ತಂಡ ಇದು ಮಾರ್ಚ್ 10 ರಂದು ಗೋಲ್ಡಿ ಬ್ರಾರ್ ಎಂಬ ಖಾತೆಯಿಂದ ಅಪ್‌ಲೋಡ್ ಮಾಡಿದ ಫೇಸ್‌ಬುಕ್ ಚಿತ್ರ ಎಂದು ಹೇಳಿದೆ. ಗೋಲ್ಡಿ ಬ್ರಾರ್ ಹೆಸರನ್ನು ಫೇಸ್ಬುಕ್ನಲ್ಲಿ ಹುಡುಕಾಡಿದಾಗ ಈ ಚಿತ್ರ ಸಿಕ್ಕಿದೆ ಎಂದು ಬೂಮ್ ವರದಿ ಮಾಡಿದೆ. ಮೊಹಾಲಿಯ ಉದ್ಯಮಿ ಗೋಲ್ಡಿ ಬ್ರಾರ್ ಎಂಬವರ ಖಾತೆಯಲ್ಲಿ ಮನ್ ಜತೆಗಿರುವ ಫೋಟೊವನ್ನು ಮಾರ್ಚ್ 10, 2022 ಪೋಸ್ಟ್ ಮಾಡಲಾಗಿದ್ದು – Congratulations Cm Saab ಎಂದು ಬರೆಯಲಾಗಿದೆ. (Source)
ಈ ನಂತರ ಬೂಮ್ ತಂಡ ಉದ್ಯಮಿ ಬ್ರಾರ್ ಅವರನ್ನು ಸಂಪರ್ಕಿಸಿದಾಗ “ನನ್ನ ಹೆಸರು ಸಹ ಗೋಲ್ಡಿ ಬ್ರಾರ್, ನಾನು ಫಾಜಿಲ್ಕಾ ನಿವಾಸಿ. ಭಗವಂತ್ ಮಾನ್ ಅವರೊಂದಿಗಿನ ನನ್ನ ಫೋಟೊ ನಿನ್ನೆ ವೈರಲ್ ಆಗಿದೆ. ಪಂಜಾಬ್ ಚುನಾವಣೆಯ ಸಮಯದಲ್ಲಿ ಆ ಫೋಟೊ ತೆಗೆದಿದ್ದು” ಎಂದು ಹೇಳಿದರು. ನನಗೂ ಸಿಧು ಮೂಸೆ ವಾಲಾ ಹತ್ಯೆಯ ಆರೋಪಿ ಗೋಲ್ಡಿ ಬ್ರಾರ್ ಜತೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ಅವರು.
ಬ್ರಾರ್ ತಮ್ಮ ಖಾತೆಯಲ್ಲಿ ವಿಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದು ಜನರು ತಮ್ಮ ಫೋಟೋವನ್ನು ಹಂಚಿಕೊಳ್ಳದಂತೆ ಕೇಳಿಕೊಂಡಿದ್ದಾರೆ. ಅದೇ ವೇಳೆ ಹಂಚಿಕೊಳ್ಳುವವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಂಡಿಯಾ ಟುಡೆ ಆರೋಪಿ ಗೋಲ್ಡಿ ಬ್ರಾರ್‌ನ ಸಂಗ್ರಹ ಫೋಟೊವನ್ನು ಪ್ರಕಟಿಸಿದ್ದು ವೈರಲ್ ಫೋಟೊದಲ್ಲಿರುವ ಉದ್ಯಮಿ ಬ್ರಾರ್ ಫೋಟೊಗೂ ಇದಕ್ಕೂ ಯಾವುದೇ ಸಾಮ್ಯವಿಲ್ಲ ಎಂಬುದನ್ನು ತೋರಿಸುತ್ತದೆ.
ಹೆಚ್ಚಿನ ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ