ಮೊನ್ನೆಯಷ್ಟೆ ಡಿಸೆಂಬರ್ 6, 2024 ರಂದು, ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ 32 ವರ್ಷಗಳು ಪೂರ್ಣಗೊಂಡಿವೆ. ಈಗ ಆ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗಿದೆ. ಆದರೆ ಇನ್ನೂ ಅನೇಕ ಜನರು ಬಾಬ್ರಿ ಮಸೀದಿ ಧ್ವಂಸವನ್ನು ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸ್ಕ್ರೀನ್ ಮೇಲೆ ಪ್ಲೇ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೀದಿ ಬೀದಿಯಲ್ಲಿ ಈ ವಿಡಿಯೋ ಪ್ರದರ್ಶನಗೊಳ್ಳುತ್ತಿದ್ದು, ಅನೇಕ ಜನರು ನಿಲ್ಲಿಸಿ ಡಿಸ್ಪ್ಲೇಯನ್ನು ನೋಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಇಸ್ಲಾಮಿಕ್ ಕ್ಯಾಪ್ ಧರಿಸಿದ್ದಾರೆ. ಈ ವಿಡಿಯೋ ಬಾಂಗ್ಲಾದೇಶದ್ದು ಎಂದು ಕೆಲವರು ಹೇಳುತ್ತಿದ್ದಾರೆ. 1949 ರಲ್ಲಿ ಬಾಬರಿ ಮಸೀದಿ ನಿರ್ಮಾಣ ಮತ್ತು ಮಸೀದಿಯೊಳಗೆ ರಾಮ್ ಲಲ್ಲಾನ ವಿಗ್ರಹವನ್ನು ಇರಿಸುವಂತಹ ಘಟನೆಗಳನ್ನು ವೀಡಿಯೊ ಉಲ್ಲೇಖಿಸುತ್ತದೆ.
ಅನೇಕ ಫೇಸ್‌ಬುಕ್ ಮತ್ತು ಎಕ್ಸ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ನೋಡಿ ಬಾಬರಿ ಮಸಿದೀ ವಿಡಿಯೊನ ದೊಡ್ಡ ಪರದೆ ಮೇಲೆ ಹಾಕಿ ಹಿಂದುಗಳ ಮೇಲೆ ಯಾವರೀತಿ ಬಾಂಗ್ಲಾದಲ್ಲಿ ದ್ವೇಷ ತುಂಬ್ತಾ ಇದಾರೆ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬಾಬ್ರಿ ಧ್ವಂಸ ಕುರಿತ ಸಾಕ್ಷ್ಯಚಿತ್ರವನ್ನು ತೋರಿಸುವ ಈ ವಿಡಿಯೋ ಬಾಂಗ್ಲಾದೇಶದ್ದಲ್ಲ, ಬದಲಾಗಿ ಇದು ಮಹಾರಾಷ್ಟ್ರದಿಂದ ಬಂದಿದೆ.
ನಿಜಾಂಶವನ್ನು ತಿಳಿಯಲು ನಾವು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ವೈರಲ್ ವಿಡಿಯೋದಲ್ಲಿ ಕಾಣುವ ಪರದೆಯ ಮೇಲೆ ‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ. ಈ ಮಾಹಿತಿಯನ್ನು ಆಧರಿಸಿ ಹುಡುಕಿದಾಗ, SDPI ಕಲ್ವಾ ಮುಂಬ್ರಾ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಈ ವೈರಲ್ ವಿಡಿಯೋದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ.
ಅಲ್ಲಿ ಈ ವಿಡಿಯೋವನ್ನು ಡಿಸೆಂಬರ್ 6, 2024 ರಂದು ಅಪ್‌ಲೋಡ್ ಮಾಡಲಾಗಿದೆ. ನಾಲ್ಕು ನಿಮಿಷದ ಈ ವಿಡಿಯೋದಲ್ಲಿ ವಾಯ್ಸ್‌ಓವರ್ ಮಾಡುತ್ತಿರುವ ವ್ಯಕ್ತಿ ಬಾಬರಿ ಧ್ವಂಸ, ಸುಪ್ರೀಂ ಕೋರ್ಟ್‌ನ ತೀರ್ಪು ಮತ್ತು ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದಾರೆ. ಕೊನೆಯಲ್ಲಿ ಬಾಬರಿ ಮಸೀದಿಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಲಾಗಿದೆ.
ಎಸ್‌ಡಿಪಿಐ ಒಂದು ರಾಜಕೀಯ ಪಕ್ಷವಾಗಿದ್ದು, ಇದರ ರಾಷ್ಟ್ರೀಯ ಕಚೇರಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿದೆ. ಈ ಘಟನೆಯ ಕುರಿತು ಇನ್ನಷ್ಟು ಹುಡುಕಿದಾಗ ಖಾಸಗಿ ವೆಬ್ಸೈಟ್ ಒಂದು ವರದಿ ಮಾಡಿರುವುದು ಸಿಕ್ಕಿದೆ. ಇದರಲ್ಲಿ ಅವರು ಎಸ್‌ಡಿಪಿಐ ಸದಸ್ಯ ಅಜರ್ ತಾಂಬೋಳಿ ಅವರನ್ನು ಸಂಪರ್ಕಿಸಿದ್ದಾರೆ. ಬಾಬರಿ ಮಸೀದಿ ಧ್ವಂಸದ 32 ನೇ ವಾರ್ಷಿಕೋತ್ಸವದಂದು ಡಿಸೆಂಬರ್ 6 ರಂದು ಮಹಾರಾಷ್ಟ್ರದ ಥಾಣೆಯ ಮುಂಬ್ರಾ ಪ್ರದೇಶದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಕಾರ್ಡ್ ನಾಕಾದಲ್ಲಿರುವ ದಾರುಲ್ ಫಲಾಹ್ ಮಸೀದಿ ಬಳಿ ಈ ಕಾರ್ಯಕ್ರಮ ನಡೆಯಿತು ಎಂದು ಅವರು ಹೇಳಿದ್ದಾರೆಂಬ ಮಾಹಿತಿ ಇದರಲ್ಲಿದೆ.
ಹಾಗೆಯೆ ಎಸ್‌ಡಿಪಿಐ ಯ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ಪುಟಗಳಲ್ಲಿ ಈ ಈವೆಂಟ್‌ನ ಇತರ ವಿಡಿಯೋಗಳನ್ನು ಸಹ ನಾವು ಕಂಡುಕೊಂಡಿದ್ದೇವೆ.
ಬಾಂಗ್ಲಾದೇಶದಲ್ಲಿ ಬಾಬ್ರಿ ಧ್ವಂಸಕ್ಕೆ ಸಂಬಂಧಿಸಿದಂತೆ ಯಾವುದಾದರು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಅಥವಾ ಅದಕ್ಕೆ ಸಂಬಂಧಿಸಿದ ಪ್ರದರ್ಶನವನ್ನು ತೋರಿಸಲಾಗಿದೆ ಎಂಬ ಬಗ್ಗೆ ಯಾವುದೇ ಸುದ್ದಿ ನಮಗೆ ಕಂಡುಬಂದಿಲ್ಲ. ಹೀಗಾಗಿ ಮಹಾರಾಷ್ಟ್ರದ ಮುಂಬ್ರಾದಲ್ಲಿ ಬಾಬರಿ ಧ್ವಂಸ ನಡೆದು 32 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರದರ್ಶಿಸಲಾದ ಸಾಕ್ಷ್ಯಚಿತ್ರದ ವಿಡಿಯೋವನ್ನು ಬಾಂಗ್ಲಾದೇಶದವರು ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ