ಫೆಬ್ರವರಿ 2025 ರಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿದರೆ ರಾಜಕೀಯ ನಾಯಕರ ಜೊತೆಗೆ ಸಿನಿಮಾ ನಟರು ಕೂಡ ಚುನಾವಣಾ ಅಖಾಡಕ್ಕೆ ಧುಮುಕಿದಂತೆ ಕಾಣುತ್ತಿದೆ. ಸದ್ಯ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದ್ದು, ಇವರು ಬಿಜೆಪಿಗೆ ಮತ ಹಾಕಬೇಡಿ ಎಂದು ಪ್ರಚಾರ ಮಾಡುತ್ತಿರುವುದನ್ನು ಕಾಣಬಹುದು.
ವಿಡಿಯೋದಲ್ಲಿ ನಟ ಪಂಕಜ್ ತ್ರಿಪಾಠಿ ಕಡಲೆಕಾಯಿ ಮಾರಾಟಗಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘‘ನಾವು ಕಡಲೆಕಾಯಿಯನ್ನು ಮಾರಾಟ ಮಾಡುತ್ತೇವೆ, ನಮ್ಮ ಬುದ್ಧಿವಂತಿಕೆಯನ್ನು ಅಲ್ಲ. ಈ ಸಂದೇಶವನ್ನು ನೋಡಿ. ಬಿಜೆಪಿಯವರು ಮತ ನೀಡಿ, ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ಅವರಿಗೆ ಮತ ಹಾಕುತ್ತೇವೆ, ಇನ್ನೊಂದು ಕಡೆ ಸರ್ಕಾರದ ಹಣ ನಾಪತ್ತೆಯಾಗುತ್ತದೆ. ನಾನು ಕಡಲೆಕಾಯಿ ಪ್ರಿಯ, ನಾನು ಮೂರ್ಖನಲ್ಲ. ನೆನಪಿಡಿ, ಬಿಜೆಪಿಯವರು ಏನಾದರೂ ಆಮಿಷ ಒಡ್ಡಿದರೆ, ನಾನು ಮೂರ್ಖನಲ್ಲ ಎಂದು ಹೇಳಿ’’ ಎಂಬುದು ಈ ವೈರಲ್ ವಿಡಿಯೋದಲ್ಲಿದೆ.
ಆಮ್ ಆದ್ಮಿ ಪಕ್ಷವು ಡಿಸೆಂಬರ್ 5 ರಂದು ಈ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಆದರೆ, ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಅವರ ಖಾತೆಯಿಂದ ಅಳಿಸಲಾಗಿದೆ. ಇದಲ್ಲದೆ, AAP ರಾಜಸ್ಥಾನ , AAP ಸೀಲಂಪುರ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
BJP वालों को कहें- “मैं मूर्ख नहीं हूं…” pic.twitter.com/dBjOtktSDx
— AAP Rajasthan (@AAPRajasthan) December 5, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಬಂದಿದೆ. ನಿಜವಾದ ವಿಡಿಯೋದಲ್ಲಿ, ಪಂಕಜ್ ತ್ರಿಪಾಠಿ ಜಾಹೀರಾತು ಪ್ರಚಾರದ ಭಾಗವಾಗಿ ಯುಪಿಐ ವಂಚನೆಯ ಬಗ್ಗೆ ಮಾತನಾಡುತ್ತಿದ್ದರು, ಯಾವುದೇ ರಾಜಕೀಯ ಪಕ್ಷದ ಬಗ್ಗೆ ಅಲ್ಲ.
ನಿಜಾಂಶ ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಪಡೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಸೆಪ್ಟೆಂಬರ್ 23, 2024 ರಂದು ಯುಪಿಐಯ ಅಧಿಕೃತ ಫೇಸ್‌ಬುಕ್ ಖಾತೆಯ ಪೋಸ್ಟ್‌ನಲ್ಲಿ ನಾವು ಇದೇ ರೀತಿಯ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಈ ವಿಡಿಯೋವೈರಲ್ ಆಗುತ್ತಿರುವ ಕ್ಲಿಪ್ ಅನ್ನು ಹೋಲುತ್ತದೆ. ಆದರೆ, ಇದರಲ್ಲಿ ಪಂಕಜ್ ಯುಪಿಐ ವಂಚನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಡೀ ವಿಡಿಯೋದಲ್ಲಿ ಅವರು ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಎಲ್ಲಿಯೂ ತೆಗೆದುಕೊಂಡಿಲ್ಲ.
ನೈಜ್ಯ ವಿಡಿಯೋದ ಒಂದು ಹಂತದಲ್ಲಿ, ಪಂಕಜ್ ತ್ರಿಪಾಠಿ ತನ್ನ ಮೊಬೈಲ್‌ನ ಡಿಸ್ಪ್ಲೇ ತೋರಿಸುತ್ತಾರೆ. ಆಗ ಅವರ ಮೊಬೈಲ್‌ಗೆ ಬಂದ ಸಂದೇಶದಲ್ಲಿ, ‘‘ವಿನ್ನರ್. ಅಭಿನಂದನೆಗಳು! ನೀವು 25,00,000 ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದೀರಿ! ನಿಮ್ಮ ಬಹುಮಾನವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ,’’ ಎಂದು ಬರೆದಿರುತ್ತದೆ. ಆದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಈ ಸಂದೇಶದ ಬದಲು ‘ವೋಟ್ ಫಾರ್ ಬಿಜೆಪಿ’ ಎಂದು ಬಿಜೆಪಿ ಚಿಹ್ನೆಯೊಂದಿಗೆ ಫೋನ್‌ನಲ್ಲಿ ಬರೆಯಲಾಗಿದೆ. ಎರಡೂ ವೀಡಿಯೋಗಳನ್ನು ಹೋಲಿಕೆ ಮಾಡಿದರೆ ವೈರಲ್ ವಿಡಿಯೋದಲ್ಲಿ ಎಡಿಟಿಂಗ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ನವೆಂಬರ್ 2023 ರಲ್ಲಿ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪಂಕಜ್ ತ್ರಿಪಾಠಿ ಅವರನ್ನು ಯುಪಿಐ ಸುರಕ್ಷತಾ ರಾಯಭಾರಿಯಾಗಿ ನೇಮಿಸಿತು ಮತ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ‘ನಾನು ಮೂರ್ಖನಲ್ಲ’ ಎಂಬ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿತು. ಡಿಜಿಟಲ್ ಪಾವತಿಗೆ ಸಂಬಂಧಿಸಿದ ಹಗರಣಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಇದೇ ಅಭಿಯಾನದಡಿ ಬಿಡುಗಡೆಯಾದ ಜಾಹೀರಾತಿನಲ್ಲಿ ಕಡಲೆಕಾಯಿ ಮಾರಾಟಗಾರನ ಪಾತ್ರ ನಿರ್ವಹಿಸುತ್ತಿರುವ ಪಂಕಜ್ ತ್ರಿಪಾಠಿ ಅವರು ಲಾಟರಿ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವಿಡಿಯೋ ಸದ್ಯ ಎಡಿಟಿಂಗ್ ಮೂಲಕ ವೈರಲ್ ಆಗುತ್ತಿದೆ.
ಈ ವರ್ಷ ನವೆಂಬರ್ 6 ರಂದು ಪತ್ರಿಕಾ ಪ್ರಕಟಣೆಯನ್ನು ನೀಡುವಾಗ, ಯುಪಿಐ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಎನ್‌ಪಿಸಿಐ ಹೇಳಿತ್ತು. ಈ ಅಭಿಯಾನಕ್ಕಾಗಿ ಪಂಕಜ್ ತ್ರಿಪಾಠಿ 6 ಜಾಹೀರಾತು ವಿಡಿಯೋ ಮಾಡಲಿದ್ದಾರೆ. ಇಲ್ಲಿಯವರೆಗೆ, ಕಡಲೆಕಾಯಿ ಮಾರಾಟಗಾರನ ಪಾತ್ರವನ್ನು ಹೊರತುಪಡಿಸಿ, ಪಂಕಜ್ ಪಾನ್ ಮಾರಾಟಗಾರ ಮತ್ತು ಉದ್ಯಮಿ ಪಾತ್ರದಲ್ಲಿ ಜಾಹೀರಾತುಗಳನ್ನು ಮಾಡಿದ್ದಾರೆ.
ಹೀಗಾಗಿ, ಪಂಕಜ್ ತ್ರಿಪಾಠಿ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿರುವುದನ್ನು ತೋರಿಸಲು ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.