ಅದು ರಾತ್ರಿಯ ದೃಶ್ಯ. ಇಬ್ಬರು ವ್ಯಕ್ತಿಗಳು ತಮ್ಮ ಹೈಟೆಕ್ ಆಯುಧಗಳಿಂದ ನಿರಂತರವಾಗಿ ಗುಂಡು ಹಾರಿಸುತ್ತಿರುವುದಾಗಿ ತೋರಿಸುವ ಹಳೆಯ ವಿಡಿಯೊವೊಂದು ವೈರಲ್ ಆಗಿದ್ದು, ಇದು ಮಣಿಪುರ ಹಿಂಸಾಚಾರಕ್ಕೆ (Manipur Violence) ಸಂಬಂಧಿಸಿದ್ದು ಎಂದು ಹೇಳಲಾಗಿದೆ. ಆದರೆ ಈ ವಿಡಿಯೊ 2020 ರಿಂದಲೇ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಮಣಿಪುರದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬೂಮ್ ವರದಿ ಮಾಡಿದೆ. ಚುರಾಚಂದ್‌ಪುರ, ಕಾಂಗ್‌ಪೋಕ್ಪಿ ಮತ್ತು ಇಂಫಾಲ್ ಜಿಲ್ಲೆಗಳಲ್ಲಿ ಹಿಂಸಾತ್ಮಕ ಘರ್ಷಣೆಗಳಿಂದ ಮಣಿಪುರ ತತ್ತರಿಸಿದೆ. ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ ಮಣಿಪುರ (ATSUM) ನಡೆಸಿದ ಐಕಮತ್ಯ ಮೆರವಣಿಗೆಯ ನಂತರ ಘರ್ಷಣೆಗಳು ನಡೆದವು. ಸುದ್ದಿ ವರದಿಗಳ ಪ್ರಕಾರ, ಕುಕಿ ಬುಡಕಟ್ಟು ಮತ್ತು ಮೈತಿ ಸಮುದಾಯದ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ.
ಮಣಿಪುರದಲ್ಲಿ ಇಂಟರ್ನೆಟ್ ನಿರ್ಬಂಧ ಮತ್ತು ಸೆಕ್ಷನ್ 144 ಅನ್ನು ವಿಧಿಸಲಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಕುಕಿ ಜನರು ಮೈತಿ ಜನರ ಮೇಲೆ ಗುಂಡು ಹಾರಿಸುತ್ತಿರುವ ವಿಡಿಯೊ ಇಲ್ಲಿದೆ. ನೀವು ಇದನ್ನು ಶಾಂತಿ ರ್ಯಾಲಿ ಎಂದು ಕರೆದು ಬಲಿಪಶುವಾಗಲು ಪ್ರಯತ್ನಿಸುತ್ತಿದ್ದೀರಾ ಎಂಬ ಬರಹದೊಂದಿಗೆ ವಿಡಿಯೊ ಶೇರ್ ಮಾಡಲಾಗಿದೆ.
ಬೂಮ್ ವರದಿಯು ಈ ವಿಡಿಯೊದಲ್ಲಿರುವ ಇಬ್ಬರು ವ್ಯಕ್ತಿಗಳು ಟ್ರೇಸರ್ ರೌಂಡ್ಸ್ ಹಾರಿಸುತ್ತಿದ್ದಾರೆ ಎಂದು ಹೇಳಿದೆ. ಟ್ರೇಸರ್ ಬುಲೆಟ್ಗಳು ಪೈರೋಟೆಕ್ನಿಕ್ ರಾಸಾಯನಿಕವನನ್ನು ಹೊಂದಿದ್ದು ಗುಂಡು ಹಾರಿಸಿದಾಗ ಬೆಳಕು ಕೂಡಾ ಕಾಣಿಸುತ್ತದೆ. ಗನ್ ಬಗ್ಗೆ ಪೋಸ್ಟ್ ಮಾಡುವ ಟ್ವಿಟರ್ ಖಾತೆಯಲ್ಲಿಯೂ ಈ ವಿಡಿಯೊ ಟ್ವೀಟ್ ಆಗಿದೆ.
ಈ ವಿಡಿಯೊದ ಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜುಲೈ 5, 2020 ರಿಂದ ಅದೇ ವಿಡಿಯೊವನ್ನು ಹೊಂದಿರುವ Instagram ಪೋಸ್ಟ್ ಸಿಕ್ಕಿದೆ ಎಂದು ಬೂಮ್ ಹೇಳಿದೆ.
Tô apaixonado nesses vídeos com rajadão de fuzil ou pistola à noite com mira a laser ou lanterna acoplada. Vou postar + videos assim no @lovearmasvideos toda semana, sigam lá tbm✌️ pic.twitter.com/wbL5lhZwmI
— I Love Armas (@Ilovearmas_) April 28, 2023
ಈ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿದರೆ ಆ ವ್ಯಕ್ತಿ ವೀಡಿಯೊ ಕ್ರಿಯೇಟರ್ ಎಂಬುದು ಅದರಲ್ಲಿ ನಮೂದಿಸಿದೆ. ಥ್ರೆಟ್ಟಿ ಹೆಸರಿನ ಗೇಮಿಂಗ್ ಯೂಟ್ಯೂಬ್ ಚಾನಲ್‌ಗೆ ಲಿಂಕ್ ಅನ್ನು ಅದರ ಬಯೋದಲ್ಲಿ ಕೊಡಲಾಗಿದೆ. ಈ ಚಾನೆಲ್ ನೋಡಿದರೆ ಅದರಲ್ಲಿ ಹಲವಾರು ಗೇಮಿಂಗ್ ವಿಡಿಯೊಗಳನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ.
ಕ್ಲಿಪ್ ನಿಜವಾದ ತುಣುಕನ್ನು ತೋರಿಸುತ್ತದೆಯೇ ಅಥವಾ ಅದು ವೀಡಿಯೊ ಗೇಮ್‌ನ ಭಾಗವಾಗಿದೆಯೇ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದಾಗ್ಯೂ, ಈ ವೈರಲ್ ವಿಡಿಯೊ ಹಳೆಯದು. ಇದಕ್ಕೂ ಮಣಿಪುರದಲ್ಲಿ ಇತ್ತೀಚಿನ ಹಿಂಸಾಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದಂತೂ ಸ್ಪಷ್ಟ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 pm, Thu, 4 May 23