
ಜನವರಿ 10ರಂದು ಪಾಕಿಸ್ತಾನದ ಹೋರಾಟಗಾರ ಆರಿಫ್ ಅಜಕಿಯಾ 26 ಸೆಕೆಂಡ್ ಅವಧಿಯ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದರು. ಈ ವಿಡಿಯೊದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನಕ್ಕೆ ಈಗ ಪ್ರಬಲವಾದ ಸೈನ್ಯಬೇಕು. ಯಾಕೆ? ಯಾಕೆಂದರೆ ನಮ್ಮ ನೆರೆಯ ರಾಷ್ಟ್ರದಲ್ಲಿ 73 ವರ್ಷಗಳಿಂದ ಈ ರೀತಿಯ ಸರ್ಕಾರವನ್ನು ಕಂಡಿಲ್ಲ ಎಂದು ಹೇಳುತ್ತಿದ್ದಾರೆ. ಅಲ್ಪ ಕ್ಷಣದಲ್ಲಿ ಟಿವಿ ನಿರೂಪಕಿಯ ವಾಯ್ಸ್ ಓವರ್ ಕೇಳಿಸುತ್ತಿದ್ದು ಅದರಲ್ಲಿ ಇಮ್ರಾನ್ ಖಾನ್ ಅವರ ಮಾತೇ ಪುನರುಚ್ಚಾರಣೆಯಾಗಿದೆ.
ಈ ವಿಡಿಯೊದಲ್ಲಿ 92 News ಎಂಬ ಲೋಗೊ ಇದೆ. ಜನವರಿ 11ರಂದು ಅಂಕಣಕಾರ್ತಿ ಶೆಫಾಲಿ ವೈದ್ಯ ಇದೇ ವಿಡಿಯೊವನ್ನು ಪೋಸ್ಟ್ ಮಾಡಿ ನರೇಂದ್ರ ಮೋದಿ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಮಟ್ಟದ ಪ್ರಚಾರ ಸಿಗುವುದಿಲ್ಲ. ನಿಮ್ಮ ಬದ್ಧ ವೈರಿ 73 ವರ್ಷಗಳಲ್ಲಿ ಈ ರೀತಿಯ ಸರ್ಕಾರ ಭಾರತದಲ್ಲಿ ನೋಡಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದರು.
ವೈರಲ್ ಆಗಿರುವ ವಿಡಿಯೊದ ಫ್ಯಾಕ್ಟ್ ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊವನ್ನು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಮಾಡಿದೆ. ಯೂಟ್ಯೂಬ್ ನಲ್ಲಿ 92 News ಎಂದು ಸರ್ಚ್ ಮಾಡಿದಾಗ ಪಾಕಿಸ್ತಾನ ಮೂಲದ ಸುದ್ದಿವಾಹಿನಿ ಇದು ಎಂದು ತಿಳಿದುಬಂದಿದೆ. ಈ ಸುದ್ದಿವಾಹಿನಿಯಲ್ಲಿ ಇಮ್ರಾನ್ ಖಾನ್ ಭಾಷಣದ 20 ಸೆಕೆಂಡ್ಗಳನ್ನು ಮಾತ್ರ ಹೆಡ್ಲೈನ್ನಲ್ಲಿ ತೋರಿಸಲಾಗಿದೆ.
ಇಡೀ ಭಾಷಣದ ಒಂದು ತುಣುಕು ಅಂದರೆ 0:56 ರಿಂದ 1:16 ಅವಧಿಯ ಭಾಷಣವೇ ವೈರಲ್ ಆಗಿರುವುದು. 1.16 ನಿಮಿಷದ ನಂತರ ಖಾನ್ ಅವರು ಭಾರತದಲ್ಲಿ ಫೇಕ್ ವೆಬ್ಸೈಟ್ಗಳ ಬಗ್ಗೆ ಇಯು ಡಿಸ್ಇನ್ಫೋಲ್ಯಾಬ್ ವರದಿಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಭಾರತದಲ್ಲಿ ಸುಳ್ಳು ಸುದ್ದಿಗಳು ಯಾವ ರೀತಿ ವ್ಯಾಪಿಸುತ್ತಿವೆ ಎಂದು ಈ ವರದಿ ಹೇಳಿತ್ತು.
ಇಮ್ರಾನ್ ಖಾನ್ ಭಾಷಣದಲ್ಲೇನಿದೆ?
ಡಿಸೆಂಬರ್ 26ರಂದು ಚಕ್ವಾಲ್ನಲ್ಲಿ ಇಮ್ರಾನ್ ಖಾನ್ ಭಾಷಣ ಮಾಡಿದ್ದಾರೆ. ಈ ಬಗ್ಗೆ 92 News HD ಸುದ್ದಿವಾಹಿನಿ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಭಾಷಣದ ಪೂರ್ತಿ ವಿಡಿಯೊ ನೋಡಿದರೆ 2.11 ನಿಮಿಷಕ್ಕೆ ತಲುಪುವಾಗ ಖಾನ್ ಇಯು ಡಿಸ್ಇನ್ಫೋಲ್ಯಾಬ್ ( EU DisinforLab) ವರದಿಯನ್ನು ಉಲ್ಲೇಖಿಸಿದ್ದಾರೆ. ವೈರಲ್ ಆಗಿರುವ ವಿಡಿಯೊ 5:57 ರಿಂದ 6:11 ನಡುವೆ ಇರುವುದಾಗಿದೆ.
5:57 ರ ನಂತರ ಖಾನ್ ಮಾತು ಹೀಗಿದೆ – ‘ಪಾಕಿಸ್ತಾನಕ್ಕೆ ಬಲವಾದ ಸೈನ್ಯ ಬೇಕು, ಅದು ಇಂದು. ಮತ್ತು ಏಕೆ? ಯಾಕೆಂದರೆ ನಮ್ಮ ನೆರೆ ರಾಷ್ಟ್ರವಾದ ಭಾರತದಲ್ಲಿ 73 ವರ್ಷಗಳಲ್ಲಿ ಈ ರೀತಿಯ ಸರ್ವಾಧಿಕಾರಿ, ವರ್ಣಭೇದ ನೀತಿ, ಮುಸ್ಲಿಂ ವಿರೋಧಿ, ಇಸ್ಲಾಂ ವಿರೋಧಿ, ಪಾಕಿಸ್ತಾನ ವಿರೋಧಿ ಮತ್ತು ಕಾಶ್ಮೀರದ ಮೇಲಿನ ವರ್ತನೆಯನ್ನು ನೋಡಿಲ್ಲ’ . ಅಂದರೆ ಇಮ್ರಾನ್ ಖಾನ್ , ಮೋದಿಯವರನ್ನು ಹೊಗಳಿಲ್ಲ ಎಂಬುದು ಇಲ್ಲಿ ಸ್ಪಷ್ಟ.
Fact Check | ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ಗೆ ಥಳಿತ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?
Published On - 9:07 pm, Thu, 14 January 21