ಆಸ್ಪತ್ರೆಯಲ್ಲಿ ಐಸಿಯು ಬೆಡ್ ಸಿಗದೆ ಮೃತಪಟ್ಟ ಸೋಂಕಿತೆ; ಕುಟುಂಬದವರಿಂದ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ, ದಾಂಧಲೆ
ರೋಗಿ ಮೃತಪಟ್ಟಿದ್ದರ ಬಗ್ಗೆ ನಮ್ಮ ಸಂತಾಪವಿದೆ. ಆದರೆ ನಾವು ನಮ್ಮ ಶಕ್ತಿಗೂ ಮೀರಿ ಆಕೆಯನ್ನು ಉಳಿಸಲು ಪ್ರಯತ್ನ ಪಟ್ಟಿದ್ದೆವು. ಆದರೂ ಕುಟುಂಬದವರು ಹಲ್ಲೆ ನಡೆಸಿದ್ದು ಶಾಕ್ ಆಗಿದೆ ಎಂದು ಆಸ್ಪತ್ರೆ ಬೇಸರ ವ್ಯಕ್ತಪಡಿಸಿದೆ.
ದೆಹಲಿ: ಇಲ್ಲಿನ ಸರಿತಾ ವಿಹಾರ್ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಕೊವಿಡ್ 19 ಸೋಂಕಿತರೊಬ್ಬರು ಮೃತಪಟ್ಟ ಬೆನ್ನಲ್ಲೇ ಆತನ ಕುಟುಂಬದವರು ದಾಂಧಲೆ ಎಬ್ಬಿಸಿದ್ದಾರೆ. ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೊರೊನಾ ಸೋಂಕಿತ 63 ವರ್ಷದ ಮಹಿಳೆಯೊಬ್ಬರನ್ನು ಇಂದು ಮುಂಜಾನೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐಸಿಯು ಬೆಡ್ ಸಿಗದೆ ಆಕೆ ಮೃತಪಟ್ಟಿದ್ದರು.
ಇದರಿಂದ ಸಿಟ್ಟಿಗೆದ್ದ ಆಕೆಯ ಕುಟುಂಬದವರು ಬೆಳಗ್ಗೆ ಸುಮಾರು 9 ಗಂಟೆ ಹೊತ್ತಿಗೆ ವೈದ್ಯರು, ನರ್ಸ್ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಮೃತ ಕೊವಿಡ್ ಸೋಂಕಿತೆಯ ಕುಟುಂಬದವರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗಿದೆ. ವೈದ್ಯರು, ನರ್ಸ್ಗಳ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆಸ್ಪತ್ರೆಯ ಕೆಲವು ಸಲಕರಣೆಗಳನ್ನೂ ಹಾಳುಗೆಡವಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆಗ್ನೇಯ ದೆಹಲಿ ಡಿಸಿಪಿ, ಘಟನೆಯ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಆಸ್ಪತ್ರೆಯವರಾಗಲಿ, ಮೃತ ಸೋಂಕಿತೆಯ ಕುಟುಂಬದವರಾಗಲೀ ಯಾರೂ ನಮ್ಮ ಬಳಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಘಟನೆಯ ಬಗ್ಗೆ ಮಾಹಿತಿ ನೀಡಿದ ಅಪೋಲೋ ಆಸ್ಪತ್ರೆ, ಮಹಿಳೆ ನಮ್ಮಲ್ಲಿಗೆ ಬರುವಾಗಲೇ ಆಕೆಯ ಪರಿಸ್ಥಿತಿ ತೀರ ಗಂಭೀರವಾಗಿತ್ತು. ಆದರೂ ನಮ್ಮ ವೈದ್ಯಕೀಯ ಸಿಬ್ಬಂದಿಗೆ ಆಕೆಗೆ ಸೂಕ್ತ ಚಿಕಿತ್ಸೆ ನೀಡಿದ್ದರು. ಆದರೆ ಇಲ್ಲಿ ಬೆಡ್ಗಳ ಕೊರತೆ ಇರುವುದರಿಂದ ಬೇರೊಂದು ಆಸ್ಪತ್ರೆಗೆ ದಾಖಲಿಸಲು ಕುಟುಂಬಕ್ಕೆ ಹೇಳಲಾಗಿತ್ತು. ಆದರೆ ದುರದೃಷ್ಟವಶಾತ್ ಅಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದರು. ಇದನ್ನೇ ನೆಪವನ್ನಾಗಿಟ್ಟುಕೊಂಡು ಕುಟುಂಬದವರು ಆಸ್ಪತ್ರೆಯಲ್ಲಿ ಗಲಾಟೆ ಎಬ್ಬಿಸಿದರು ಎಂದು ಹೇಳಿದೆ. ಆಸ್ಪತ್ರೆ ಸೆಕ್ಯೂರಿಟಿ ಸಿಬ್ಬಂದಿ, ಸ್ಥಳದಲ್ಲಿದ್ದ ಪೊಲೀಸರ ಸಹಾಯದಿಂದ ಪರಿಸ್ಥಿತಿ ನಿಯಂತ್ರಿಸಲಾಯಿತು ಎಂದೂ ತಿಳಿಸಿದೆ.
ರೋಗಿ ಮೃತಪಟ್ಟಿದ್ದರ ಬಗ್ಗೆ ನಮ್ಮ ಸಂತಾಪವಿದೆ. ಆದರೆ ನಾವು ನಮ್ಮ ಶಕ್ತಿಗೂ ಮೀರಿ ಆಕೆಯನ್ನು ಉಳಿಸಲು ಪ್ರಯತ್ನ ಪಟ್ಟಿದ್ದೆವು. ಆದರೂ ಕುಟುಂಬದವರು ಹಲ್ಲೆ ನಡೆಸಿದ್ದು ಶಾಕ್ ಆಗಿದೆ ಎಂದು ಆಸ್ಪತ್ರೆ ಬೇಸರ ವ್ಯಕ್ತಪಡಿಸಿದೆ.
ದೆಹಲಿಯಲ್ಲಿ ಆಕ್ಸಿಜನ್, ಬೆಡ್ಗಳ ಅಭಾವದಿಂದ ಸಾಯುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಆಸ್ಪತ್ರೆಗಳಿಗೆ ಪೊಲೀಸ್ ಭದ್ರತೆಯನ್ನು ನೀಡಲು ಸರ್ಕಾರಕ್ಕೆ ಸೂಚಿಸಿತ್ತು. ಅದರ ಅನ್ವಯ ಈಗ ಬಹುತೇಕ ಆಸ್ಪತ್ರೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಇದೆ. ಆದರೂ ಇಂಥ ಘಟನೆಗಳೂ ನಡೆಯುತ್ತಿವೆ.
Producer Ramu’s Last words : ಕೊನೆಯದಾಗಿ ‘ಕೋಟಿ’ ರಾಮು ಮಾತನಾಡಿರುವ ಆಡಿಯೋ!