ಶಾಸಕರ ಜೊತೆ ಜಟಾಪಟಿ; ಪೊಲೀಸ್ ಠಾಣೆಗೆ ಪಾದಯಾತ್ರೆ ನಡೆಸಿ ಪ್ರತಿಭಟಿಸಿದ ಹರ್ಯಾಣದ ರೈತ ಪ್ರತಿಭಟನಾಕಾರರು
ಶಾಸಕ ಬಬ್ಲಿ ಕ್ಷಮೆ ಕೇಳದಿದ್ದರೆ ಹರ್ಯಾಣದ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವುದಾಗಿ ರೈತರು ಹೇಳಿದ್ದಾರೆ. ರೈತ ಮುಖಂಡ ಗುರ್ನಮ್ ಸಿಂಗ್, ಪ್ರತಿಭಟನಾಕಾರರು ಶಾಂತ ರೀತಿಯಿಂದ ವರ್ತಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಚಂಡೀಗಡ: ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಹೊಂದಿರುವ ಜೆಜೆಪಿ ಪಕ್ಷದ ಶಾಸಕ ದೇವೇಂದ್ರ ಬಬ್ಲಿ ಎಂಬವರ ಜೊತೆ ನಡೆದ ಜಟಾಪಟಿಯ ಬಳಿಕ ಮೂವರು ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯನ್ನು ವಿರೋಧಿಸಿ ನೂರಾರು ರೈತರು ಹರ್ಯಾಣದ ತೊಹಾನ ಎಂಬಲ್ಲಿನ ಪೊಲೀಸ್ ಠಾಣೆಗೆ ಪಾದಯಾತ್ರೆ ನಡೆಸಿದ ಘಟನೆ ಇಂದು (ಜೂನ್ 5) ನಡೆದಿದೆ.
ರಾಕೇಶ್ ಟಿಕಾಯತ್, ಗುರ್ನಾಮ್ ಸಿಂಗ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಜೊತೆಗಿರುವ ರೈತರು, ಕೇಂದ್ರದ ನೂತನ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಹೀಗೆ ಪ್ರತಿಭಟನೆಯಲ್ಲಿ ತೊಡಗಿರುವ ವೇಳೆಗೆ ಶಾಸಕ ದೇವೇಂದ್ರ ಬಬ್ಲಿ ಕೆಟ್ಟ ಮಾತುಗಳನ್ನು ಬಳಸಿ ರೈತರನ್ನು ನಿಂದಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಆದರೆ, ಈ ದೂರನ್ನು ಶಾಸಕ ಬಬ್ಲಿ ಅಲ್ಲಗಳೆದಿದ್ದಾರೆ. ಬದಲಾಗಿ, ರೈತರೇ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ಧಾರೆ ಎಂದು ಆರೋಪಿಸಿದ್ದಾರೆ. ಮಂಗಳವಾರ ಈ ಜಟಾಪಟಿ ನಡೆದ ವೇಳೆಗೆ, ಶಾಸಕರು ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನವನ್ನು ಉದ್ಘಾಟಿಸಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದೇವೇಂದ್ರ ಬಬ್ಲಿ ರೈತ ನಾಯಕರೊಂದಿಗೆ ಈ ಬಗ್ಗೆ ತೊಹಾನದ ಬಲ್ಲಿಯಾಲ ರೆಸ್ಟ್ ಹೌಸ್ನಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಗುರುವಾರ ರೈತರು, ದೇವೇಂದ್ರ ಬಬ್ಲಿ ಪ್ರತಿಕೃತಿ ದಹಿಸಿ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಕ್ಷಮೆ ಕೇಳುವಂತೆಯೂ ಆಗ್ರಹಿಸಿದ್ಧಾರೆ.
ಘಟನೆಗೆ ಸಂಬಂಧಿಸಿ ಪ್ರತಿಭಟನಾಕಾರರ ವಿರುದ್ಧ ಎರಡು ಎಫ್ಐಆರ್ಗಳು ದಾಖಲಾಗಿವೆ. ಅದರಂತೆ, ದೇವೇಂದ್ರ ಬಬ್ಲಿ ವಾಹನವನ್ನು ಪ್ರತಿಭಟನಾಕಾರರು ಸುತ್ತುವರಿದಿದ್ಧಾರೆ. ಶಾಸಕರ ವಿರುದ್ಧ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ, ಪ್ರತಿಭಟನಾಕಾರರು ಶಾಸಕರ ಮನೆಯನ್ನೂ ಸುತ್ತುವರಿದಿದ್ದಾರೆ ಎಂದು ಆ ಬಳಿಕ ಮತ್ತೊಂದು ಎಫ್ಐಆರ್ ಕೂಡ ದಾಖಲಾಗಿದೆ.
ಶಾಸಕ ಬಬ್ಲಿ ಕ್ಷಮೆ ಕೇಳದಿದ್ದರೆ ಹರ್ಯಾಣದ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವುದಾಗಿ ರೈತರು ಹೇಳಿದ್ದಾರೆ. ರೈತ ಮುಖಂಡ ಗುರ್ನಮ್ ಸಿಂಗ್, ಪ್ರತಿಭಟನಾಕಾರರು ಶಾಂತ ರೀತಿಯಿಂದ ವರ್ತಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಪ್ರಧಾನಿ ಮೋದಿ ಬರುಬರುತ್ತ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ರಂತಾಗುತ್ತಿದ್ದಾರೆ..’: ರಾಕೇಶ್ ಟಿಕಾಯತ್
ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರ ಜತೆ ಮಾತುಕತೆಗೆ ಸಿದ್ಧ: ರಾಕೇಶ್ ಟಿಕಾಯತ್