ಬಜೆಟ್ ದಿನ ರೈತರ ಸಂಸತ್ ಮುತ್ತಿಗೆ ಯೋಜನೆ ಕೈಬಿಡುವ ಸಾಧ್ಯತೆ; ನಿನ್ನೆಯ ಹಿಂಸಾಚಾರದ ಬಳಿಕ ಚಿಂತನೆ
ರೈತರ ಹೋರಾಟ ಹೇಗೆ ಮುಂದುವರಿಸಬೇಕು ಎಂಬ ಬಗ್ಗೆ ಚರ್ಚಿಸಲು ಇಂದು ಮಧ್ಯಾಹ್ನ 2 ಗಂಟೆಗೆ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸಲಿದೆ.
ದೆಹಲಿ: ಬಜೆಟ್ ದಿನ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಬಗ್ಗೆ ಹಾಕಿಕೊಂಡಿದ್ದ ಯೋಜನೆಯನ್ನು ರೈತರು ಕೈಬಿಡುವ ಸಾಧ್ಯತೆ ಅಂದಾಜಿಸಲಾಗಿದೆ. ಈ ಮೊದಲು, ರೈತರು ಸಂಸತ್ವರೆಗೆ ಮೆರವಣಿಗೆ ತೆರಳಿ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ, ದೆಹಲಿಯಲ್ಲಿ ನಿನ್ನೆಯ ಹಿಂಸಾಚಾರ ಘಟನೆಯ ಬಳಿಕ ಈ ಯೋಜನೆಯನ್ನು ಕೈಬಿಡಲು ಚಿಂತನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಎರಡು ತಿಂಗಳಿನಿಂದ ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ನಿನ್ನೆ ಟ್ರಾಕ್ಟರ್ ರ್ಯಾಲಿ ನಡೆಸಲು ಉದ್ದೇಶಿಸಿದ್ದರು. ಅದರಂತೆ ಆರಂಭವಾದ ಟ್ರಾಕ್ಟರ್ ಪರೇಡ್ ಬಳಿಕ ಅತಿರೇಕದ ಘಟನಾವಳಿಗಳಿಗೆ ಸಾಕ್ಷಿಯಾಯಿತು. ಹಿಂಸಾತ್ಮಕ ಕೃತ್ಯಗಳು ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ನಡೆದವು. ಇದೀಗ ರೈತ ಹೋರಾಟ ದಿಕ್ಕು ತಪ್ಪಿದಂತಾಗಿದ್ದು, ಹೋರಾಟವನ್ನು ಮತ್ತೆ ಸುಸೂತ್ರವಾಗಿ ರೂಪಿಸಲು ಕಿಸಾನ್ ಮೋರ್ಚಾ ಉದ್ದೇಶಿಸಿದೆ.
ಮಧ್ಯಾಹ್ನ 2 ಗಂಟೆಗೆ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ಕಿಸಾನ್ ಮೋರ್ಚಾ ಇಂದು ಮಧ್ಯಾಹ್ನ 2 ಗಂಟೆಗೆ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ಕರೆದಿದೆ. ದೆಹಲಿಯ ಗಡಿ ಭಾಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸಲಿದೆ. ರೈತರ ಹೋರಾಟ ಹೇಗೆ ಮುಂದುವರಿಸಬೇಕು ಎಂಬ ಬಗ್ಗೆ ಈ ವೇಳೆ ಚರ್ಚೆಯಾಗಲಿದೆ.
65 ದಿನದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದ ರೈತರು ಮತ್ತೆ ಶಾಂತಿಯುತ ಹೋರಾಟ ಮುಂದುವರಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಯಲಿದೆ. 39 ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಭಾಗಿಯಾಗಲಿದೆ.
ಕೆಂಪುಕೋಟೆ ಘಟನೆ ಬಗ್ಗೆ ಉನ್ನತ ಮಟ್ಟದ ಸಭೆ, ಕೆಂಪುಕೋಟೆ ಸ್ಥಳ ಪರಿಶೀಲನೆ ಮಾಡಿದ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್
Published On - 2:39 pm, Wed, 27 January 21