ಕೆಂಪುಕೋಟೆ ಅಹಿತಕರ ಘಟನೆಗಳಿಂದ ಬೇಸತ್ತು ಚಳುವಳಿಯಿಂದ ಹಿಂದೆ ಸರಿದ 2 ರೈತ ಸಂಘಟನೆಗಳು

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಭಾರತೀಯ ಕಿಸಾನ್​ ಯೂನಿಯನ್​ ಭಾನುಪ್ರತಾಪ್ ಬಣ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿದಿವೆ.

  • TV9 Web Team
  • Published On - 18:14 PM, 27 Jan 2021
ಪೊಲೀಸ್ ಬ್ಯಾರಿಕೇಡ್​ಗಳು ಧ್ವಂಸವಾದವು.

ದೆಹಲಿ: ನಿನ್ನೆ ನಡೆದ ಅಹಿತಕರ ಘಟನೆಗಳು, ಹಿಂಸಾತ್ಮಕ ಕೃತ್ಯಗಳಿಂದ ಮನನೊಂದ ಎರಡು ರೈತಪರ ಸಂಘಟನೆಗಳು ಕಿಸಾನ್ ಆಂದೋಲನದಿಂದ ಹಿಂದೆ ಸರಿಯುತ್ತಿರುವುದಾಗಿ ಇಂದು (ಜ.27) ಘೋಷಿಸಿಕೊಂಡಿವೆ. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಭಾರತೀಯ ಕಿಸಾನ್​ ಯೂನಿಯನ್​ ಬಾನುಪ್ರತಾಪ್ ಬಣ ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿದಿವೆ.

ಈ ಕುರಿತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ರೈತ ಮುಖಂಡ ವಿ.ಎಂ.ಸಿಂಗ್ ಮಾತನಾಡಿದ್ದಾರೆ. ನಾವು ತಕ್ಷಣದಿಂದ ರೈತರ ಪ್ರತಿಭಟನೆ ಹಿಂಪಡೆಯುತ್ತೇವೆ. ಪ್ರತಿಭಟನೆಯಿಂದ ತಕ್ಷಣ ಹಿಂದೆ ಸರಿಯುತ್ತೇವೆ. ಬೇರೆಯವರ ನಿರ್ದೇಶನದ ಮೇರೆಗೆ ಪ್ರತಿಭಟನೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಸಮಿತಿಯು ಧರಣಿಯಿಂದ ತಕ್ಷಣವೇ ಹಿಂದೆ ಸರಿಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ನೀಡುವ ಖಚಿತತೆ ನೀಡುವವರೆಗೂ ಹೋರಾಟ ಮಾಡುತ್ತೇವೆ. ಆದರೆ, ಇಂತಹ ಚಳುವಳಿಯನ್ನು ಮಾಡಲು ಹೋಗುವುದಿಲ್ಲ. ನಾವು ಪ್ರಾಣ ಕಳೆದುಕೊಳ್ಳುವುದಕ್ಕೆ ಇಲ್ಲಿಗೆ ಬಂದಿಲ್ಲ ಎಂದು ರೈತ ಮುಖಂಡ ವಿ.ಎಂ.ಸಿಂಗ್ ತಿಳಿಸಿದ್ದಾರೆ. ನಿನ್ನೆ ನಡೆದಿರುವ ಘಟನೆಗಳಿಂದ ನಾನು ಮನನೊಂದಿದ್ದೇನೆ. ಆದ್ದರಿಂದ, 58 ದಿನಗಳಿಂದ ನಡೆಸುತ್ತಿರುವ ಈ ಚಳುವಳಿಯಿಂದ ಹಿಂದೆ ಸರಿಯುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಭಾನು ಪ್ರತಾಪ್ ಬಣ) ಅಧ್ಯಕ್ಷ ಠಾಕೂರ್ ಭಾನು ಪ್ರತಾಪ್ ಸಿಂಗ್ ಚಿಲ್ಲಾ ಗಡಿಭಾಗದಲ್ಲಿ ಹೇಳಿಕೆ ನೀಡಿದ್ದಾರೆ.

ಬಜೆಟ್ ದಿನ ರೈತರ ಸಂಸತ್ ಮುತ್ತಿಗೆ ಯೋಜನೆ ಕೈಬಿಡುವ ಸಾಧ್ಯತೆ; ನಿನ್ನೆಯ ಹಿಂಸಾಚಾರದ ಬಳಿಕ ಚಿಂತನೆ