ದೆಹಲಿ: ರಾಷ್ಟ್ರ ರಾಜಧಾನಿಯ ಇಬ್ಬರು ಸಹಾಯಕ ಸಬ್ ಇನ್ಸ್ಪೆಕ್ಟರ್ ಮೇಲೆ ಪ್ರತಿಭಟನಾ ನಿರತ ರೈತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಿಂಘು ಗಡಿಯಲ್ಲಿ ಕೇಂದ್ರದ ನೂತನ ಕೃಷಿ ಕಾಯ್ದೆಯ ವಿರುದ್ಧ ಹೋರಾಡುತ್ತಿರುವ ರೈತರು ಗುರುವಾರ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿ ಪೊಲೀಸ್ ವಿಭಾಗದ ವಿಶೇಷ ಅಧಿಕಾರಿಗಳ ತಂಡ ಸ್ಥಳಕ್ಕೆ ರಕ್ಷಣಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲು ತೆರಳಿತ್ತು. ಈ ಸಂದರ್ಭ ಇಬ್ಬರು ಪೊಲೀಸರು ಫೋಟೊ ಹಾಗೂ ವಿಡಿಯೋ ಶೂಟ್ ಮಾಡುತ್ತಿದ್ದರು. ಆಗ ಪ್ರತಿಭಟನಾ ರೈತರ ಗುಂಪು ಅವರನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕೇವಲ ತಮ್ಮ ಕರ್ತವ್ಯವನ್ನಷ್ಟೇ ನಿರ್ವಹಿಸುತ್ತಿದ್ದರು. ಆಗ ರೈತ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಓರ್ವ ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮತ್ತೊಬ್ಬರ ಕೈಗಂಟು ಮೂಳೆಗೆ ಏಟಾಗಿದೆ. ಘಟನೆಯ ಬಗ್ಗೆ ನರೆಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಹರ್ಯಾಣದ ರೈತ ಪ್ರತಿಭಟನಾಕಾರರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಿಂಘು ಗಡಿಭಾಗಕ್ಕೆ ಬರುತ್ತಿದ್ದಾರೆ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಪೊಲೀಸರು ಮತ್ತಷ್ಟು ಸಂಖ್ಯೆಯ ಪೊಲೀಸರನ್ನು ಗಡಿಭಾಗಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಕೆಲವು ಆರೋಪಿಗಳನ್ನು ಪತ್ತೆಹಚ್ಚಲಾಗಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಪೊಲೀಸರು ಸಿವಿಲ್ ಡ್ರೆಸ್ ಕೋಡ್ನಲ್ಲಿ ಇದ್ದರು. ಸಮವಸ್ತ್ರ ಧರಿಸಿರಲಿಲ್ಲ. ಹಾಗಾಗಿ, ಅವರನ್ನು ತಪ್ಪು ತಿಳಿದು ಈ ಘಟನೆ ನಡೆದಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Farmers Protest: ಜೂನ್ 26ರಂದು ದೇಶಾದ್ಯಂತ ರೈತರ ಪ್ರತಿಭಟನೆ; ರಾಜಭವನದ ಮುಂದೆ ಕಪ್ಪು ಬಾವುಟ ಹಿಡಿದು ಧರಣಿ
ಹರ್ಯಾಣದ ತೋಹನಾ ಪೊಲೀಸ್ ಠಾಣೆಯ ಆವರಣದಲ್ಲಿ ರೈತರ ಪ್ರತಿಭಟನೆ; ಇಬ್ಬರು ರೈತರು ಜೈಲಿನಿಂದ ಬಿಡುಗಡೆ