ಹರ್ಯಾಣದ ತೋಹನಾ ಪೊಲೀಸ್ ಠಾಣೆಯ ಆವರಣದಲ್ಲಿ ರೈತರ ಪ್ರತಿಭಟನೆ; ಇಬ್ಬರು ರೈತರು ಜೈಲಿನಿಂದ ಬಿಡುಗಡೆ

ಹರ್ಯಾಣದ ತೋಹನಾ ಪೊಲೀಸ್ ಠಾಣೆಯ ಆವರಣದಲ್ಲಿ ರೈತರ ಪ್ರತಿಭಟನೆ; ಇಬ್ಬರು ರೈತರು ಜೈಲಿನಿಂದ  ಬಿಡುಗಡೆ
ಬಂಧಮುಕ್ತವಾದ ರೈತರು

Farmers Protest: ರೈತರು ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ನಾವು ಇನ್ನು ಮುಂದೆ  ತೋಹಾನಾ ಪೊಲೀಸ್ ಠಾಣೆ  ಘೆರಾವ್  ಮಾಡದಿರಲು ನಿರ್ಧರಿಸಿದ್ದೇವೆ. ಇನ್ನೂ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ, ಆತನನ್ನು ಬಿಡುಗಡೆ ಮಾಡಲು ಪೊಲೀಸ್ ಆಡಳಿತದೊಂದಿಗೆ ಮಾತುಕತೆ ನಡೆಯುತ್ತಿದೆ "ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

TV9kannada Web Team

| Edited By: Rashmi Kallakatta

Jun 07, 2021 | 11:31 AM

ಫತೇಹಾಬಾದ್ (ಹರ್ಯಾಣ): ಹರ್ಯಾಣದ ಫತೇಹಾಬಾದ್ ಜಿಲ್ಲೆಯ ತೋಹಾನಾದಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ವಾರಾಂತ್ಯದಲ್ಲಿ ತೀವ್ರಗೊಂಡಿದ್ದು, ನೂರಾರು ಪ್ರತಿಭಟನಾಕಾರರು ಸದರ್ ಪೊಲೀಸ್ ಠಾಣೆಗೆ ತೆರಳಿ ಠಾಣೆಯ ಆವರಣದಲ್ಲಿ ಟೆಂಟ್ ನಿರ್ಮಿಸಿದರು. ಈ ಪೈಕಿ ಪ್ರತಿಭಟನಾಕಾರರೊಬ್ಬರು ಹಸುವನ್ನೂ ತನ್ನ ಜತೆಗೆ ಕರೆತಂದಿದ್ದರು. ಮನೆಯಲ್ಲಿ ಹಸುವನ್ನು ನೋಡಿಕೊಳ್ಳಲು ಯಾರೂ ಇಲ್ಲ.ಹಾಗಾಗಿ ಪ್ರತಿಭಟನೆಗೂ ಅದನ್ನು ಕರೆ ತಂದೆ ಎಂದು ಆ ರೈತ ಹೇಳಿದ್ದಾರೆ.

ತೋಹಾನಾದ ಜೆಜೆಪಿ ಶಾಸಕ ದೇವೇಂದರ್ ಬಾಬ್ಲಿ ಅವರ ನಿವಾಸದಲ್ಲಿ ಜೂನ್ 1 ರಂದು ನಡೆದ ಪ್ರತಿಭಟನೆಯ ವೇಳೆ ಬಂಧಿತರಾದ ಇಬ್ಬರು ರೈತರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.  ಶನಿವಾರ 60 ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ರೈತರ ಗುಂಪು ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ ಮಾಡಿದ್ದಾರೆ. ರೈತ ಮುಖಂಡರಾದ ಗುರ್ನಮ್ ಸಿಂಗ್ ಚಾದುನಿ, ರಾಕೇಶ್ ಟಿಕಾಯತ್ ಮತ್ತು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಕೂಡ ಶನಿವಾರ ರಾತ್ರಿ ಪ್ರತಿಭಟನಾಕಾರರೊಂದಿಗೆ ಕಳೆದರು. ಭಾನುವಾರ, ಪಂಜಾಬ್ ರೈತ ಮುಖಂಡ ಜೋಗಿಂದರ್ ಸಿಂಗ್ ಉಗ್ರಾಹನ್ ರೈತರೊಂದಿಗೆ ಸೇರಿಕೊಂಡರು.

ಸೋಮವಾರ ಬೆಳಗ್ಗೆ ಲಭಿಸಿದ ಮಾಹಿತಿ ಪ್ರಕಾರ ಇಬ್ಬರು ರೈತರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ನಾವು ಇನ್ನು ಮುಂದೆ  ತೋಹಾನಾ ಪೊಲೀಸ್ ಠಾಣೆ  ಘೆರಾವ್  ಮಾಡದಿರಲು ನಿರ್ಧರಿಸಿದ್ದೇವೆ. ಇನ್ನೂ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ, ಆತನನ್ನು ಬಿಡುಗಡೆ ಮಾಡಲು ಪೊಲೀಸ್ ಆಡಳಿತದೊಂದಿಗೆ ಮಾತುಕತೆ ನಡೆಯುತ್ತಿದೆ “ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಭಾನುವಾರವಿಡೀ ಪ್ರತಿಭಟನಾಕಾರರು ಪೊಲೀಸ್ ಠಾಣೆ ಆವರಣದಲ್ಲಿ ಕೂತು ಪ್ರತಿಭಟನೆ ನಡೆಸಿದ್ದಾರೆ. ಹತ್ತಿರದ ಪ್ರದೇಶಗಳ ರೈತರು ಆಹಾರ ಮತ್ತು ಕುಡಿಯುವ ನೀರನ್ನು ಪೂರೈಸುತ್ತಿದ್ದಾರೆಎಂದು ಥಾನಾದಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರಾದ ಮಂದೀಪ್ ನಾಥ್ವಾನ್ ಹೇಳಿದ್ದಾರೆ.

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ, ರೈತರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾದಾಗಲೆಲ್ಲಾ ಆಡಳಿತಾರೂಢ ಒಕ್ಕೂಟದ ಭಾಗವಾಗಿರುವ ಪಕ್ಷಗಳಾದ ಬಿಜೆಪಿ ಮತ್ತು ಜೆಜೆಪಿಯ ನಾಯಕರನ್ನು ಘೆರಾವ್ ಮಾಡುತ್ತಿದ್ದಾರೆ. ಜೂನ್ 1 ರಂದು, ತೋಹಾನಾದ ಸರ್ಕಾರಿ ಆಸ್ಪತ್ರೆಯಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬಾಬ್ಲಿ ತೆರಳುತ್ತಿದ್ದಾಗ, ರೈತರು ಅವರ ಕಾರನ್ನು ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ. ನಂತರದ ಘರ್ಷಣೆಯಲ್ಲಿ, ಬಾಬ್ಲಿಯ ವೈಯಕ್ತಿಕ ಸಹಾಯಕನ ತಲೆಗೆ ಪೆಟ್ಟಾಯಿತು ಮತ್ತು ಶಾಸಕರ ವಾಹನದ ವಿಂಡ್‌ಸ್ಕ್ರೀನ್ ಅನ್ನು ರೈತರು ಒಡೆದಿದ್ದಾರೆ ಎಂಬ ಆರೋಪವಿದೆ. ಪ್ರತಿಭಟನಾಕಾರರ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ.

ಶನಿವಾರದ ವೇಳೆಗೆ, ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದವರನ್ನು “ಕ್ಷಮಿಸಿದ್ದಾರೆ” ಎಂದು ಘೋಷಿಸಿದರು ಮತ್ತು ಘರ್ಷಣೆಯ ಸಮಯದಲ್ಲಿ ಮಾಡಿದ “ನಿಂದನೆಗಳಿಗೆ” ಕ್ಷಮೆಯಾಚಿಸಿದರು. ರೈತರು ಈ ವಿಷಯವನ್ನು ಪರಿಹರಿಸಲಾಗಿದೆ ಮತ್ತು ಎರಡು ಎಫ್‌ಐಆರ್ ಗಳನ್ನು ಹಿಂಪಡೆಯಲಾಗುವುದು ಎಂದು ಹೇಳಿದ್ದಾರೆ.

ಆದರೆ ವಿವಾದವಾಗಿ ಉಳಿದಿರುವುದು ಅದೇ ದಿನ, ಜೂನ್ 1 ರಂದು ತೋಹಾನಾದಲ್ಲಿರುವ ಬಾಬ್ಲಿಯ ನಿವಾಸದ ಮುಂದೆ ನಡೆದ ಪ್ರತಿಭಟನೆಯ ವಿರುದ್ಧ ಸಲ್ಲಿಸಿದ ಮತ್ತೊಂದು ಎಫ್‌ಐಆರ್. ಈ ಪ್ರತಿಭಟನೆಗೆ ಸಂಬಂಧಿಸಿದಂತೆ 27 ರೈತರನ್ನು ಬಂಧಿಸಲಾಗಿದೆ. ಇತರರನ್ನು ಬಿಡುಗಡೆ ಮಾಡಿದರೆ, ಇಬ್ಬರು ರೈತರು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದರ್ ಪೊಲೀಸ್ ಠಾಣೆಯಲ್ಲಿ ಪ್ರತಿಭಟನಾಕಾರರು ಈ ಇಬ್ಬರು ರೈತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದರು.

ಭಾನುವಾರ ರೈತ ಮುಖಂಡರು ಮತ್ತು ಜಿಲ್ಲಾ ಮಟ್ಟದ ಆಡಳಿತ ಅಧಿಕಾರಿಗಳ ನಡುವಿನ ಮಾತುಕತೆ ವಿಫಲವಾದ ಕಾರಣ, ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದರು. “ನಮ್ಮ ರೈತ ಸಹೋದರರನ್ನು ಬಿಡುಗಡೆ ಮಾಡುವ ಬಗ್ಗೆ ಆಡಳಿತವು ಯಾವುದೇ ಭರವಸೆ ನೀಡದ ಕಾರಣ ಮಾತುಕತೆ ಅಪೇಕ್ಷಿತ ಫಲಿತಾಂಶವನ್ನು ನೀಡಿಲ್ಲ. ಅವರನ್ನು ಬಿಡುಗಡೆ ಮಾಡುವವರೆಗೂ ನಾವು ತೋಹಾನಾ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ ”ಎಂದು ರೈತ ಮುಖಂಡ ಸುರೇಶ್ ಕೋತ್ ಹೇಳಿದ್ದಾರೆ.

“ಈ ಪರಿಸ್ಥಿತಿಯನ್ನು ಸೃಷ್ಟಿಸಿದ ಸರ್ಕಾರದ ಕಡೆಯಿಂದ ಇದು ಸಂಪೂರ್ಣ ದುರಹಂಕಾರವಾಗಿದೆ. ಶಾಸಕರು ಈಗಾಗಲೇ ಕ್ಷಮೆಯಾಚಿಸಿದ್ದಾರೆ ಮತ್ತು ಅವರ ದೂರನ್ನು ಹಿಂಪಡೆಯಲು ಒಪ್ಪಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಬಾಕಿ ಇರುವ ಪ್ರಕರಣದಲ್ಲಿ, ಆಸ್ತಿಪಾಸ್ತಿಗೆ ಹಾನಿ ಅಥವಾ ಹಿಂಸಾಚಾರದ ಆರೋಪವೂ ಇಲ್ಲ. ಆಗಲೂ ಪ್ರಕರಣ ಹಿಂತೆಗೆದುಕೊಳ್ಳಲು ಸರ್ಕಾರ ಒಪ್ಪಲಿಲ್ಲ. ಸರ್ಕಾರ ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಏಕೆ ಮಾಡುತ್ತಿದೆ? ” ಎಂದು ಯೋಗೇಂದ್ರ ಯಾದವ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಮಾತುಕತೆ ವಿಫಲವಾದ ಕಾರಣ, ಪ್ರತಿಭಟನಾಕಾರರು ಸೋಮವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣೆ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ತಿಳಿಸಿದ್ದಾರೆ. “ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ನಮ್ಮ ಪೊಲೀಸರು ಇಡೀ ರಾತ್ರಿ ಜಾಗರೂಕರಾಗಿದ್ದರು” ಎಂದು ಅವರು ಹೇಳಿದರು.

ಇದನ್ನೂ ಓದಿ: ಶಾಸಕರ ಜೊತೆ ಜಟಾಪಟಿ; ಪೊಲೀಸ್ ಠಾಣೆಗೆ ಪಾದಯಾತ್ರೆ ನಡೆಸಿ ಪ್ರತಿಭಟಿಸಿದ ಹರ್ಯಾಣದ ರೈತ ಪ್ರತಿಭಟನಾಕಾರರು

Follow us on

Related Stories

Most Read Stories

Click on your DTH Provider to Add TV9 Kannada