ಜನಮನ ಗೆದ್ದ ಸದ್ಭಾವನೆ: ಭಾಷಣದ ವೇಳೆ ನೀರು ಕೇಳಿದ ಅಧಿಕಾರಿಗೆ ಕುಡಿಯುವ ನೀರು ಕೊಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 09, 2022 | 12:57 PM

Nirmala Sitharaman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸಹೃದಯ ನಡವಳಿಕೆಯ ಕಾರಣಕ್ಕೆ ಇಡೀ ದೇಶದ ಗಮನ ಸೆಳೆದಿದ್ದಾರೆ.

ಜನಮನ ಗೆದ್ದ ಸದ್ಭಾವನೆ: ಭಾಷಣದ ವೇಳೆ ನೀರು ಕೇಳಿದ ಅಧಿಕಾರಿಗೆ ಕುಡಿಯುವ ನೀರು ಕೊಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಎನ್​ಎಸ್​ಡಿಎಲ್ ಎಂಡಿ ಪದ್ಮಜಾ ಚುಂಡೂರು ಮತ್ತು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್
Follow us on

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸಹೃದಯ ನಡವಳಿಕೆಯ ಕಾರಣಕ್ಕೆ ಇಡೀ ದೇಶದ ಗಮನ ಸೆಳೆದಿದ್ದಾರೆ. ಇಡೀ ದೇಶದ ಆರ್ಥಿಕತೆ ನಿರ್ವಹಿಸುವ ಮಹತ್ವದ ಜವಾಬ್ದಾರಿ ಹೊತ್ತಿದ್ದರೂ ಅತ್ಯಂತ ಸರಳವಾಗಿ ವರ್ತಿಸುವುದು ಮತ್ತು ಮಾನವೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿರ್ಮಲಾ ಅವರ ಹೆಗ್ಗಳಿಕೆ. ಅಧಿಕಾರದ ದೃಷ್ಟಿಯಿಂದ ತಮ್ಮ ಸ್ಥಾನಮಾನಕ್ಕೆ ಹೋಲಿಸಿದರೆ ಕೆಳಗಿನ ಹುದ್ದೆಯ ಅಧಿಕಾರಿಯೊಬ್ಬರಿಗೆ ಕುಡಿಯುವ ನೀರು ತಂದುಕೊಡುವ ಮೂಲಕ ಮತ್ತೊಮ್ಮೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದ್ದಾರೆ. ಅಧಿಕಾರಿ ಬಾಯಾರಿದೆ ಎಂದು ಹೇಳಿದಾಗ, ಸಚಿವೆ ಬಾಟಲಿ ತಂದು, ಅದರ ಮುಚ್ಚಳ ತೆಗೆದು ನೀರು ಕೊಡಲು ಹೋಗುವ ದೃಶ್ಯ ವೈರಲ್ ಆಗಿದೆ.

ಷೇರುಪೇಟೆ ವಹಿವಾಟಿನ ದಾಖಲೆಗಳನ್ನು ನಿಯಂತ್ರಿಸುವ ಎನ್​ಎಸ್​ಡಿಎಲ್ (National Securities Depository Limited – NSDL)ಸಂಸ್ಥೆಯ ಪದ್ಮಜಾ ಚುಂಡೂರು ಅವರೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ‘ಮಾರ್ಕೆಟ್​ ಕಾ ಏಕಲವ್ಯ’ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಲ್ಲಿ ಹೂಡಿಕೆ ಸಂಬಂಧ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಭೆಯನ್ನು ಎನ್​ಎಸ್​ಡಿಎಲ್ ಆಗಾಗ ನಡೆಸುತ್ತಿರುತ್ತದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್​ಎಸ್​ಡಿಎಲ್​ನ ಎಂಡಿ ಚುಂಡೂರು ಅವರು ತಮ್ಮ ಭಾಷಣ ನಿಲ್ಲಿಸಿ, ನೀರು ಬೇಕು ಎಂದು ಕೇಳಿದರು.

ಈ ವೇಳೆ ತಾವು ಕುಳಿತಿದ್ದ ಸ್ಥಳದಿಂದ ಮೇಲೆದ್ದು ಬಂದ ಸಚಿವರು, ಚುಂಡೂರು ಅವರಿಗೆ ನೀರು ಕೊಟ್ಟರು. ಸಚಿವರ ನಡವಳಿಕೆಯಿಂದ ಕೃತಜ್ಞತೆ ತುಂಬಿದ ಸಂತೋಷವನ್ನು ತಡೆದುಕೊಳ್ಳಲು ಆಗದ ಚುಂಡೂರು ಅವರು ತಕ್ಷಣ ಸಚಿವರ ಬಳಿಗೆ ಹೋಗಿ ಕೃತಜ್ಞತೆ ಅರ್ಪಿಸಿದರು. ನೆರೆದಿದ್ದ ಸಭಿಕರು ಸಹ ಚಪ್ಪಾಳೆ ತಟ್ಟುವ ಮೂಲಕ ನಿರ್ಮಲಾ ಸೀತಾರಾಮನ್ ಅವರನ್ನು ಶ್ಲಾಘಿಸಿದರು. ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿಯೂ ‘ಮಾರ್ಕೆಟ್​ ಕಾ ಏಕಲವ್ಯ’ ಮಾಹಿತಿ ಲಭ್ಯವಾಗುವ ಉಪಕ್ರಮಕ್ಕೂ ಸಚಿವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ಆನ್​ಲೈನ್​ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಸೆಕ್ಯುರಿಟಿಸ್ ಮತ್ತು ಹಣಕಾಸು ಮಾರುಕಟ್ಟೆಗಳ ತರಬೇತಿ ಒದಗಿಸುವ ಉದ್ದೇಶವನ್ನು ‘ಮಾರ್ಕೆಟ್​ ಕಾ ಏಕಲವ್ಯ’ ಹೊಂದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಮಾರ್ಕೆಟ್​ ಕಾ ಏಕಲವ್ಯ ಉಪಕ್ರಮದ ಮೂಲಕ ಆರ್ಥಿಕ ಸಾಕ್ಷರತೆ ಹೆಚ್ಚಿಸಲು ಹಣಕಾಸು ಇಲಾಖೆ ಯತ್ನಿಸುತ್ತಿದೆ. ಮಾರುಕಟ್ಟೆ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಜನರು ಇಷ್ಟಪಡುತ್ತಿರುವ ಸಂದರ್ಭದಲ್ಲಿಯೇ ಎನ್​ಎಸ್​ಡಿಎಲ್ ಈ ಕ್ರಮಕ್ಕೆ ಮುಂದಾಗಿರುವುದು ಶ್ಲಾಘನೀಯ ಬೆಳವಣಿಗೆ ಎಂದು ತಿಳಿಸಿದರು.

ಎನ್​ಎಸ್​ಡಿಎಲ್​ 1996ರಿಂದ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ 2.7 ಕೋಟಿಗೂ ಹೆಚ್ಚು ಡಿಮ್ಯಾಟ್ ಅಕೌಂಟ್​ಗಳು ಎನ್​ಎಸ್​ಡಿಎಲ್​ನಲ್ಲಿವೆ. ಸುಮಾರು 4 ಲಕ್ಷಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಸೆಕ್ಯುರಿಟಿಗಳು ಎನ್​ಎಸ್​ಡಿಎಲ್​ ಬಳಿಯಿವೆ. ಈ ಮೊತ್ತವು ಶೀಘ್ರ 5 ಲಕ್ಷ ಕೋಟಿ ಮುಟ್ಟಲಿದೆ ಎಂದು ಎನ್​ಎಸ್​ಡಿಎಲ್ ವ್ಯವಸ್ಥಾಪಕ ನಿರ್ದೇಶಕಿ ಚುಂಡೂರು ಹೇಳಿದರು.

ಇದನ್ನೂ ಓದಿ: Digital Currency: ದೇಶದಲ್ಲಿ 2023ರ ಹೊತ್ತಿಗೆ ಡಿಜಿಟಲ್ ಕರೆನ್ಸಿ ಪರಿಚಯಿಸುವ ಗುರಿ ಇದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: ಪಿಎಫ್ ಪರಿಷ್ಕೃತ​ ಬಡ್ಡಿ ದರವು ಇಂದಿನ ವಾಸ್ತವ ಸ್ಥಿತಿಯನ್ನು ಪ್ರತಿನಿಧಿಸುತ್ತದೆ: ನಿರ್ಮಲಾ ಸೀತಾರಾಮನ್

Published On - 12:57 pm, Mon, 9 May 22