AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಭದ್ರತೆ ದೃಷ್ಟಿಯಿಂದ ನವಜೋತ್ ಸಿಂಗ್ ಪಂಜಾಬಿನ ಮುಖ್ಯಮಂತ್ರಿಯಾಗುವುದನ್ನು ವಿರೋಧಿಸುತ್ತೇನೆ: ಅಮರೀಂದರ್ ಸಿಂಗ್

ಕಾಂಗ್ರೆಸ್ ಪಕ್ಷದ ಪ್ರಾದೇಶಿಕ ನಾಯಕರಲ್ಲಿ ಅತ್ಯಂತ ಪ್ರಮುಖರೆನಿಸಿಕೊಂಡಿರುವ ಅಮರೀಂದರ್ ಸಿಂಗ್ ಶನಿವಾರದಂದು ನಿರ್ಣಾಯಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿದ ಸ್ವಲ್ಪ ಹೊತ್ತಿನಲ್ಲೇ ಸೋನಿಯಾ ಗಾಂಧಿ ಅವರೊಂದಿಗೆ ಮಾತಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ದೇಶದ ಭದ್ರತೆ ದೃಷ್ಟಿಯಿಂದ ನವಜೋತ್ ಸಿಂಗ್ ಪಂಜಾಬಿನ ಮುಖ್ಯಮಂತ್ರಿಯಾಗುವುದನ್ನು ವಿರೋಧಿಸುತ್ತೇನೆ: ಅಮರೀಂದರ್ ಸಿಂಗ್
ಕ್ಯಾಪ್ಟನ್ ಅಮರೀಂದರ್ ಸಿಂಗ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 18, 2021 | 11:53 PM

Share

ಚಡೀಗಢ್: ಪಂಜಾಬನಲ್ಲಿ ತಮ್ಮ ಬದ್ಧ ವೈರಿ ಮತ್ತು ರಾಜ್ಯ ಕಾಂಗ್ರೆಸ್​ನ ಮುಖ್ಯಸ್ಥರಾಗಿರುವ ನವಜೋತ ಸಿಂಗ್ ಸಿಧು ಅವರೊಂದಿಗಿನ ಮುಗಿಯದ ವೈಮನಸ್ಸಿನಿಂದ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಶನಿವಾರದಂದು ಕೆಳಗಿಳಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಧು ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಅಂಗೀಕರಿಸುವುದು ಸಾಧ್ಯವಿಲ್ಲ ಎಂದು ಹೇಳಿದರಲ್ಲದೆ ತಾವು ಕಾಂಗ್ರೆಸ್ ತೊರೆಯುವ ಸಾಧ್ಯತೆಯನ್ನು ನಿರಾಕರಿಸಲಿಲ್ಲ.

ಎನ್ ಡಿ ಟಿ ವಿ ಸುದ್ದಿಸಂಸ್ಥೆಯೊಂದಿಗೆ ಮಾತಾಡಿದ ಸಿಂಗ್ ಅವರು, ‘ನನ್ನ ದೇಶದ ಹಿತರಕ್ಷಣೆಗೋಸ್ಕರ ನವಜೋತ್ ಸಿಧು ಪಂಜಾಬಿನ ಮುಖ್ಯಮಂತ್ರಿಯಾಗುವುದನ್ನು ನಾನು ವಿರೋಧಿಸುತ್ತೇನೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ. ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮತ್ತು ಸಿಧು ಸ್ನೇಹಿತರು ಹಾಗೂ ಅಲ್ಲಿಯ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವಾ ಅವರೊಂದಿಗೆ ಸಹ ಸಿಧು ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ,’ ಎಂದು ಹೇಳಿದರು.

‘ನವಜೋತ್ ಸಿಂಗ್ ಸಿಧು ಒಬ್ಬ ಅಯೋಗ್ಯ ವ್ಯಕ್ತಿಯಾಗಿದ್ದಾರೆ. ನನ್ನ ಸರ್ಕಾರದಲ್ಲಿ ಅವರೊಬ್ಬ ನಿಷ್ಪ್ರಯೋಜಕ ಸಚಿವರಾಗಿದ್ದರು. ಆತನಿಗೆ ನಾನು ಕೊಟ್ಟಿದ್ದ ಖಾತೆಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಏಳು ತಿಂಗಳವರಗೆ ಅವರಿಗೆ ಫೈಲ್ಗಳನ್ನು ಕ್ಲೀಯರ್ ಮಾಡುವುದು ಕೂಡ ಸಾಧ್ಯವಾಗಲಿಲ್ಲ, ಎಂದು ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್​ನಲ್ಲೇ  ಉಳಿಯುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಅವರು, ‘ಸದ್ಯಕ್ಕೆ ಉತ್ತರಿಸಲು ಆಗದ ಪ್ರಶ್ನೆ ಇದು,’ ಎಂದರು.

ಇದಕ್ಕೂ ಮುನ್ನ ಎ ಎನ್ ಐ ಜೊತೆ ಮಾತಾಡಿದ್ದ ಸಿಂಗ್ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೊದಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಅವರಿಗೆ ಫೋನ್ ಮಾಡಿದಾಗ ಅವರೇನು ಹೇಳಿದರೆನ್ನುವುದನ್ನು ಬಹಿರಂಗಪಡಿಸಿದರು. ತನಗೆ ಅವಮಾನವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಸೋನಿಯಾಗೆ ಹೇಳಿದಾಗ ಅವರು, ‘ನೀವು ಎದುರಿಸುತ್ತಿರುವ ಪರಿಸ್ಥಿತಿ ಬಗ್ಗೆ ನನಗೆ ವಿಷಾದವೆನಿಸುತ್ತಿದೆ,’ ಎಂದರು ಅಂತ ಸಿಂಗ್ ಹೇಳಿದರು.

ತಾವು ಮೂರನೇ ಬಾರಿ ಅಪಮಾನಕ್ಕೊಳಗಾಗಿರುವುದಾಗಿ ಹೇಳಿದ ಅಮರೀಂದರ್ ರಾಜೀನಾಮೆ ಸಲ್ಲಿಸುವ ಮೂಲಕ ತಮ್ಮ ಒಂದು ಹಂತದ ಅಸಮಾಧಾನ ಕೊನೆಗೊಂಡಿದೆಯಾದರೂ ಮುಂದಿನ 4 ತಿಂಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್ ಪಕ್ಷದ ಅನಿಶ್ಚಿತತೆ ಮುಂದುವರಿಯಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಪ್ರಾದೇಶಿಕ ನಾಯಕರಲ್ಲಿ ಅತ್ಯಂತ ಪ್ರಮುಖರೆನಿಸಿಕೊಂಡಿರುವ ಅಮರೀಂದರ್ ಸಿಂಗ್ ಶನಿವಾರದಂದು ನಿರ್ಣಾಯಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿದ ಸ್ವಲ್ಪ ಹೊತ್ತಿನಲ್ಲೇ ಸೋನಿಯಾ ಗಾಂಧಿ ಅವರೊಂದಿಗೆ ಮಾತಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

‘ವಿಷಯವೇನೆಂದರೆ, ಪಕ್ಷ ಮೂರನೇ ಸಲ ಶಾಸಕರೊಂದಿಗೆ ಸಭೆ ನಡೆಸಿದೆ. ನನ್ನ ಬಗ್ಗೆ ಯಾರಲ್ಲಾದರೂ ಒಂದೇ ಕಣದಷ್ಟು ಅನುಮಾನವಿದ್ದರೆ ಅದು ನನಗೆ ಅವಮಾನವಾದಂತೆ,’ ಎಂದು ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಬನ್ವರಿ ಲಾಲ್ ಪುರೋಹಿತ್ ಅವರಿಗೆ ಸಲ್ಲಿಸಿದ ನಂತರ ಪಂಜಾಬ ರಾಜ ಭವನ್ ಎದುರು ನೆರೆದಿದ್ದ ಸುದ್ದಿಗಾರರಿಗೆ ಅವರು ಹೇಳಿದರು.

ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ಅವರ ಎರಡು ಬಣಗಳ ನಡುವೆ ನಡೆಯುತ್ತಿದ್ದ ಸಂಘರ್ಷಕ್ಕೆ ಪುಟವಿಟ್ಟಂತೆ ಸುಮಾರು 50 ಶಾಸಕರು ಸೋನಿಯ ಅವರಿಗೆ ಪತ್ರವೊಂದನ್ನು ಬರೆದು ಮುಖ್ಯಮಂತ್ರಿಯನ್ನು ಬದಲಾಯಿಸಬೇಕೆಂದು ಆಗ್ರಹಿಸಿದ್ದರು. ಹಿರಿಯ ಕಾಂಗ್ರೆಸ್ ಧುರೀಣರ ವಿರೋಧದ ಹೊರತಾಗಿಯೂ ಸಿಧು ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

117-ಸದಸ್ಯರ ರಾಜ್ಯ ವಿಧಾನ ಸಭೆಯಲ್ಲಿ ಕಾಂಗ್ರೆಸ್ 80 ಶಾಸಕರನ್ನು ಹೊಂದಿದೆ.

ಇದನ್ನೂ ಓದಿ:  Punjab Politics: ಪಂಜಾಬ್​​ ಸಿಎಂ ಅಮರಿಂದರ್​ ಸಿಂಗ್​ ರಾಜೀನಾಮೆ?-ಬಿಜೆಪಿ ಹಾದಿಯನ್ನೇ ತುಳಿಯಿತಾ ಕಾಂಗ್ರೆಸ್​ !