Punjab Politics: ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ರಾಜೀನಾಮೆ?-ಬಿಜೆಪಿ ಹಾದಿಯನ್ನೇ ತುಳಿಯಿತಾ ಕಾಂಗ್ರೆಸ್ !
ಮುಂದಿನ ಮುಖ್ಯಮಂತ್ರಿಗಳು ಯಾರು ಎಂಬ ಬಗ್ಗೆಯೂ ಊಹಾಪೋಹಗಳು ಹರಿದಾಡುತ್ತಿದ್ದು, ಸುನಿಲ್ ಜಖರ್, ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಪ್ರತಾಪಸಿಂಹ ಬಾಜ್ವಾ ಹೆಸರು ಕೇಳಿಬರುತ್ತಿದೆ.

ಚಂಡಿಗಢ್: ಪಂಜಾಬ್ನ ಕಾಂಗ್ರೆಸ್ ಸರ್ಕಾರದಲ್ಲಿ ಎದ್ದಿರುವ ಬಿಕ್ಕಟ್ಟು ಅದ್ಯಾಕೋ ಸರಿಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಅಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ಅವರ ನಡುವಿನ ವಿವಾದ ಮುಗಿದಂತಿಲ್ಲ. ಈ ಮಧ್ಯೆ ಸಿಎಂ ಅಮರಿಂದರ್ ಸಿಂಗ್ ಅವರ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಕೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಬಳಿಕ ನಿರ್ಧಾರ ಸ್ಪಷ್ಟವಾಗಲಿದೆ.
ಪಂಜಾಬ್ ಮುಖ್ಯಮಂತ್ರಿಯನ್ನು ಬದಲಿಸುವಂತೆ ಅನೇಕ ಶಾಸಕರು ಹೈಕಮಾಂಡ್ಗೆ ಒತ್ತಡ ಹೇರಿದ್ದಾರೆ. ಆದರೆ ಅಮರಿಂದರ್ ಸಿಂಗ್ ರಾಜೀನಾಮೆ ನೀಡಲು ಸಿದ್ಧರಿಲ್ಲ ಎಂದು ಹೇಳಲಾಗಿತ್ತು. ಆದರೆ ಇದೀಗ ಇನ್ನೊಂದು ಮಾಹಿತಿ ಬಂದಿದೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತುಂಬ ಕ್ರೋಧಗೊಂಡಿದ್ದಾರೆ. ‘ಇಂಥ ಅವಮಾನ ಸಹಿಸಿಕೊಂಡು ಪಕ್ಷದಲ್ಲಿ ಇರಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹೇಳಿದ್ದಾರೆ ಎಂದು ಬಲವಾದ ಮೂಲಗಳಿಂದಲೇ ತಿಳಿದುಬಂದಿದೆ. ಸದ್ಯಕ್ಕಂತೂ ಎಲ್ಲರ ಗಮನ ಇಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಮೇಲೇ ನೆಟ್ಟಿದೆ.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಎರಡು ವರ್ಷಗಳಿಂದ ಸಂಘರ್ಷ ಇದ್ದೇ ಇದೆ. ನವಜೋತ್ ಸಿಂಗ್ ಸಿಧು ಸತತವಾಗಿ ಅಮರಿಂದರ್ ಸಿಂಗ್ ವಿರುದ್ಧ ಟೀಕೆ ಮಾಡುತ್ತಲೇ ಬಂದಿದ್ದರು. ಇವರಿಬ್ಬರ ಜಗಳ ಎರಡು ತಿಂಗಳ ಹಿಂದೆ ತಾರಕ್ಕಕ್ಕೇರಿತ್ತು. ಬರುವ ವರ್ಷ ಫೆಬ್ರವರಿ-ಮಾರ್ಚ್ ವೇಳೆಗೆ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಪಕ್ಷದಲ್ಲಿ ಇಂಥ ಕಿತ್ತಾಟ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ, ಮುಖ್ಯಮಂತ್ರಿಯಾಗಿ ಅಮರಿಂದರ್ ಸಿಂಗ್ ಮುಂದುವರಿಯಲಿ, ಹಾಗೇ, ನವಜೋತ್ ಸಿಂಗ್ ಸಿಧು, ಪಂಜಾಬ್ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಲಿ ಎಂದು ಹೇಳಿತ್ತು. ಇನ್ನೇನು ಎಲ್ಲ ಸರಿಯಾಯ್ತು ಎಂದುಕೊಳ್ಳುತ್ತಿರುವ ಹೊತ್ತಲ್ಲಿ ಇದೀಗ ಮುಖ್ಯಮಂತ್ರಿ ಬದಲಾವಣೆ ಮಾತು ಬಲವಾಗಿ ಕೇಳಿಬರುತ್ತಿದೆ.
ಬಿಜೆಪಿ ಹಾದಿಯಲ್ಲಿ ಕಾಂಗ್ರೆಸ್? ವಿಧಾನಸಭೆ ಚುನಾವಣೆಯ ಹೊತ್ತಲ್ಲಿ ಬಿಜೆಪಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ದಿಢೀರ್ ಎಂದು ಬದಲಾವಣೆ ಮಾಡುತ್ತಿದೆ. ಉತ್ತರಾಖಂಡ, ಕರ್ನಾಟಕ ಮತ್ತು ಇತ್ತೀಚೆಗೆ ಗುಜರಾತ್ ಆ ಸಾಲಿಗೆ ಸೇರ್ಪಡೆಯಾಗಿವೆ. ಗುಜರಾತ್ನಲ್ಲಂತೂ ಇನ್ನೊಂದೇ ವರ್ಷ ಬಾಕಿ ಇರುವಾಗ ಮೊನ್ನೆ ತಾನೇ ವಿಜಯ್ ರೂಪಾನಿಯವರನ್ನು ಕೆಳಗಿಳಿಸಿ, ಒಂದೇ ಬಾರಿ ಶಾಸಕರಾದ ಅನುಭವ ಇರುವ ಭೂಪೇಂದ್ರ ಪಟೇಲ್ರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಇದೀಗ ಕಾಂಗ್ರೆಸ್ ಕೂಡ ಪಂಜಾಬ್ನಲ್ಲಿ ಇದೇ ಮಾರ್ಗ ಅನುಸರಿಸಿದೆ. ಅಮರಿಂದರ್ ಸಿಂಗ್ರನ್ನು ಕೆಳಗಿಳಿಸಲು ಒಂದು ವರ್ಗದ ಶಾಸಕರ, ಕೆಲವು ಕಾಂಗ್ರೆಸ್ ನಾಯಕರ ಒತ್ತಡ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಮುಂದಿನ ಮುಖ್ಯಮಂತ್ರಿ ಯಾರು? ಮೊನ್ನೆ ತಾನೆ ಒಲಿಂಪಿಕ್ಸ್ ವಿಜೇತರಿಗೆ ಭರ್ಜರಿ ಔತಣ ಕೂಟ ನೀಡಿದ್ದ ಅಮರಿಂದರ್ ಸಿಂಗ್ ಇಂದು ರಾಜೀನಾಮೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸ್ವತಃ ಅವರೇ ಪಕ್ಷ ಬಿಡಲೂ ಸಿದ್ಧರಾಗಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಇನ್ನು ಮುಂದಿನ ಮುಖ್ಯಮಂತ್ರಿಗಳು ಯಾರು ಎಂಬ ಬಗ್ಗೆಯೂ ಊಹಾಪೋಹಗಳು ಹರಿದಾಡುತ್ತಿದ್ದು, ಸುನಿಲ್ ಜಖರ್, ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಪ್ರತಾಪಸಿಂಹ ಬಾಜ್ವಾ ಮತ್ತು ಬಿಯಾಂತ್ ಸಿಂಗ್ ಅವರ ಮೊಮ್ಮಗ, ಸಂಸದ ರಣನೀತ್ ಸಿಂಗ್ ಬಿಟ್ಟು ಅವರ ಹೆಸರು ಮುಂಚೂಣಿಯಲ್ಲಿದೆ.
ಇದನ್ನೂ ಓದಿ: 2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಠಾಣೆಯ ಇನ್ಸ್ಟ್ಪೆಕ್ಟರ್ ಎಸಿಬಿ ಬಲೆಗೆ!
Bigg Boss OTT Finale: ಬಿಗ್ ಬಾಸ್ ಓಟಿಟಿ ಫಿನಾಲೆಯ ಟಾಪ್ 5ರಲ್ಲಿ ಶಮಿತಾ ಶೆಟ್ಟಿ; ಗೆದ್ದರೆ ಸಿಗುವ ಹಣವೆಷ್ಟು?
Published On - 2:15 pm, Sat, 18 September 21




