Bigg Boss OTT Finale: ಬಿಗ್ ಬಾಸ್ ಓಟಿಟಿ ಫಿನಾಲೆಯ ಟಾಪ್ 5ರಲ್ಲಿ ಶಮಿತಾ ಶೆಟ್ಟಿ; ಗೆದ್ದರೆ ಸಿಗುವ ಹಣವೆಷ್ಟು?
Shamita Shetty: ಕರಣ್ ಜೋಹರ್ ಪಕ್ಷಪಾತ ಮಾಡುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಆದರೆ ಫಿನಾಲೆಯಲ್ಲಿ ಯಾರಿಗೆ ಎಷ್ಟು ವೋಟ್ ಬಂದಿದೆ ಎಂಬುದನ್ನು ಬಹಿರಂಗಪಡಿಸಿದರೆ ಇಂಥ ಪಕ್ಷಪಾತದ ಕಣ್ಣಾಮುಚ್ಚಾಲೆ ಆಟ ನಡೆಯುವುದಿಲ್ಲ.
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಪ್ರಯೋಗ ಮಾಡಲಾಯಿತು. ‘ಬಿಗ್ ಬಾಸ್ ಓಟಿಟಿ’ ಎಂಬ ಹೊಸ ಕಾನ್ಸೆಪ್ಟ್ ಪರಿಚಯಿಸಲಾಯಿತು. ಈಗ ಆ ಶೋ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಹಲವು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ 5 ಮಂದಿ ಫಿನಾಲೆ ತಲುಪಿದ್ದಾರೆ. ಮಾಮೂಲಿ ಬಿಗ್ ಬಾಸ್ ರೀತಿಯೇ ಅದ್ದೂರಿ ವೇದಿಕೆ ಮೇಲೆ ಇದರ ಫಿನಾಲೆ ಕಾರ್ಯಕ್ರಮ ಇಂದು (ಸೆ.18) ನಡೆಯಲಿದೆ. ಆದರೆ ಇದು ಪ್ರಸಾರವಾಗುವುದು ವೂಟ್ ಓಟಿಟಿಯಲ್ಲಿ ಮಾತ್ರ. ಕೊನೆ ಎಪಿಸೋಡ್ ಅನ್ನು ನಿರೂಪಕ ಕರಣ್ ಜೋಹರ್ ಇನ್ನಷ್ಟು ಕಲರ್ಫುಲ್ ಆಗಿ ನಡೆಸಿಕೊಡಲಿದ್ದಾರೆ.
ಫಿನಾಲೆಯಲ್ಲಿ ಶಮಿತಾ ಶೆಟ್ಟಿ ಜೊತೆ 4 ಮಂದಿ
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರು ಈ ಶೋನಲ್ಲಿ ಭಾಗವಹಿಸಿದ್ದು, ಈಗ ಫಿನಾಲೆ ತಲುಪಿದ್ದಾರೆ. ಅವರ ಜೊತೆ ರಾಕೇಶ್ ಬಾಪಟ್, ದಿವ್ಯಾ ಅಗರ್ವಾಲ್, ನಿಶಾಂತ್ ಭಟ್ ಹಾಗೂ ಪ್ರತೀಕ್ ಸೆಹಜ್ಪಾಲ್ ಫಿನಾಲೆಯಲ್ಲಿ ಟಫ್ ಸ್ಪರ್ಧೆ ನೀಡುತ್ತಿದ್ದಾರೆ. ಅಂತಿಮವಾಗಿ ಯಾರು ವಿನ್ನರ್ ಆಗುತ್ತಾರೆ ಎಂಬ ಕೌತುಕ ಮನೆ ಮಾಡಿದೆ.
ವಿನ್ನರ್ಗೆ ಸಿಗಲಿದೆ 55 ಲಕ್ಷ ರೂ.?
ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ನಡೆದಿದ್ದು ಕೆಲವೇ ದಿನಗಳಾದರೂ ಕೂಡ ದೊಡ್ಡ ಮೊತ್ತದ ಹಣವನ್ನೇ ಬಹುಮಾನವಾಗಿ ನೀಡಲಾಗುತ್ತಿದೆ. ಬಹುಮಾನ ಮೊತ್ತ ಎಷ್ಟು ಎಂದು ಈವರೆಗೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಮೂಲಗಳ ಪ್ರಕಾರ, ವಿನ್ನರ್ ಆದವರು ಬರೋಬ್ಬರಿ 55 ಲಕ್ಷ ರೂ.ಗಳನ್ನು ಜೇಬಿಗೆ ಇಳಿಸಿಕೊಳ್ಳಲಿದ್ದಾರೆ. ಅದರ ಜೊತೆ ಆಕರ್ಷಕವಾದ ಟ್ರೋಫಿ ಕೂಡ ಸಿಗಲಿದೆ.
ಎಷ್ಟು ಗಂಟೆಗೆ ಫಿನಾಲೆ ಪ್ರಸಾರ?
ವೂಟ್ನಲ್ಲಿ ಮಾತ್ರ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಸೆ.18ರ ಶನಿವಾರ ಸಂಜೆ 7 ಗಂಟೆಗೆ ಫಿನಾಲೆ ಎಪಿಸೋಡ್ ಆರಂಭ ಆಗಲಿದೆ. ‘ಈ ಶೋ ಮಿಸ್ ಮಾಡಿಕೊಳ್ಳುವುದು ಮಹಾ ಪಾಪ’ ಎಂದು ಪ್ರೋಮೋನಲ್ಲಿ ನಿರೂಪಕ ಕರಣ್ ಜೋಹರ್ ಹೇಳಿದ್ದು, ಸಖತ್ ನಿರೀಕ್ಷೆ ಮೂಡಿಸಿದ್ದಾರೆ.
View this post on Instagram
ಕರಣ್ ಜೋಹರ್ ಪಕ್ಷಪಾತ ಮಾಡುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಫಿಲ್ಮೀ ಕುಟುಂಬದಿಂದ ಬಂದವರಿಗೆ ಅವರು ಮೊದಲ ಆದ್ಯತೆ ನೀಡುತ್ತಾರೆ ಎನ್ನಲಾಗುತ್ತಿದೆ. ಶಮಿತಾ ಶೆಟ್ಟಿ ಬಗ್ಗೆ ಅವರು ಅನೇಕ ಬಾರಿ ಮೃದು ಧೋರಣೆ ತೋರಿದ ಉದಾಹರಣೆ ಇದೆ. ಫಿನಾಲೆಯಲ್ಲೂ ಅದು ಮುಂದುವರಿದರೆ ಶಮಿತಾ ವಿನ್ನರ್ ಆಗುವ ಸಾಧ್ಯತೆ ಇದೆ. ಆದರೆ ಯಾರಿಗೆ ಎಷ್ಟು ವೋಟ್ ಬಂದಿದೆ ಎಂಬುದನ್ನು ಬಹಿರಂಗಪಡಿಸಿದರೆ ಮಾತ್ರ ಪಕ್ಷಪಾತದ ಕಣ್ಣಾಮುಚ್ಚಾಲೆ ಆಟ ನಡೆಯುವುದಿಲ್ಲ.
ಇದನ್ನೂ ಓದಿ:
ಶಮಿತಾ ಶೆಟ್ಟಿ-ರಾಕೇಶ್ ಬಾಪಟ್ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ
‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್ ಬಾಪಟ್