Covid Booster Dose: ಇಂದಿನಿಂದ 75 ದಿನಗಳವರೆಗೆ ಎಲ್ಲರಿಗೂ ಉಚಿತ ಕೊವಿಡ್ ಬೂಸ್ಟರ್ ಡೋಸ್ ಲಸಿಕೆ
ಸರ್ಕಾರ ಆರಂಭಿಸಿರುವ ಲಸಿಕಾ ಕೇಂದ್ರಗಳಲ್ಲಿ ಇಂದಿನಿಂದ 75 ದಿನಗಳ ಕಾಲ ಎಲ್ಲ ಅರ್ಹ ನಾಗರಿಕರು ಉಚಿತವಾಗಿ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು.
ದೆಹಲಿ: ದೇಶದ ಎಲ್ಲ ವಯಸ್ಕರಿಗೆ ಇಂದಿನಿಂದ ಕೊವಿಡ್ ಬೂಸ್ಟರ್ ಲಸಿಕೆಯನ್ನು ಉಚಿತವಾಗಿ ನೀಡುವ ಮಹತ್ವಾಕಾಂಕ್ಷಿ ಆಂದೋಲನ ಇಂದಿನಿಂದ ಆರಂಭವಾಗಿದೆ. ಸರ್ಕಾರ ಆರಂಭಿಸಿರುವ ಲಸಿಕಾ ಕೇಂದ್ರಗಳಲ್ಲಿ ಇಂದಿನಿಂದ 75 ದಿನಗಳ ಕಾಲ ಎಲ್ಲ ಅರ್ಹ ನಾಗರಿಕರು ಉಚಿತವಾಗಿ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಸಂಭ್ರಮಾಚರಣೆಯ ಭಾಗವಾಗಿ ಉಚಿತ ಬೂಸ್ಟರ್ ಡೋಸ್ ನೀಡುವ ಅಭಿಯಾನವನ್ನು ಆರಂಭವಾಗಲಿದೆ.
ಉದ್ದೇಶಿತ ಗುರಿಯಾಗಿರುವ 18ರಿಂದ 59 ವರ್ಷ ವಯೋಮಾನದವರ ಪೈಕಿ ಶೇ 1ಕ್ಕಿಂತಲೂ ಕಡಿಮೆ ಪ್ರಮಾಣದ ಜನರು ಮುಂಜಾಗ್ರತಾ ಕ್ರಮವಾಗಿ ನೀಡುವ ಬೂಸ್ಟರ್ ಡೋಸ್ ಪಡೆದಿದ್ದಾರೆ. ದೇಶದಲ್ಲಿ ಪ್ರಸ್ತುತ ಈ ವಯೋಮಾನದವರ ಸಂಖ್ಯೆ 77 ಕೋಟಿ ಇದೆ. 60 ವರ್ಷಕ್ಕೂ ಹೆಚ್ಚಿನ ವಯೋಮಾನದವರು ಹಾಗೂ ಆರೋಗ್ಯ ಕಾರ್ಯಕರ್ತರ ಪೈಕಿ ಶೇ 26ರಷ್ಟು ಜನರು ಬೂಸ್ಟರ್ ಡೋಸ್ ಪಡೆದಿದ್ದಾರೆ. ಈ ವರ್ಗದಲ್ಲಿ ಈವರೆಗೆ 16 ಕೋಟಿ ಮಂದಿ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಜುಲೈ 15ರಿಂದ ಸೆ30ರವರೆಗೂ ಉಚಿತ ಲಸಿಕೆ ನೀಡಲಾಗುವುದು. ರಾಜ್ಯಾದ್ಯಂತ ಜಿಲ್ಲಾ, ತಾಲೂಕು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 18 ರಿಂದ 59 ವರ್ಷದವರಿಗೆ ಕೊರೊನಾ ಮೂರನೇ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಈವರೆಗೆ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತವಾಗಿ 3ನೇ ಡೋಸ್ ಲಭ್ಯವಿತ್ತು. ಇದುವರೆಗೂ ರಾಜ್ಯದಲ್ಲಿ ಕೇವಲ ನಾಲ್ಕು ಲಕ್ಷ ಮಂದಿ ಮಾತ್ರವೇ ಶುಲ್ಕ ಪಾವತಿಸಿ ಬೂಸ್ಟರ್ ಡೋಸ್ಟರ್ ಲಸಿಕೆ ಪಡೆದುಕೊಂಡಿದ್ದರು.
As part of #AzadiKaAmritMahotsav celebrations, free COVID-19 Precaution Dose drive for all adults for the next 75 days has commenced. I urge all eligibles to get their Precaution Dose.
PM @NarendraModi Ji’s Govt is committed to creating a Healthy & Safe India.
— Dr Mansukh Mandaviya (@mansukhmandviya) July 15, 2022
ಕೊರೊನಾ 2ನೇ ಅಲೆ ಕಾಣಿಸಿಕೊಳ್ಳುವವರೆಗೂ ದೇಶದಲ್ಲಿ ಕೊವಿಡ್ ಲಸಿಕೆ ಪಡೆಯಲು ಜನರು ಹೆಚ್ಚು ಉತ್ಸಾಹ ತೋರಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಜನರು ಸರದಿಯಲ್ಲಿ ನಿಂತು ಲಸಿಕೆ ಪಡೆದುಕೊಂಡರು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research – ICMR) ಮತ್ತು ಇತರ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಬೂಸ್ಟರ್ ಡೋಸ್ ಪಡೆಯುವುದರಿಂದ ಸೋಂಕು ತಗಲುವ ಸಾಧ್ಯತೆ ಕಡಿಮೆ ಎಂದು ಹೇಳಿವೆ.
Published On - 8:13 am, Fri, 15 July 22