ಅಗತ್ಯ ಸೇವಕರು, ವಯಸ್ಸಾದವರಿಗೆ ಮೊದಲು ಕೊರೊನಾ ವೈರಸ್ ಲಸಿಕೆ- ಪ್ರಧಾನಿ ಮೋದಿ
ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ ಕೊರೊನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಸ್ಪಷ್ಟ ಚಿತ್ರಣ ನೀಡಿದ್ದಾರೆ. ಯಾರಿಗೆ ಈ ಲಸಿಕೆಯನ್ನು ಮೊದಲು ನೀಡಲಾಗುತ್ತದೆ ಎನ್ನುವ ಬಗ್ಗೆ ಹೇಳಿದ್ದಾರೆ.
ನವದೆಹಲಿ: ವೈದ್ಯಕೀಯ ಕ್ಷೇತ್ರ, ಅಗತ್ಯ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಹಾಗೂ ವಯಸ್ಸಾದವರಿಗೆ ಕೊರೊನಾ ಔಷಧವನ್ನು ಮೊದಲು ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಔಷಧ ದೇಶಕ್ಕೆ ಬಂದ ನಂತರದಲ್ಲಿ ಅದನ್ನು ಮೊದಲು ಯಾರಿಗೆ ನೀಡಲಾಗುತ್ತದೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿತ್ತು. ಇದಕ್ಕೆ ಸರ್ಕಾರ ಕೂಡ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ ಕೊರೊನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಸ್ಪಷ್ಟ ಚಿತ್ರಣ ನೀಡಿದ್ದಾರೆ.
“ಮುಂದಿನ ಕೆಲವೇ ವಾರಗಳಲ್ಲಿ ಕೊವಿಡ್ ಔಷಧ ಸಿದ್ಧಗೊಳ್ಳಲಿದೆ ಎಂಬುದು ತಜ್ಞರ ಅಭಿಪ್ರಾಯ. ವಿಜ್ಞಾನಿಗಳು ಔಷಧಕ್ಕೆ ಹಸಿರು ನಿಶಾನೆ ತೋರಿದ ನಂತರದಲ್ಲಿ ಭಾರತದಲ್ಲಿ ನಾವು ಅದನ್ನು ಹಂಚಲು ಪ್ರಾರಂಭಿಸುತ್ತೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಅಗತ್ಯ ಸೇವೆಗಳನ್ನು ನೀಡುವವರು ಹಾಗೂ ವಯಸ್ಸಾದವರಿಗೆ ಮೊದಲ ಆದ್ಯತೆ ನೀಡುತ್ತೇವೆ,” ಎಂದು ಮೋದಿ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ.
“ಕೊರೊನಾ ಔಷಧ ಹಂಚಿಕೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಔಷಧ ಹಂಚಿಕೆ ವಿಚಾರದಲ್ಲಿ ಹೊರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಅಗಾಧ ಜ್ಞಾನ ಹೊಂದಿರುವ ತಜ್ಞರಿದ್ದಾರೆ,” ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯು ವಿಚಾರದಲ್ಲಿ ಭಾರತದ ವಿಜ್ಞಾನಿಗಳು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ. ಕಡಿಮೆ ಬೆಲೆಯಲ್ಲಿ ಹಾಗೂ ಸುರಕ್ಷಿತ ಔಷಧ ಕಂಡು ಹಿಡಿಯುವಲ್ಲಿ ಭಾರತದ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲ ರಾಷ್ಟ್ರಗಳ ದೃಷ್ಟಿ ಭಾರತದ ಮೇಲಿದೆ,” ಎಂದರು ಮೋದಿ.
ಕೊರೊನಾ ಲಸಿಕೆ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಸಿಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ