ಮಳೆ ದೇವರ ಸಂತೃಪ್ತಿಗಾಗಿ ಹರೆಯದ ಹುಡುಗಿಯರ ಬೆತ್ತಲೆ ಮೆರವಣಿಗೆ; ಪಾಲಕರೇ ನಡೆಸುವ ಮೂಢ ಆಚರಣೆ
ಹದಿಹರೆಯದ ಯುವತಿಯರು ತಮ್ಮ ಭುಜದ ಮೇಲೆ ಮರದ ಈಟಿಯನ್ನು ಹೊತ್ತುಕೊಂಡು ಮೆರವಣಿಗೆ ಮಾಡಬೇಕು. ಆ ಮರದ ಈಟಿಯ ಮೇಲೆ ಕಪ್ಪೆಯನ್ನು ಕಟ್ಟಿಡಲಾಗುತ್ತದೆ.
ಕೆಲವು ಮೂಢನಂಬಿಕೆಗಳನ್ನು, ಮೂಢ ಆಚರಣೆಗಳನ್ನು ಜನರು ಬಿಡೋದಿಲ್ಲ ಎಂಬುದು ಇದೀಗ ಮತ್ತೆ ಸಾಬೀತಾಗಿದೆ. ಮಳೆ ಬಾರದೆ, ಬರಗಾಲದ ಪರಿಸ್ಥಿತಿ ಉಂಟಾಗಿದ್ದರಿಂದ ಹೆದರಿದ ಹಳ್ಳಿಗರು, ಮಳೆ ದೇವರನ್ನು ಸಂತೃಪ್ತಿ ಪಡಿಸಲು ಆರು ಯುವತಿಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಮಳೆಯಾಗದಿದ್ದರೆ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದು ಉಂಟು, ಕೆಲವು ಹೋಮ-ಹವನಾದಿಗಳನ್ನು ಮಾಡುವುದೂ ಇದೆ. ಇವೆಲ್ಲ ಯಾರಿಗೂ ಅಪಾಯ ಆಗುವಂಥದ್ದಲ್ಲ. ಅವಮಾನ ಆಗುವಂಥದ್ದಲ್ಲ..ಮಾನ ಹೋಗುವಂಥದ್ದೂ ಅಲ್ಲ. ಆದರೆ ಹೀಗೆ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದು ತೀರ ಹೀನ ಕೃತ್ಯವಾಗಿದ್ದು, ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ದಾಮೋಹ್ ಜಿಲ್ಲೆಯಿಂದ 50 ಕಿಮೀ ದೂರದಲ್ಲಿರುವ ಬನಿಯಾ ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಹೀಗೊಂದು ಆಚರಣೆ ನಡೆದಿದೆ. ಇಲ್ಲಿ ಬೆತ್ತಲೆ ಸಾಗಿದ ಹುಡುಗಿಯರು ಅಪ್ರಾಪ್ತೆಯರಾದರೂ ಪುಟ್ಟ ಮಕ್ಕಳಲ್ಲ. ಇವರೆಲ್ಲ ಹದಿಹರೆಯಕ್ಕೆ ಕಾಲಿಟ್ಟವರು. ಸದ್ಯ ಘಟನೆಯ ಬಗೆಗಿನ ವರದಿಯನ್ನು ಜಿಲ್ಲಾಡಳಿತ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಕಳಿಸಿಕೊಟ್ಟಿದೆ.
ಈ ಬಗ್ಗೆ ಮಾತನಾಡಿದ ದಾಮೋಹ್ ಪೊಲೀಸ್ ಅಧಿಕಾರಿ ಡಿ.ಆರ್. ತೆನಿವಾರ್, ಸಾಕಷ್ಟು ಮಳೆಯಾಗಲಿಲ್ಲ. ಹೀಗಾದರೆ ಬರಗಾಲ ಕಟ್ಟಿಟ್ಟ ಬುತ್ತಿ ಎಂದು ಭಾವಿಸಿದ ಸ್ಥಳೀಯರು ವರುಣ ದೇವನ ಸಂತೃಪ್ತಿಗೊಳಿಸಲು ಹೀಗೊಂದು ಆಚರಣೆ ನಡೆಸಿದ್ದಾಗಿ ನಮಗೂ ಮಾಹಿತಿ ಬಂದಿದೆ. ನಾವು ಘಟನೆಯ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದೇವೆ. ಇದೊಂದು ಮೂಢ, ಹೀನ ಆಚರಣೆಯಾಗಿದೆ. ಈ ಹುಡುಗಿಯರನ್ನು ಬಲವಂತವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದು ಸಾಬೀತಾದರೆ ನಾವು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.
ಆಚರಣೆ ಏನು? ಸ್ಥಳೀಯರ ನಂಬಿಕೆಯ ಆಚರಣೆ ಇದಾಗಿದ್ದು.. ಹದಿಹರೆಯದ ಯುವತಿಯರು ತಮ್ಮ ಭುಜದ ಮೇಲೆ ಮರದ ಈಟಿಯನ್ನು ಹೊತ್ತುಕೊಂಡು ಮೆರವಣಿಗೆ ಮಾಡಬೇಕು. ಆ ಮರದ ಈಟಿಯ ಮೇಲೆ ಕಪ್ಪೆಯನ್ನು ಕಟ್ಟಿಡಲಾಗುತ್ತದೆ. ಹೀಗೆ ಬೆತ್ತಲೆ ಹೊರಟ ಹುಡುಗಿಯರೊಟ್ಟಿಗೆ ಮಹಿಳೆಯರು ಕೂಡ ಹೆಜ್ಜೆಹಾಕಬೇಕು ಮತ್ತು ಅವರು, ಮಳೆ ದೇವರು ಅಂದರೆ ವರುಣನನ್ನು ಹೊಗಳುವ, ಓಲೈಸುವ ಭಜನೆಗಳನ್ನು ಹಾಡುತ್ತಿರಬೇಕು.
ಜಿಲ್ಲಾಧಿಕಾರಿ ಹೇಳಿದ್ದೇನು? ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಿರುವ ದಾಮೋಹ್ ಜಿಲ್ಲಾಧಿಕಾರಿ ಎಸ್.ಕೃಷ್ಣ ಚೈತನ್ಯ, ನಾವು ಸ್ಥಳೀಯರಿಂದ ವರದಿ ಪಡೆದಿದ್ದೇವೆ. ಹೀಗೆ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಹುಡುಗಿಯರ ಪಾಲಕರೂ ಈ ಆಚರಣೆಯಲ್ಲಿ ತೊಡಗಿದ್ದಾರೆ. ಮೊದಲು ಪಾಲಕರಿಗೆ ಇಂಥ ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸಬೇಕು. ಆ ಹಳ್ಳಿಯ ಒಬ್ಬೇಒಬ್ಬ ವ್ಯಕ್ತಿ ಆಚರಣೆಯ ವಿರೋಧವಾಗಿ ನಮಗೆ ದೂರು ನೀಡಲಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಯುವತಿ ರೇಪ್-ಕೊಲೆ ಪ್ರಕರಣ: 38 ಸೆಲೆಬ್ರಿಟಿಗಳ ಬಂಧನಕ್ಕೆ ಒತ್ತಾಯ; ಘಟಾನುಘಟಿಗಳ ತಪ್ಪೇನು?
ಕಾವೇರಿ ಕೂಗು ಯೋಜನೆ ವಿರುದ್ಧದ ಪಿಐಎಲ್ ವಜಾ; ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ
Published On - 12:19 pm, Tue, 7 September 21