Google: ಸಿಸಿಐ ಸೂಚನೆ ಪಾಲಿಸುತ್ತೇವೆ; ಸುಪ್ರೀಂ ಕೋರ್ಟ್ಗೆ ಗೂಗಲ್
ನಾವು ನಮ್ಮ ಬಳಕೆದಾರರು ಮತ್ತು ಪಾಲುದಾರರಿಗೆ ಬದ್ಧರಾಗಿರುತ್ತೇವೆ. ಮುಂದೆ ಸಿಸಿಐಯೊಂದಿಗೆ ಸಹಕರಿಸಿಕೊಂಡು ಕಾರ್ಯಾಚರಿಸಲಿದ್ದೇವೆ ಎಂದು ಸುಪ್ರೀಂ ಕೋರ್ಟ್ಗೆ ಗೂಗಲ್ ತಿಳಿಸಿದೆ.
ನವದೆಹಲಿ: ಆ್ಯಂಡ್ರಾಯ್ಡ್ಗೆ ಸಂಬಂಧಿಸಿ ಭಾರತೀಯ ಸ್ಪರ್ಧಾ ಪ್ರಾಧಿಕಾರದ ಸೂಚನೆಗೆ ಅನುಗುಣವಾಗಿ ನಡೆದುಕೊಳ್ಳುವುದಾಗಿ ಗೂಗಲ್ ಕಂಪನಿ ಸುಪ್ರೀಂ ಕೋರ್ಟ್ಗೆ (Supreme Cout) ತಿಳಿಸಿದೆ. ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (CCI) ತೀರ್ಪನ್ನು ಪ್ರಶ್ನಿಸಿ ಗೂಗಲ್ (Google) ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಗೂಗಲ್‌ಗೆ ಹಿನ್ನಡೆಯಾಗಿತ್ತು. ಇದರ ಬೆನ್ನಲ್ಲೇ ಸಿಸಿಐ ಸೂಚನೆಗೆ ಅನುಗುಣವಾಗಿ ನಡೆದುಕೊಳ್ಳುವುದಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಗೂಗಲ್ ತಿಳಿಸಿದೆ. ನಾವು ನಮ್ಮ ಬಳಕೆದಾರರು ಮತ್ತು ಪಾಲುದಾರರಿಗೆ ಬದ್ಧರಾಗಿರುತ್ತೇವೆ. ಮುಂದೆ ಸಿಸಿಐಯೊಂದಿಗೆ ಸಹಕರಿಸಿಕೊಂಡು ಕಾರ್ಯಾಚರಿಸಲಿದ್ದೇವೆ. ಸುಪ್ರೀಂ ಕೋರ್ಟ್ ನಿರ್ಧಾರದ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ಅದು ಮಧ್ಯಂತರ ಪರಿಹಾರಕ್ಕೆ ಸೀಮಿತವಾಗಿದೆ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.
ಏನು ಹೇಳಿತ್ತು ಸುಪ್ರೀಂ ಕೋರ್ಟ್?
ಸಿಸಿಐ ಆದೇಶ ಪ್ರಶ್ನಿಸಿ ಗೂಗಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಪ್ರಕರಣವು ‘ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್ಸಿಎಲ್ಟಿ)’ದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಮಧ್ಯಸ್ಥಿಕೆಯನ್ನೂ ವಹಿಸುವುದಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಗೂಗಲ್ ಸಿಸಿಐ ಸೂಚನೆಯನ್ನು ಪಾಲಿಸುವುದಾಗಿ ಹೇಳಿದೆ.
ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್ಗಳಿಗೆ ಸಂಬಂಧಿಸಿದ ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಅಲ್ಫಾಬೆಟ್ ಇಂಕ್‌ನ ಗೂಗಲ್‌ಗೆ ಸ್ಪರ್ಧಾ ಆಯೋಗವು 2022ರ ಅಕ್ಟೋಬರ್ನಲ್ಲಿ 1,337 ಕೋಟಿ ರೂ. ದಂಡ ವಿಧಿಸಿತ್ತು. ದಂಡ ವಿಧಿಸಿದ ಕ್ರಮಕ್ಕೆ ಗೂಗಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ಭಾರತದ ಗ್ರಾಹಕರು ಮತ್ತು ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಹೇಳಿತ್ತು. ಗೂಗಲ್ ಕಂಪನಿ ವಿರುದ್ಧ ವಿಶ್ವದ ಕೆಲ ದೇಶಗಳಲ್ಲಿ ವಿವಿಧ ಪ್ರಕರಣಗಳಿವೆ. ಭಾರತದಲ್ಲೂ ಕೆಲ ಪ್ರಕರಣಗಳಲ್ಲಿ. ಸದ್ಯ ಚಾಲ್ತಿಯಲ್ಲಿರುವ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾ ಆಯೋಗವು ಗೂಗಲ್‌ಗೆ 161 ಮಿಲಿಯನ್ ಡಾಲರ್ (ಸುಮಾರು 1337 ಕೋಟಿ ರೂ) ದಂಡ ವಿಧಿಸಿದೆ.
ಇದನ್ನೂ ಓದಿ: Google: ಸಿಸಿಐ ದಂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗೂಗಲ್
ಗೂಗಲ್ ಸ್ವಾಮ್ಯದ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ತನಗಿರುವ ಪ್ರಾಬಲ್ಯದ ಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಈ ಪ್ರಕರಣದ ಪ್ರಮುಖ ಅಂಶವಾಗಿದೆ. ಭಾರತದಲ್ಲಿರುವ ಶೇ. 97ರಷ್ಟು ಸ್ಮಾರ್ಟ್ ಫೋನ್ಗಳು ಆಂಡ್ರಾಯ್ಡ್ ತಂತ್ರಾಂಶವನ್ನು ಹೊಂದಿವೆ. ಈ ಅವಲಂಬನೆಯನ್ನು ಗೂಗಲ್ ದುರುಪಯೋಗಿಸಿಕೊಳ್ಳುತ್ತಿದೆ. ಆಂಡ್ರಾಯ್ಡ್ ಸಿಸ್ಟಂನ ಲೈಸೆನ್ಸ್ ಪಡೆಯಬೇಕಾದರೆ ಗೂಗಲ್ನ ಷರುತ್ತುಗಳಿಗೆ ಒಪ್ಪಬೇಕಾಗುತ್ತದೆ. ಸ್ಮಾರ್ಟ್ಫೋನ್ಗಳಲ್ಲಿ ಗೂಗಲ್ನದ್ದೇ ಕ್ರೋಮ್, ಯೂಟ್ಯೂಬ್ ಹಾಗೂ ಇತರ ಆಪ್ ಗಳನ್ನು ಪೂರ್ವಸ್ಥಾಪನೆ (Pre-installation of Apps) ಮಾಡಬೇಕೆಂದು ಕೆಲ ಷರುತ್ತುಗಳಲ್ಲಿ ಒಂದಾಗಿದೆ. ಅಂದರೆ, ಸ್ಮಾರ್ಟ್ ಫೋನ್ ತಯಾರಕರು ತಮಗೆ ಬೇಕಾದ ಅಪ್ಲಿಕೇಶನ್ ಗಳನ್ನು ಪ್ರೀ ಇನ್ಸ್ಟಾಲ್ ಮಾಡಲು ಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ಈ ಸಂಬಂಧ ಗೂಗಲ್ ವಿರುದ್ಧ ದೂರುಗಳು ವ್ಯಕ್ತವಾಗಿದ್ದವು. ಭಾರತೀಯ ಸ್ಪರ್ಧಾ ಆಯೋಗವು ಈ ದೂರಿನ ವಿಚಾರಣೆ ನಡೆಸಿ, ಗೂಗಲ್ನಿಂದ ಸ್ಪರ್ಧಾತ್ಮಕ ವಿರೋಧಿ ನೀತಿ ಅನುಸರಣೆಯಾಗುತ್ತಿದೆ ಎಂದು ತೀರ್ಮಾನಿಸಿ, ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಆ ಕಂಪನಿಗೆ ದಂಡ ಹಾಕುವ ತೀರ್ಪು ನೀಡಿತ್ತು.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Fri, 20 January 23