ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ನೆರವು: ಸರ್ಕಾರದ ಭರವಸೆ

ಅಫ್ಘಾನಿಸ್ತಾನ ತೊರೆಯಲು ಬಯಸುವವರನ್ನು ಭಾರತಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅರಿಂದಮ್ ಬಾಗ್​ಚಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ನೆರವು: ಸರ್ಕಾರದ ಭರವಸೆ
ಕಾಬೂಲ್ ವಿಮಾನ ನಿಲ್ದಾಣ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 16, 2021 | 8:13 PM

ದೆಹಲಿ: ಕಾಬೂಲ್​ನಿಂದ ಭಾರತಕ್ಕೆ ವಾಣಿಜ್ಯ ವಿಮಾನ ಸಂಚಾರ ಮರುಸ್ಥಾಪನೆ ಆದ ಮೇಲೆ ಹಿಂದೂ ಮತ್ತು ಸಿಖ್ಖರಿಗೆ ಆದ್ಯತೆ ನೀಡಲಾಗುವುದು ಎಂದು ಭಾರತ ಸರ್ಕಾರ ಭರವಸೆ ನೀಡಿದೆ. ಅಫ್ಘಾನಿಸ್ತಾನ ಆಡಳಿತವನ್ನು ತಾಲಿಬಾನ್ ಕೈವಶ ಮಾಡಿಕೊಂಡ ನಂತರ ದೇಶ ತೊರೆಯಲು ಹಾತೊರೆಯುತ್ತಿರುವ ಜನರು ವಿಮಾನ ನಿಲ್ದಾಣದಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ. ಅಫ್ಘಾನಿಸ್ತಾನ ತೊರೆಯಲು ಬಯಸುವವರನ್ನು ಭಾರತಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅರಿಂದಮ್ ಬಾಗ್​ಚಿ ಹೇಳಿದ್ದಾರೆ.

ಕಾಬೂಲ್​ನ ಪರಿಸ್ಥಿತಿ ದಿನದಿಂದ ಹದಗೆಡುತ್ತಿದೆ ಎಂದು ಹೇಳಿರುವ ಅವರು, ಅಫ್ಘಾನಿಸ್ತಾನದ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೇವೆ. ಭಾರತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ನಿರ್ವಹಿಸುತ್ತಿದ್ದ ಹಲವು ಯೋಜನೆಗಳಿಗಾಗಿ ಅಲ್ಲಿನ ಸ್ಥಳೀಯರು ನೆರವಾಗಿದ್ದಾರೆ. ನಾವು ಅವರಿಗೆ ನೆರವಾಗಲು ಬದ್ಧರಾಗಿದ್ದೇವೆ ಎಂದು ಬಾಗ್​ಚಿ ಘೋಷಿಸಿದರು.

ಕಾಬೂಲ್ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗಳಿಗೆ ತೊಡಕು ಉಂಟಾಗಿದೆ ಎಂದು ಅವರು ಒಪ್ಪಿಕೊಂಡರು. ಅಫ್ಘಾನಿಸ್ತಾನದಲ್ಲಿರುವ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಸ್ಥಿತಿಗತಿಯ ಬಗ್ಗೆ ಸತತವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಕಳೆದ ವರ್ಷ ಕಾಬೂಲ್​ನಲ್ಲಿದ್ದ 383 ಸಿಖ್ ಮತ್ತು ಹಿಂದೂಗಳನ್ನು ಭಾರತಕ್ಕೆ ಕರೆತರಲಾಗಿತ್ತು. ಅಲ್ಲಿನವರಿಗೆ ಅಗತ್ಯವಿರುವ ಎಲ್ಲ ರೀತಿಯ ಮಾನವೀಯ ನೆರವು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಳೆದ ಗುರುವಾರ ಭಾರತ ಸರ್ಕಾರ ಹೇಳಿತ್ತು. ತಾಲಿಬಾನ್ ಈಚೆಗಷ್ಟೇ ಸಿಖ್ ಗುರುದ್ವಾರವೊಂದರ ಮೇಲಿದ್ದ ನಿಶಾನ್ ಸಾಹಿಬ್ (ಪವಿತ್ರ ಧ್ವಜ) ತೆರವುಗೊಳಿಸಿತ್ತು. ಆದರೆ ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ ಧ್ವಜವನ್ನು ಮರಳಿಸಲಾಗಿತ್ತು.

ಈ ನಡುವೆ ಕೆನಡಾ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ಅಫ್ಘಾನಿಸ್ತಾನದ 20,000 ಸಿಖ್ ಮತ್ತು ಹಿಂದೂಗಳಿಗೆ ಶಾಶ್ವತ ಆಶ್ರಯ ನೀಡುವುದಾಗಿ ಘೋಷಿಸಿದೆ. ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ನಮಗೆ ಕಾಳಜಿಯಿದೆ. 20,000 ಅಫ್ಘಾನ್ ಸಿಖ್ ಮತ್ತು ಹಿಂದೂಗಳಿಗೆ ಆಶ್ರಯ ನೀಡುವ ಬಗ್ಗೆ ವಲಸೆ ಇಲಾಖೆಯು ಜಂಟಿಯಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ರಾಷ್ಟ್ರೀಯ ಭದ್ರತೆಯ ಸಚಿವ ಹರ್ಜಿತ್ ಎಸ್.ಸಜ್ಜನ್ ತಿಳಿಸಿದ್ದಾರೆ.

(Govt of India will Help Afghan Hindus, Sikhs who want to come to India)

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಭಾರತೀಯರನ್ನು ಕರೆತರಲು ಕಾಬೂಲ್​ನಲ್ಲಿ ಲ್ಯಾಂಡ್ ಆಯ್ತು ಭಾರತೀಯ ವಾಯುಪಡೆಯ ದೈತ್ಯ ಸಿ-17 ವಿಮಾನ

ಇದನ್ನೂ ಓದಿ: Impact on India: ತಾಲಿಬಾನ್ ವಶಕ್ಕೆ ಅಫ್ಘಾನಿಸ್ತಾನ, ಭಾರತದ ಭದ್ರತೆಗೆ ಹಲವು ಆತಂಕ