ದೆಹಲಿ: ದುರ್ವಿಧಿಯ ಅಟ್ಟಹಾಸದಲ್ಲಿ ದೇಶದ ರಕ್ಷಣಾ ವ್ಯವಸ್ಥೆಯ 13 ಮಂದಿಯನ್ನು ಬಲಿ ತೆಗೆದುಕೊಂಡ ಸೇನಾ ಅಪಘಾತದ ದುರಂತದಲ್ಲಿ (Army helicopter Crash) ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಒಬ್ಬರು (Group Captain Varun Singh) ಮಾತ್ರ ಸುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಅವರನ್ನು ಹೇಗಾದರೂ ಮಾಡಿ ಜೀವಂತ ಉಳಿಸಿಕೊಳ್ಳಬೇಕೆಂದು ಪಣ ತೊಟ್ಟಿರುವ ವೈದ್ಯರು ಸಕಾಲದಲ್ಲಿ ಸಮರ್ಥ ಚಿಕಿತ್ಸೆ ನೀಡುತ್ತಿದ್ದಾರೆ. ಈ ಮಧ್ಯೆ ಹೆಚ್ಚಿನ ಚಿಕಿತ್ಸೆಗಾಗಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡುವ ಸಾಧ್ಯತೆಯಿದೆ. ಸದ್ಯಕ್ಕೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ಗೆ ದುರಂತ ನಡೆದಿರುವ ಸ್ಥಳಕ್ಕೆ ಸಮೀಪದಲ್ಲಿರುವ ವೆಲ್ಲಿಂಗ್ಟನ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಪೈಲಟ್ ವರುಣ್ ಅವರು ಶೇ. 45ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿರುವ ಏರ್ಫೋರ್ಸ್ ಕಮಾಂಡ್ ಆಸ್ಪತ್ರೆಗೆ (Bangalore Air Force Command Hospital ) ಶಿಫ್ಟ್ ಮಾಡುವ ಬಗ್ಗೆ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ.
ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ 14 ಜನರ ಪೈಕಿ CDS ಬಿಪಿನ್ ರಾವತ್ ಸೇರಿ 13 ಜನ ಮೃತಪಟ್ಟಿದ್ರು.
ಮೃತರ ಹೆಸರುಗಳು:
1. ಸಿಡಿಎಸ್ ಬಿಪಿನ್ ರಾವತ್
2. ಸಿಡಿಎಸ್ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್
3. ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್
4. ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್
5. ವಿಂಗ್ ಕಮಾಂಡರ್ ಪಿ.ಎಸ್.ಚೌಹಾಣ್
6. ಸ್ಕ್ವಾಡ್ರನ್ ಲೀಡರ್ ಕೆ.ಸಿಂಗ್
7. ಜೂನಿಯರ್ ವಾರಂಟ್ ಆಫೀಸರ್ ದಾಸ್
8. ಜೂನಿಯರ್ ವಾರಂಟ್ ಆಫೀಸರ್ ಪ್ರದೀಪ್ ಎ.
9. ಹವಾಲ್ದಾರ್ ಸತ್ಪಾಲ್ ರೈ,
10. ನಾಯಕ್ ಗುರುಸೇವಕ್ ಸಿಂಗ್
11. ನಾಯಕ್ ಜಿತೇಂದರ್ ಕುಮಾರ್
12. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು
13. ಲ್ಯಾನ್ಸ್ ನಾಯಕ್ ಸಾಯಿತೇಜಾ ದುರ್ಮರಣ
Published On - 11:47 am, Thu, 9 December 21