Election Results 2022: ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತು: ಇಲ್ಲಿದೆ ಭಾಷಣದ ಮುಖ್ಯಾಂಶಗಳು
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದರು. ಮೋದಿ ವಿಜಯೋತ್ಸವ ಭಾಷಣ ಹೈಲೈಟ್ಸ್ ಇಲ್ಲಿದೆ.
ನವದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ(Gujarat And Himachal Pradesh Elections Results 2022) ಪ್ರಕಟವಾಗಿದ್ದು, ಗುಜರಾತ್‌ನಲ್ಲಿ ಬಿಜೆಪಿ (BJP) ಅಧಿಕಾರಕ್ಕೇರಿದ್ರೆ, ಹಿಮಾಚಲದಲ್ಲಿ ಕಾಂಗ್ರೆಸ್ (Congress) ಗೆಲುವಿನ ನಗೆ ಬೀರಿದೆ. ಇನ್ನು ಈ ಫಲಿತಾಂಶದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು(ಡಿಸೆಂಬರ್ 08) ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದು, ಗುಜರಾತ್, ಹಿಮಾಚಲ ಪ್ರದೇಶದ ಜನತೆಗೆ ಧನ್ಯವಾದ ಎಂದು ಹೇಳಿ ಮಾತು ಆರಂಭಿಸಿದರು.
ಮೊದಲಿಗೆ ಹಿಮಾಚಲ ಪ್ರದೇಶ ಫಲಿತಾಂಶದ ಬಗ್ಗೆ ಮಾತನಾಡಿದ ಮೋದಿ, ಎಲ್ಲಕ್ಕಿಂತ ಜನತಾ ಜನಾರ್ಧನನ ಮುಂದೆ ತಲೆಬಾಗುತ್ತೇನೆ. ಉತ್ತರಪ್ರದೇಶ, ಬಿಹಾರ ಉಪಚುನಾವಣೆಯಲ್ಲೂ ಬಿಜೆಪಿಗೆ ಗೆಲುವು ಸಿಕ್ಕಿದೆ. ಗೆಲುವಿಗೆ ಕಾರಣರಾದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಧನ್ಯವಾದ. ಎರಡು ರಾಜ್ಯಗಳಲ್ಲೂ ಶಾಂತಿಯುತ ಮತದಾನ ನಡೆದಿತ್ತು. 2 ರಾಜ್ಯಗಳಲ್ಲಿ ಒಂದು ಬೂತ್‌ನಲ್ಲೂ ಮರು ಮತದಾನ ನಡೆದಿರಲಿಲ್ಲ. ಹೀಗಾಗಿ ನಿಷ್ಪಕ್ಷಪಾತವಾಗಿ, ಶಾಂತಿಯುವಾಗಿ ಎಲೆಕ್ಷನ್ ನಡೆಸಿದ ಚುನಾವಣಾ ಆಯೋಗಕ್ಕೂ ಧನ್ಯವಾದ ತಿಳಿಸುತ್ತೇನೆ ಎಂದರು.
ಹಿಮಾಚಲ ಪ್ರತಿ ಮತದಾರರಿಗೂ ನಾನು ಅಭಾರಿಯಾಗಿದ್ದೇನೆ. ಹಿಮಾಚಲ ಪ್ರದೇಶದಲ್ಲಿ ಕೆಲವರು ಕಡಿಮೆ ಅಂತದಲ್ಲಿ ಸೋಲುಕಂಡಿದ್ದಾರೆ. ಸೋತವರು ಗೆದ್ದದವರ ಮಧ್ಯೆ ಶೇಕಡ 1ರಷ್ಟು ಮಾತ್ರ ಅಂತರವಿದೆ. ನಾವು ಸ್ವಲ್ಪ ಹಿಂದೆ ಇದ್ದರೂ ಅಭಿವೃದ್ಧಿ ಶೇಕಡಾ 100ರಷ್ಟು ಇರಲಿದೆ. ಎಲ್ಲಾ ಕಾರ್ಯಕರ್ತರಿಂದ ನಾಲ್ಕು ದಿಕ್ಕಿನಲ್ಲೂ ಬಿಜೆಪಿ ಗೆಲುವು ದಾಖಲಿಸುತ್ತಿದೆ ಎಂದು ಹೇಳಿದರು.
ಹಿಮಾಚಲಪ್ರದೇಶದಲ್ಲಿ ಕಡಿಮೆ ಅಂತರದಿಂದ ಬಿಜೆಪಿಗೆ ಸೋಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇವೆ. ಹಿಮಾಚಲಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಹಿಮಾಚಲಪ್ರದೇಶದಲ್ಲಿ ಬಿಜೆಪಿ ಸೋಲಿನಿಂದ ನಾವು ಎದೆಗುಂದಿಲ್ಲ. ಬಿಜೆಪಿಗೆ ಎಲ್ಲಾ ವರ್ಗದ ಜನರು ಆಶೀರ್ವದಿಸಿದ್ದಾರೆ. ಬಡವರು, ದಲಿತರು, ಆದಿವಾಸಿಗಳು, ಮಧ್ಯಮ ವರ್ಗದವರು ಸೇರಿ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಿಮಾಚಲಪ್ರದೇಶದಲ್ಲಿ ಜನಪರ ಕಾರ್ಯಗಳನ್ನು ಮುಂದುವರಿಸ್ತೇವೆ ಎಂದು ಭರವಸೆ ನೀಡಿದರು.
ಮೋದಿ ಗುಜರಾತ್ ಗೆಲುವಿನ ಮಾತು
ಐತಿಹಾಸಿಕ ಗೆಲುವಿಗೆ ಕಾರಣರಾದ ಗುಜರಾತಿಗಳಿಗೆ ಮತ್ತೊಮ್ಮೆ ವಂದನೆ. ಗುಜರಾತ್‌ನ ಇತಿಹಾಸದಲ್ಲೇ ಇಂದಿನ ಗೆಲುವು ದಾಖಲೆ.ಬಿಜೆಪಿ ಮೇಲೆ ಯುವಕರಿಗೆ ಭರವಸೆ ಇದೆ, ಹೀಗಾಗಿ ಆಶೀರ್ವಾದ ಮಾಡಿದ್ದಾರೆ. ಜಾತಿವಾದ ರಾಜಕಾರಣಕ್ಕೆ ಗುಜರಾತ್ ಯುವಕರಿಂದ ತಕ್ಕ ಪಾಠ. ಕೇವಲ ಬಿಜೆಪಿ ಮೇಲೆ ಮಾತ್ರ ದೇಶದ ಜನರ ಭರವಸೆ ಇದೆ. ಬಿಜೆಪಿ ನೇತೃತ್ವದ ಸರ್ಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.ಗುಜರಾತ್‌ನಲ್ಲಿ ಬಿಜೆಪಿಗೆ 7ನೇ ಸಲ ಐತಿಹಾಸಿಕ ಗೆಲುವೇ ಇದಕ್ಕೆ ಸಾಕ್ಷಿ ಎಂದರು.
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನ ಮತ ನೀಡಿದ್ದಾರೆ. ಐತಿಹಾಸಿಕ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮವೇ ಕಾರಣ. ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಭಾರಿ ಬದಲಾವಣೆ ಆಗಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಿಂದ ಅಭಿವೃದ್ಧಿ ವೇಗ ಹೆಚ್ಚಿದ್ದು,. ಕಳೆದ 8 ವರ್ಷಗಳಿಂದ ಬಡತನ ಹೋಗಲಾಡಿಸಲು ಬಿಜೆಪಿ ಶ್ರಮಿಸುತ್ತಿದೆ. ಬಡತನ ನಿವಾರಣೆ ಜತೆ ಅತ್ಯಾಧುನಿಕ ಮೂಲ ಸೌಕರ್ಯ ಒದಗಿಸಿದ್ದೇವೆ. ದೇಶದ ಮತದಾರರು ಜಾಗರೂಕರಾಗಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಗುಜರಾತ್ ನಲ್ಲಿ ಬಿಜೆಪಿ ಈ ಬಾರಿ ಚುನಾವಣೆಯಲ್ಲೂ ಜಾದು ಮಾಡಿಬಿಟ್ಟಿದೆ. ಈ ಸಲ ನರೇಂದ್ರನ ರೆಕಾರ್ಡ್ ಭೂಪೇಂದ್ರ ಮುರಿಯಬೇಕು ಎಂದಿದ್ದೆ. ಅದರಂತೆ ರೆಕಾರ್ಡ್ ಮುರಿಯುವುದರಲ್ಲೇ ಗುಜರಾತಿನ ಜನ ರೆಕಾರ್ಡ್ ಮಾಡಿದ್ದಾರೆ. ಜನರು ಜಾತಿ, ಮತ, ಶ್ರೀಮಂತ, ಬಡವ ಎನ್ನದೆ ಮತ ನೀಡಿದ್ದಾರೆ. ಈ ಯುವಕರು ಗುಜರಾತ್‌ನಲ್ಲಿ ಬಿಜೆಪಿ ಮೇಲೆ ಭರವಸೆ ಇಟ್ಟಿದ್ದಾರೆ. ಈ ಯುವಕರೇ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅಭಿವೃದ್ಧಿಯಿಂದ ಗೆಲ್ಲಬಹುದು ಎಂಬುವುದನ್ನು ಬಿಜೆಪಿ ತೋರಿಸಿದೆ. ದೇಶದ ಜನರ ಭರವಸೆ ಕೇವಲ ಬಿಜೆಪಿ ಮೇಲಿದೆ ಎಂದರು.
ಜಾತಿ, ಮತ ,ವರ್ಗ ಎಲ್ಲವನ್ನೂ ಮೀರಿದವರ ತೀರ್ಪು ಇದಾಗಿದೆ. ಜಾತಿವಾದ ರಾಜಕಾರಣಕ್ಕೆ ಯುವಜನತೆ ತಕ್ಕ ಪಾಠ ಕಲಿಸಿದ್ದಾರೆ. ಭವಿಷ್ಯದಲ್ಲಿ ಕೇವಲ ಅಭಿವೃದ್ಧಿ ರಾಜಕಾರಣ. ಭ್ರಷ್ಟಾಚಾರದ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರುವುದು ತೋರಿಸುತ್ತಿದೆ. ಹಿಂಬಾಗಿಲ ರಾಜಕಾರಣದ ಮೇಲೆ ಮತದಾರರಿಗೆ ನಂಬಿಕೆ ಇಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. ರೈತರು, ಶ್ರಮಿಕರು ಸೇರಿದಂತೆ ಎಲ್ಲಾ ವರ್ಗದವರ ಬೆಂಬಲ ಬಿಜೆಪಿಗಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.
ಆದಿವಾಸಿಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ಗುಜರಾತ್ ಸರ್ಕಾರ ಬದ್ಧವಾಗಿದೆ. ಸ್ವಾಭಿಮಾನ ಜೀವನಕ್ಕಾಗಿ ಆದಿವಾಸಿಗಳು ಬಿಜೆಪಿ ಬೆಂಬಲಿಸಿದ್ದಾರೆ. ಬಿಜೆಪಿಯಿಂದಲೇ ಮೊದಲ ಆದಿವಾಸಿ ರಾಷ್ಟ್ರಪತಿ ಸಿಕ್ಕಿದ್ದು. ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ತಿಳಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ