ಗುಜರಾತ್ನಲ್ಲಿ ಸಂಪೂರ್ಣ ಹೊಸ ಕ್ಯಾಬಿನೆಟ್ ರಚನೆ ; 24 ಮಂತ್ರಿಗಳ ಪಟ್ಟಿ ಹೀಗಿದೆ
ಇಂದು ಪ್ರಮಾಣವಚನ ಸ್ವೀಕರಿಸಿದವರಲ್ಲಿ 10 ಮಂದಿ ಸಂಪುಟ ದರ್ಜೆಯ ಸ್ಥಾನ ಮಾನ ಪಡೆದಿದ್ದಾರೆ. ಉಳಿದ 14 ಜನರಿಗೆ ರಾಜ್ಯದರ್ಜೆಯಲ್ಲಿ ಸಚಿವ ಸ್ಥಾನ ನೀಡಲಾಗಿದೆ.
ಗಾಂಧಿನಗರ: ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕಾರ ಮಾಡಿ ಮೂರು ದಿನಗಳ ಬಳಿಕ ಇಂದು ನೂತನ ಕ್ಯಾಬಿನೆಟ್ ಕೂಡ ರಚನೆಯಾಗಿದೆ. 24 ಸಚಿವರು ಇಂದು ಗಾಂಧಿನಗರದಲ್ಲಿರುವ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ಒಂದೇ ವರ್ಷ ಬಾಕಿ ಇರುವಾಗ ಮುಖ್ಯಮಂತ್ರಿಯನ್ನು ಬದಲು ಮಾಡಿದ್ದಲ್ಲದೆ, ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದವರೂ ಕೂಡ ಹೊಸಬರೇ ಆಗಿದ್ದಾರೆ. ಗುಜರಾತ್ ರಾಜ್ಯಪಾಲ ಆಚಾರ್ಯ ದೇವವೃತ ಅವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಬಿಜೆಪಿ ಗುಜರಾತ್ ಅಧ್ಯಕ್ಷ ಸಿ.ಆರ್.ಪಾಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವರ್ ಮತ್ತು ಕೇಂದ್ರದ ವೀಕ್ಷಕರಾದ ಬಿ.ಎಲ್.ಸಂತೋಷ್ ಹಾಜರಿದ್ದರು.
ಇಂದು ಪ್ರಮಾಣವಚನ ಸ್ವೀಕರಿಸಿದವರಲ್ಲಿ 10 ಮಂದಿ ಸಂಪುಟ ದರ್ಜೆಯ ಸ್ಥಾನ ಮಾನ ಪಡೆದಿದ್ದಾರೆ. ಉಳಿದ 14 ಜನರಿಗೆ ರಾಜ್ಯದರ್ಜೆಯಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಈ 14 ಜನರಲ್ಲಿ ಐವರಿಗೆ ಸ್ವತಂತ್ರ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಸಂಪುಟ ದರ್ಜೆಯ ಸಚಿವ ಸ್ಥಾನಮಾನ ಪಡೆದವರ ಪಟ್ಟಿ ಹೀಗಿದೆ.. ರಾಜೇಂದ್ರ ತ್ರಿವೇದಿ, ಜಿತು ವಾಘನಿ, ಋಷಿಕೇಶ ಪಟೇಲ್, ರಾಘವ್ಜಿ ಪಟೇಲ್, ಪೂರ್ಣೇಶ್ ಮೋದಿ, ಕಾನುಭಾಯಿ ದೇಸಾಯಿ, ಕಿರೀಟ್ಸಿನ್ಹಾ ರಾಣಾ, ನರೇಶ್ ಪಟೇಲ್, ಪ್ರದೀಪ್ಸಿನ್ಹ್ ಪಾರ್ಮಾರ್ ಮತ್ತು ಅರ್ಜುನ್ ಸಿಂಗ್ ಚೌಹಾಣ್.
ರಾಜ್ಯ ದರ್ಜೆಯ ಸ್ಥಾನಮಾನ ಪಡೆದವರ ಪಟ್ಟಿ ಹೀಗಿದೆ.. ಹರ್ಷ ಸಾಂಘ್ವಿ, ಜಗದೀಶ್ ಪಾಂಚಾಲ್, ಬ್ರಿಜೇಶ್ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್, ಮುಕೇಶ್ ಪಟೇಲ್, ನಿಮಿಶಾ ಸುತಾರ್, ಅರವಿಂದ್ ರೈಯಾನಿ, ಕುಬೇರ್ ದಿಂಡೋರ್, ಕೀರ್ತಿಸಿನ್ಹ ವಘೇಲಾ, ರಾಜೇಂದ್ರಸಿನ್ಹ ಪರ್ಮಾರ್, ರಾಘವ ಜಿ ಮಕ್ವಾನಾ, ವಿನೋದ್ ಮೊರಾದಿಯಾ ಮತ್ತು ದೇವಭಾಯಿ ಮಲಮ್. ಇವರಲ್ಲಿ ಹರ್ಷ ಸಾಂಘ್ವಿ, ಜಗದೀಶ್ ಪಾಂಚಾಲ್, ಬ್ರಿಜೇಶ್ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್ ಅವರಿಗೆ ಸ್ವತಂತ್ರ ಕಾರ್ಯ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.
ಇಂದು ಮೊದಲ ಸಭೆ ಇಂದು ಮಧ್ಯಾಹ್ನದ ವೇಳೆಗೆ ಹೊಸ ಸಚಿವರೆಲ್ಲ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅದಾದ ಬಳಿಕ ಕ್ಯಾಬಿನೆಟ್ನ ಮೊದಲ ಸಭೆ ಸಂಜೆ 4ಗಂಟೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ಸರ್ಣಿಮ್ ಸಂಕುಲ್ನಲ್ಲಿ ನಡೆದಿದೆ.
ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಕೇಂದ್ರ ಮಹತ್ವದ ತೀರ್ಮಾನ, 6 ವರ್ಷಗಳಲ್ಲಿ 5 ಲಕ್ಷ ಕೋಟಿ ಸಾಲ ವಸೂಲು: ನಿರ್ಮಲಾ ಸೀತಾರಾಮನ್
Published On - 5:03 pm, Thu, 16 September 21