ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಕೇಂದ್ರ ಮಹತ್ವದ ತೀರ್ಮಾನ, 6 ವರ್ಷಗಳಲ್ಲಿ 5 ಲಕ್ಷ ಕೋಟಿ ಸಾಲ ವಸೂಲು: ನಿರ್ಮಲಾ ಸೀತಾರಾಮನ್
ರಾಷ್ಟ್ರೀಯ ಆಸ್ತಿ ಮರುನಿರ್ಮಾಣ ಕಂಪನಿ ನೀಡುವ ಭದ್ರತಾ ರಸೀದಿ ಹಿಂತಿರುಗಿಸಲು ನಿನ್ನೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ₹ 30,600 ಕೋಟಿ ಮೊತ್ತಕ್ಕೆ ಖಾತರಿ ನೀಡಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ದೆಹಲಿ: ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ಕುರಿತು ಕೇಂದ್ರ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಕೇಂದ್ರದ ನಿರ್ಧಾರವನ್ನು ಪ್ರಕಟಿಸಿದರು. ಕಳೆದ 6 ವರ್ಷಗಳಲ್ಲಿ ಸುಮಾರು ₹5 ಲಕ್ಷ ಕೋಟಿ ಸಾಲದ ಹಣವನ್ನು ವಸೂಲು ಮಾಡಲಾಗಿದೆ. ರಾಷ್ಟ್ರೀಯ ಆಸ್ತಿ ಮರುಹೊಂದಾಣಿಕೆ ಕಂಪನಿ (National Asset Reconstruction Company – NARCL) ಅಥವಾ ಬ್ಯಾಡ್ ಬ್ಯಾಂಕ್ ನೀಡುವ ಭದ್ರತಾ ರಸೀದಿ ಹಿಂತಿರುಗಿಸಲು ನಿನ್ನೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ₹ 30,600 ಕೋಟಿ ಮೊತ್ತಕ್ಕೆ ಖಾತರಿ ನೀಡಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಈ ಮೊದಲೇ ಘೋಷಿಸಿದ್ದಂತೆ ಎನ್ಪಿಎ ನಿರ್ವಹಣೆಗಾಗಿ ಬ್ಯಾಡ್ ಬ್ಯಾಂಕ್ ಸ್ಥಾಪಿಸುವ ಪ್ರಸ್ತಾವವನ್ನು ಅವರು ಘೋಷಿಸಿದರು. ಬ್ಯಾಡ್ ಬ್ಯಾಂಕ್ ಜೊತೆಗೆ ಕೇಂದ್ರ ಸರ್ಕಾರ ಭಾರತ ಸಾಲ ನಿರ್ಣಯ ಸಂಸ್ಥೆ (India Debt Resolution firm) ಸ್ಥಾಪಿಸಲೂ ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸಾಕಷ್ಟು ಹೊಸ ಕ್ರಮಗಳನ್ನು ತೆಗೆದುಕೊಂಡಿವೆ ಎಂದು ಸಚಿವರು ಹೇಳಿದರು.
ಸಾರ್ವಜನಿಕ ವಲಯದ ಬ್ಯಾಂಕ್ಗಳು ಬಂಡವಾಳ ಹೆಚ್ಚಿಸಿಕೊಳ್ಳಲು ಈಗ ಸರ್ಕಾರದತ್ತ ಎದುರು ನೋಡುತ್ತಿಲ್ಲ. ಬದಲಿಗೆ ಷೇರುಪೇಟೆ ಮತ್ತು ಸಾಲಪತ್ರಗಳ ಮೂಲಕ ಬಂಡವಾಳ ಹೆಚ್ಚಿಸಿಕೊಳ್ಳುತ್ತಿವೆ. 2018ರಲ್ಲಿ ಸಾರ್ವಜನಿಕ ವಲಯದ 21 ಬ್ಯಾಂಕ್ಗಳ ಪೈಕಿ ಕೇವಲ ಎರಡು ಮಾತ್ರ ಲಾಭ ತಂದಿತ್ತು. 2020-21ರಲ್ಲಿ ಎರಡು ಬ್ಯಾಂಕ್ಗಳು ಮಾತ್ರ ನಷ್ಟ ವರದಿ ಮಾಡಿವೆ ಎಂದು ಹೇಳಿದರು.
ಭೂಷಣ್ ಸ್ಟೀಲ್, ಎಸ್ಸಾರ್ ಸ್ಟೀಲ್ ಸೇರಿದಂತೆ ಕೆಲ ಕಂಪನಿಗಳ ಸಾಲವನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ₹ 99 ಸಾವಿರ ಕೋಟಿ ವಸೂಲಿ ಮಾಡಲಾಯಿತು ಎಂದು ನುಡಿದರು.
(Banking Sector Reforms Union Govt Recovers 5 lakh Crore Loan says Finance Minister Nirmala Sitharaman)
ಇದನ್ನೂ ಓದಿ: ಸರ್ಕಾರದ ಯೋಜನೆಗಳು ಜನರನ್ನು ತಲುಪಲು ಬ್ಯಾಂಕ್ಗಳು ಡಿಜಿಟಲ್ ವ್ಯವಸ್ಥೆ ಬಳಸಿಕೊಳ್ಳಬೇಕು: ನಿರ್ಮಲಾ ಸೀತಾರಾಮನ್
ಇದನ್ನೂ ಓದಿ: ಕಾಂಗ್ರೆಸ್ ದೇಶದ ಸಂಪನ್ಮೂಲಗಳನ್ನು ಮಾರಿ ಕಿಕ್ ಬ್ಯಾಕ್ ಪಡೆದಿತ್ತು: ನಿರ್ಮಲಾ ಸೀತಾರಾಮನ್
Published On - 5:44 pm, Thu, 16 September 21