ತೌಕ್ತೆ ಚಂಡಮಾರುತ ಪೀಡಿತ ಪ್ರದೇಶದ ಮೀನುಗಾರರಿಗೆ ಗುಜರಾತ್ ಸರ್ಕಾರದಿಂದ ₹105 ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ

ತೌಕ್ತೆ ಚಂಡಮಾರುತ ಪೀಡಿತ ಪ್ರದೇಶದ ಮೀನುಗಾರರಿಗೆ ಗುಜರಾತ್ ಸರ್ಕಾರದಿಂದ ₹105 ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ
ಗುಜರಾತಿನ ಕರಾವಳಿಯಲ್ಲಿ ದೋಣಿಯನ್ನು ದಡಕ್ಕೊಯ್ಯುತ್ತಿರುವ ಮೀನುಗಾರರು

Cyclone Tauktae:ಹಾನಿಗೊಳಗಾದ ದೋಣಿಗಳು ಮತ್ತು ಮೀನುಗಾರಿಕೆ ಸಲಕರಣೆಗಳಿಗಾಗಿ ಮೀನುಗಾರರಿಗೆ ಪರಿಹಾರವನ್ನು ನೀಡಲು ಒಟ್ಟು 25 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಉಳಿದ 80 ಕೋಟಿ ರೂ.ಗಳನ್ನು ಜಾಫ್ರಾಬಾದ್, ಶಿಯಾಲ್ ಬೆಟ್, ಸೈಯದ್ ರಾಜಪರಾ ಮತ್ತು ನವ ಬಂದರ್ ನಲ್ಲಿನ ಮೀನುಗಾರಿಕೆ ಬಂದರುಗಳ ಮೂಲಸೌಕರ್ಯಗಳನ್ನು ಸರಿಪಡಿಸಲು ಮತ್ತು ಬಲಪಡಿಸಲು ಮೀಸಲಿಡಲಾಗುವುದು

TV9kannada Web Team

| Edited By: Rashmi Kallakatta

Jun 02, 2021 | 1:16 PM

ರಾಜ್​ಕೋಟ್: ತೌಕ್ತೆ ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ದಕ್ಷಿಣ ಕರಾವಳಿಯನ್ನು ಧ್ವಂಸಗೊಳಿಸಿದ ಎರಡು ವಾರಗಳ ನಂತರ, ರಾಜ್ಯ ಸರ್ಕಾರವು ಬುಧವಾರ ಮೀನುಗಾರರಿಗೆ 105 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿತು. ತೌಕ್ತೆಯ ಅಬ್ಬರಕ್ಕೆ ಮೀನುಗಾರರ 1,000 ದೋಣಿಗಳು ಹಾನಿಗೀಡಾಗಿವೆ. ಈ ಪ್ಯಾಕೇಜ್ ಬಂದರಿನ ಮೂಲಸೌಕರ್ಯಗಳನ್ನು ಸುಧಾರಣೆ ಮಾಡಲಿದೆ.

ಹಾನಿಗೊಳಗಾದ ದೋಣಿಗಳು ಮತ್ತು ಮೀನುಗಾರಿಕೆ ಸಲಕರಣೆಗಳಿಗಾಗಿ ಮೀನುಗಾರರಿಗೆ ಪರಿಹಾರವನ್ನು ನೀಡಲು ಒಟ್ಟು 25 ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಉಳಿದ 80 ಕೋಟಿ ರೂ.ಗಳನ್ನು ಜಾಫ್ರಾಬಾದ್, ಶಿಯಾಲ್ ಬೆಟ್, ಸೈಯದ್ ರಾಜಪರಾ ಮತ್ತು ನವ ಬಂದರ್ ನಲ್ಲಿನ ಮೀನುಗಾರಿಕೆ ಬಂದರುಗಳ ಮೂಲಸೌಕರ್ಯಗಳನ್ನು ಸರಿಪಡಿಸಲು ಮತ್ತು ಬಲಪಡಿಸಲು ಮೀಸಲಿಡಲಾಗುವುದು.

ಮಂಗಳವಾರ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ, ಕೃಷಿ, ತೋಟಗಾರಿಕೆ ಮತ್ತು ಸಾಗರ್ಖೇಡು (ಮೀನುಗಾರರಿಗೆ) ಇತ್ತೀಚೆಗೆ ತೌಕ್ತೆ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಮತ್ತು ಮೀನುಗಾರರು ಮತ್ತೆ ತಮ್ಮ ಕೆಲಸಕ್ಕೆ ಮರಳಲು ಸಹಾಯ ಮಾಡುವ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿದರು. ಸಮಿತಿಯು 105 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದೆ ಎಂದು ಅಧಿಕೃತ ಪ್ರಕಟಣೆ ಮಂಗಳವಾರ ಬೆಳಿಗ್ಗೆ ತಿಳಿಸಿದೆ.

ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಇಂಧನ ಸಚಿವ ಸೌರಭ್ ಪಟೇಲ್, ಮೀನುಗಾರಿಕೆ ಸಚಿವ ಜವಾಹರ್ ಚಾವ್ಡಾ, ಗುಜರಾತ್ ಮುಖ್ಯ ಕಾರ್ಯದರ್ಶಿ ಅನಿಲ್ ಮುಕಿಮ್, ಸಿಎಂ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ ಕೈಲಾಶ್ ನಾಥನ್ , ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ ಇಲಾಖೆ) ನಳಿನ್ ಉಪಾಧ್ಯಾಯ್, ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯ ಕಾರ್ಯದರ್ಶಿ ಮತ್ತು ಡಿ.ಪಿ.ದೇಸಾಯಿ ಸಭೆಯಲ್ಲಿ ಭಾಗವಹಿಸಿದ್ದರು.

ತೌಕ್ತೆ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಸಣ್ಣ ಮತ್ತು ದೊಡ್ಡದಾದ ಸುಮಾರು 1,000 ದೋಣಿಗಳು ಹಾನಿಗೀಡಾಗಿವೆ ಮತ್ತು ಪರಿಹಾರ ಪ್ಯಾಕೇಜ್‌ನಲ್ಲಿರುವ ನಿಯಮಗಳ ಪ್ರಕಾರ ಮೀನುಗಾರರಿಗೆ 25 ಕೋಟಿ ರೂ.ಗಳ ಪರಿಹಾರವನ್ನು ಸರ್ಕಾರ ನೀಡಲಿದೆ ಎಂದು ರೂಪಾನಿ ಹೇಳಿದ್ದಾರೆ.

ಹಾನಿಗೊಳಗಾದ ದೋಣಿಗಳಿಗೆ 35,000 ರೂ.ಗಳಿಂದ 5 ಲಕ್ಷ ರೂ.ವರೆಗೆ, ಹಾನಿಗೊಳಗಾದ ಮೀನುಗಾರಿಕಾ ನೆಟ್ ಮತ್ತು ಇತರ ಮೀನುಗಾರಿಕೆ ಸಾಧನಗಳಿಗೆ 35,000 ರೂ.ಗಳವರೆಗೆ ಮತ್ತು ಹಾನಿಗೊಳಗಾದ ದೋಣಿಗಳಿಂದಾಗಿ ಜೀವನೋಪಾಯದ ಮೂಲವನ್ನು ಕಳೆದುಕೊಂಡಿರುವ ಪ್ರತಿ ಮೀನುಗಾರರಿಗೆ ತಾತ್ಕಾಲಿಕ ಮೊತ್ತ 2,000 ರೂ ಸಿಗಲಿದೆ.

ಪ್ಯಾಕೇಜಿನ ವಿವರಗಳ ಪ್ರಕಾರ, ಭಾಗಶಃ ಹಾನಿಗೊಳಗಾದ ಸಣ್ಣ ಮೀನುಗಾರಿಕಾ ದೋಣಿಗಳಿಗೆ ಸರ್ಕಾರವು 35,000 ನೀಡುತ್ತದೆ. ಸಂಪೂರ್ಣವಾಗಿ ಹಾನಿಗೊಳಗಾದ ಸಣ್ಣ ಮೀನುಗಾರಿಕೆ ದೋಣಿಗಳಲ್ಲಿ, ಸರ್ಕಾರವು ದೋಣಿ ಮೌಲ್ಯದ 75000 ಅಥವಾ 50 ಶೇಕಡಾವನ್ನು ಪಾವತಿಸುತ್ತದೆ. ಭಾಗಶಃ ಹಾನಿಗೊಳಗಾದ ಟ್ರಾಲರ್‌ಗಳು, ಡಾಲ್‌ನೆಟ್ಟರ್‌ಗಳು, ಗಿಲ್ ನೆಟ್ಟರ್‌ಗಳ ಪ್ರಕರಣಗಳಲ್ಲಿ, ಉಂಟಾದ ಹಾನಿಯ ಶೇಕಡಾ 50 ರಷ್ಟು ಅಥವಾ 2 ಲಕ್ಷ ರೂ.ವರೆಗೆ ಯಾವುದು ಕಡಿಮೆಯೋ ಅದನ್ನು ಸರ್ಕಾರ ಪಾವತಿಸುತ್ತದೆ.

ಸಂಪೂರ್ಣವಾಗಿ ಹಾನಿಗೊಳಗಾದ ಟ್ರಾಲರ್‌ಗಳು, ಡೋಲೆನೆಟರ್ ಮತ್ತು ಗಿಲ್ ನೆಟ್ಟರ್‌ಗಳಲ್ಲಿನ ಪರಿಹಾರದ ಮೊತ್ತವು ದೋಣಿಯ ಮೌಲ್ಯದ ಶೇಕಡಾ 50 ಅಥವಾ 5 ಲಕ್ಷ ರೂ ಆಗಿದೆ ಸಂಪೂರ್ಣವಾಗಿ ಹಾನಿಗೊಳಗಾದ ದೊಡ್ಡ ದೋಣಿಗಳನ್ನು ಸರಿಪಡಿಸಲು 10 ಲಕ್ಷ ರೂ.ವರೆಗಿನ ಸಾಲವನ್ನು ಪಡೆಯುವ ಮೀನುಗಾರರಿಗೆ ಅಥವಾ ಭಾಗಶಃ ಹಾನಿಗೊಳಗಾದ ದೊಡ್ಡ ದೋಣಿಗಳನ್ನು ಸರಿಪಡಿಸಲು 5 ಲಕ್ಷ ರೂ.ಗಳ ಸಾಲವನ್ನು ಸರ್ಕಾರವು ಎರಡು ವರ್ಷಗಳವರೆಗೆ ಶೇ 10 ರಷ್ಟು ಬಡ್ಡಿದರದಲ್ಲಿ ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಮೀನು ಬೀಜದಂತಗ ಮೀನು-ಆಹಾರ ಮತ್ತು ಸಂಬಂಧಿತ ಸಲಕರಣೆಗಳಂತಹ ಮೀನು ಕೃಷಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ 82,000 ರೂ. ನೀಡಲಾಗುವುದು.

ಜಫ್ರಾಬಾದ್‌ನಲ್ಲಿ ಅಸ್ತಿತ್ವದಲ್ಲಿರುವ ಜೆಟ್ಟಿಯನ್ನು ವಿಸ್ತರಿಸಲು ಮತ್ತು 500 ಮೀಟರ್ ಉದ್ದದ ಹೊಸ ಜೆಟ್ಟಿಯನ್ನು ನಿರ್ಮಿಸಲು, ಬಂದರಿನ ಲಾಲ್ ಬಟ್ಟಿ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯದೊಂದಿಗೆ ವಾರ್ಫ್ ಗೋಡೆ ನಿರ್ಮಿಸಲು ಮತ್ತು ಟಿ-ಜೆಟ್ಟಿ ಪ್ರದೇಶದಲ್ಲಿ ಪಾರ್ಕಿಂಗ್ ಪ್ರದೇಶವನ್ನು ರಚಿಸಲು ಪ್ಯಾಕೇಜ್ ನಲ್ಲಿ ಮೊತ್ತ ನೀಡಲಾಗಿದೆ. ಶಿಯಾಲ್ ಬೆಟ್, ಸೈಯದ್ ರಾಜಪರ ಮತ್ತು ನವ ಬಂದರ್ ನಲ್ಲಿ ಹಾನಿಗೊಳಗಾದ ಬಂದರಿನ ಮೂಲಸೌಕರ್ಯಗಳನ್ನು ಸರಿಪಡಿಸಲಾಗುವುದು.

ಇದನ್ನೂ ಓದಿ: ಇಸ್ರೇಲ್​ ಸೈನ್ಯಕ್ಕೆ ಸೇರ್ಪಡೆಯಾದ ಗುಜರಾತ್​​ ಸೋದರಿಯರು; ಸಾಧನೆಗೆ ಮೆಚ್ಚುಗೆಯ ಮಹಾಪೂರ

(Gujarat government Wednesday announces Rs 105 crore relief package for Cyclone Tauktae hit fishermen)

Follow us on

Related Stories

Most Read Stories

Click on your DTH Provider to Add TV9 Kannada