
ನವದೆಹಲಿ, ನವೆಂಬರ್ 9: ಎರಡು ತಿಂಗಳ ಹಿಂದೆ ನಡೆದ ಘಟನೆಯೊಂದಕ್ಕೆ ಸೇಡು ತೀರಿಸಿಕೊಳ್ಳಲು 17 ವರ್ಷದ ಬಾಲಕನೊಬ್ಬ ತನ್ನ ಶಾಲೆಯ ಇನ್ನೊಬ್ಬ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿ (gurugaon firing incident) ನಡೆಸಿದ ಘಟನೆ ಬೆಳಕಿಗೆ ಬಂದಿದೆ. ತನ್ನ ಅಪ್ಪನ ಪಿಸ್ತೂಲ್ ಅನ್ನು ಬಳಸಿ ಈ ಯುವಕ ಕೃತ್ಯ ಎಸಗಿರುವುದು ತಿಳಿದುಬಂದಿದೆ. ಶುಕ್ರವಾರ ರಾತ್ರಿ (ನ. 7) ಈ ಘಟನೆ ಸಂಭವಿಸಿದ್ದು, ಗುಂಡೇಟು ತಿಂದ ಯುವಕ ಗಂಭೀರವಾಗಿ ಗಾಯಗೊಂಡು, ಸಾವು ಬದುಕಿನ ಹೋರಾಟದಲ್ಲಿದ್ದಾನೆ.
ಹರ್ಯಾಣ ರಾಜ್ಯಕ್ಕೆ ಸೇರಿದ ಮತ್ತು ದೆಹಲಿ ಎನ್ಸಿಆರ್ ವ್ಯಾಪ್ತಿಗೆ ಬರುವ ಗುರುಗ್ರಾಮ್ ನಗರದ ಸೆಕ್ಟರ್ 48ರಲ್ಲಿ ಈ ಫೈರಿಂಗ್ ಘಟನೆ ಸಂಭವಿಸಿದೆ. ಪೊಲೀಸರು 17 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಜೊತೆ ಘಟನೆಯಲ್ಲಿ ಭಾಗಿಯಾದ ಆತನ ಸ್ನೇಹಿತನನ್ನೂ ಬಂಧಿಸಲಾಗಿದೆ.
ಇದನ್ನೂ ಓದಿ: ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ ಲವ್ ಜಿಹಾದ್ಗೆ ಬಲಿಯಾಗಬೇಕಾಗುತ್ತೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಗಾಯಗೊಂಡಿರುವ ವಿದ್ಯಾರ್ಥಿಯು 11ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆತನ ತಾಯಿ ನೀಡಿರುವ ಹೇಳಿಕೆ ಪ್ರಕಾರ ಶುಕ್ರವಾರ ರಾತ್ರಿ ಆಕೆಯ ಮಗನಿಗೆ ಶಾಲಾ ಸ್ನೇಹಿತರೊಬ್ಬರಿಂದ ಕರೆ ಬಂದಿದ್ದು, ಭೇಟಿಯಾಗುವಂತೆ ಕೇಳಿದ್ದಾರೆ. ಇದಕ್ಕೆ ಆ ಯುವಕ ಮೊದಲು ಒಪ್ಪಲಿಲ್ಲ. ಸ್ನೇಹಿತನ ಬಲವಂತಕ್ಕೆ ಒಪ್ಪಿ ಖೇರ್ಕಿ ದೌಲಾ ಟೋಲ್ ಪ್ಲಾಜಾಗೆ ಹೋಗಿ, ಆರೋಪಿಯನ್ನು ಭೇಟಿಯಾಗಿದ್ದಾನೆ.
ಆರೋಪಿಯು ಈತನನ್ನು ಸೆಕ್ಟರ್ 48ರಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ. ಈ ವೇಳೆ ಆತನ ಜೊತೆ ಮತ್ತೊಬ್ಬ ಸ್ನೇಹಿತನೂ ಇರುತ್ತಾನೆ. ಆ ಮನೆಯಲ್ಲಿ ಆರೋಪಿಯು ತನ್ನ ಅಪ್ಪನ ಲೈಸೆನ್ಸ್ ಪಿಸ್ತೂಲ್ ಬಳಸಿ ಯುವಕನ ಮೇಲೆ ಫೈರಿಂಗ್ ಮಾಡಿದ್ದಾನೆ.
ಇದನ್ನೂ ಓದಿ: ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಜೇಮ್ಸ್ ವಾಟ್ಸನ್ ನಿಧನ
ಆರೋಪಿಯ ತಂದೆ ಒಬ್ಬ ಪ್ರಾಪರ್ಟಿ ಡೀಲರ್ ಆಗಿದ್ದಾರೆ. ಅವರ ಬಳಿ ಪರವಾನಿಗೆ ಹೊಂದಿರುವ ಪಿಸ್ತೂಲ್ ಇತ್ತು. ಮನೆಯಲ್ಲಿದ್ದ ಆ ಪಿಸ್ತೂಲ್ ಅನ್ನೇ ಬಳಸಿ ಆರೋಪಿಯು ತನ್ನ ಸಹಪಾಠಿಯ ಮೇಲೆ ದಾಳಿ ಮಾಡಿದ್ದಾನೆ. ಪೊಲೀಸರ ಕಂಟ್ರೋಲ್ ರೂಮ್ಗೆ ಶುಕ್ರವಾರ ಮಧ್ಯರಾತ್ರಿ ಕರೆ ಬಂದಿದೆ. ಸಾದರ್ ಠಾಣೆಯ ಪೊಲೀಸರು ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಗಾಯಾಳುವನ್ನು ಮೇದಾಂತ ಆಸ್ಪತ್ರೆಗೆ ಸಾಗಿಸಲಾಗಿತ್ತು. ಒಂದು ಪಿಸ್ತೂಲ್, ಒಂದು ಮ್ಯಾಗಜಿನ್, ಐದು ಲೈವ್ ಕಾರ್ಟ್ರಿಟ್ಜ್ಗಳನ್ನು ಘಟನೆಯ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ಅದೇ ಮನೆಯಲ್ಲಿ ಮತ್ತೊಂದು ಮ್ಯಾಗಜಿನ್ ಹಾಗೂ 65 ಲೈವ್ ಕಾರ್ಟ್ರಿಡ್ಜ್ಗಳು ಪೊಲೀಸರಿಗೆ ಸಿಕ್ಕಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ