ಸೋತು ಸೋತು ದಾಖಲೆ ನಿರ್ಮಿಸುತ್ತೇನೆ ಎನ್ನುತ್ತಾರೆ ಈ ವೃದ್ಧ; ತಮ್ಮ 94ನೇ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಸ್ವತಂತ್ರ ಅಭ್ಯರ್ಥಿ

| Updated By: Lakshmi Hegde

Updated on: Jan 20, 2022 | 6:25 PM

1988ರಲ್ಲಿ ಭಾರತದ ರಾಷ್ಟ್ರಪತಿ ಚುನಾವಣೆಗೂ ಸ್ಪರ್ಧಿಸಲು ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಅದು ತಿರಸ್ಕೃತಗೊಂಡಿತ್ತು. 2019ರಲ್ಲಿ ಆಗ್ರಾ ಮತ್ತು ಫತೇಹ್​​ಪುರ್​ ಕ್ಷೇತ್ರದಿಂದ ಸ್ಪರ್ಧಿಸಿದ್ದರು.  2021ರಲ್ಲಿ ಜಿಲ್ಲಾ ಪಂಚಾಯತ್​ ಚುನಾವಣೆಗಳಲ್ಲೂ ಸ್ಪರ್ಧಿಸಿದ್ದರು.

ಸೋತು ಸೋತು ದಾಖಲೆ ನಿರ್ಮಿಸುತ್ತೇನೆ ಎನ್ನುತ್ತಾರೆ ಈ ವೃದ್ಧ; ತಮ್ಮ 94ನೇ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಸ್ವತಂತ್ರ ಅಭ್ಯರ್ಥಿ
ಹಸನೂರಾಮ್ ಅಂಬೇಡ್ಕರಿ
Follow us on

ಆಗ್ರಾ: ಉತ್ತರಪ್ರದೇಶದ ಆಗ್ರಾದ ಖೇರಗಢ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು 74 ವರ್ಷದ ಹಸನೂರಾಮ್ ಅಂಬೇಡ್ಕರಿ ಎಂಬುವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರವನ್ನೂ ಸಲ್ಲಿಸಿಯಾಗಿದೆ. ಆದರೆ ಇದರಲ್ಲಿ ಒಂದು ದೊಡ್ಡ ವಿಶೇಷವಿದೆ. ಅದೇನೆಂದರೆ ಹಸನೂರಾಮ್​ರಿಗೆ ಇದು 94ನೇ ಚುನಾವಣೆ. ಅಂದರೆ ಅವರೀಗ 94ನೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂಬೇಡ್ಕರಿ ಅವರು ಕೃಷಿ ಕಾರ್ಮಿಕರು ಮತ್ತು ನರೇಗಾ ಉದ್ಯೋಗ ಕಾರ್ಡ್​ ಹೊಂದಿದ್ದಾರೆ. ಇವರು ಶಾಲೆಗೆ ಹೋಗಿ ವಿದ್ಯಾಭ್ಯಾಸ ಕಲಿತವರೇನೂ ಅಲ್ಲ. ಹಾಗಿದ್ದಾಗ್ಯೂ ಹಿಂದಿ, ಉರ್ದು, ಇಂಗ್ಲಿಷ್​​ ಭಾಷೆಯನ್ನು ಸರಾಗವಾಗಿ ಓದುತ್ತಾರೆ. ಬರೆಯುತ್ತಾರೆ. 

ಅಂಬೇಡ್ಕರಿ ಅವರು 1985ರಿಂದಲೂ ಹಲವು ವಿಧದ ಚುನಾವಣೆಗಳಲ್ಲಿ ಭಾಗವಹಿಸುತ್ತಲೇ ಇದ್ದಾರೆ. ರಾಜ್ಯದ ವಿಧಾನಸಭೆ ಚುನಾವಣೆಗಳು, ಲೋಕಸಭಾ ಚುನಾವಣೆ, ಪಂಚಾಯತ್​ ಚುನಾವಣೆಗಳು ಸೇರಿ ವಿವಿಧ ಮಾದರಿಗಳ ಇಲೆಕ್ಷನ್​ಗಳಲ್ಲಿ, ಬೇರೆಬೇರೆ ಕ್ಷೇತ್ರ, ಸೀಟ್​ಗಳಿಂದ ಸ್ಪರ್ಧಿಸಿದ್ದಾರೆ. ಅದೆಲ್ಲ ಸೇರಿ ಇಲ್ಲಿಯವರೆಗೆ ಒಟ್ಟು 93 ಚುನಾವಣೆಗಳಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಹಾಗೇ ಇವರು ಅಖಿಲ ಭಾರತೀಯ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟದ ಸದಸ್ಯರೂ ಹೌದು.

1988ರಲ್ಲಿ ಭಾರತದ ರಾಷ್ಟ್ರಪತಿ ಚುನಾವಣೆಗೂ ಸ್ಪರ್ಧಿಸಲು ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಅದು ತಿರಸ್ಕೃತಗೊಂಡಿತ್ತು. 2019ರಲ್ಲಿ ಆಗ್ರಾ ಮತ್ತು ಫತೇಹ್​​ಪುರ್​ ಕ್ಷೇತ್ರದಿಂದ ಸ್ಪರ್ಧಿಸಿದ್ದರು.  2021ರಲ್ಲಿ ಜಿಲ್ಲಾ ಪಂಚಾಯತ್​ ಚುನಾವಣೆಗಳಲ್ಲೂ ಸ್ಪರ್ಧಿಸಿದ್ದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಸನೂರಾಮ್ ಅಂಬೇಡ್ಕರಿ, ನಾನು ಸೋಲಲೆಂದೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಗೆಲ್ಲುವ ರಾಜಕಾರಣಿಗಳು ನಂತರ ಜನಸಮೂಹವನ್ನು ಮರೆಯುತ್ತಾರೆ. ನಾನು 100 ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತು, ದಾಖಲೆ ನಿರ್ಮಿಸಲು ಹೊರಟಿದ್ದೇನೆ. ನಾನು ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿ. ನನಗೆ ಚುನಾವಣೆಯಲ್ಲಿ ನನ್ನ ಪ್ರತಿಸ್ಪರ್ಧಿಗಳು ಯಾರು ಎಂಬ ಬಗ್ಗೆ ಯೋಚನೆಯಿಲ್ಲ. ಯಾರೆಲ್ಲ ಅಂಬೇಡ್ಕರ್ ತತ್ವಗಳನ್ನು ಗೌರವಿಸುತ್ತಾರೋ, ಅವರು ನನಗೆ ಮತ ಹಾಕುತ್ತಾರೆ ಎಂದು ಹೇಳಿದ್ದಾರೆ.

ಇಷ್ಟು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ ಅವರಿಗೆ ಇದುವರೆಗೆ ಬಂದ ಅತ್ಯಂತ ಹೆಚ್ಚಿನ ಮತಗಳು 36 ಸಾವಿರ. ಅದು 1989ರ ಲೋಕಸಭೆ ಚುನಾವಣೆಯಲ್ಲಿ ಫಿರೋಜಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದಾಗ ಬಂದಿತ್ತು. ಇದೀಗ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಅವರು, ಈಗಾಗಲೇ ಮನೆಮನೆ ಪ್ರಚಾರ ಶುರು ಮಾಡಿದ್ದಾರೆ.  ಅಂದಹಾಗೆ, ಅವರು 1985ರ ಸಮಯದಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಸೇರಿದ್ದರು. ಆದರೆ ಟಿಕೆಟ್ ಕೇಳಿದ್ದಕ್ಕೆ, ಪಕ್ಷದ ವರಿಷ್ಠರು ತುಂಬ ಕಟುವಾಗಿ ಮಾತನಾಡಿದ್ದರು. ನಿಮಗೆ ಟಿಕೆಟ್​ ಕೊಟ್ಟರೆ ನಿಮ್ಮ ಹೆಂಡತಿಯೂ ಮತ ಹಾಕುವುದಿಲ್ಲ ಎಂದು ಮುಖಂಡರು ಹೇಳಿದ್ದಕ್ಕೆ, ಬೇಸರಗೊಂಡು ನಾನು ಆ ಪಕ್ಷ ಬಿಟ್ಟುಬಿಟ್ಟೆ ಎಂದೂ ಹೇಳಿಕೊಂಡಿದ್ದಾರೆ.  ಹಾಗೇ, ಅಂದಿನಿಂದಲೂ ಸ್ವತಂತ್ರ ಅಭ್ಯರ್ಥಿಯಾಗಿಗೇ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Petrol- Diesel Price: ತೈಲ ಬೆಲೆ 7 ವರ್ಷದ ಗರಿಷ್ಠ, 4 ವಾರಗಳಲ್ಲಿ ಶೇ 25ರಷ್ಟು ಹೆಚ್ಚಳ; ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ

Published On - 6:25 pm, Thu, 20 January 22