ಕೇಂದ್ರದಲ್ಲಿ ಕುಮಾರಸ್ವಾಮಿ ಟೀಮ್​ನಲ್ಲಿರೋದು ಯಾರು? ಶೋಭಾ, ಸೋಮಣ್ಣಗೆ ಯಾರ ಅಡಿಯಲ್ಲಿ ಕೆಲಸ?

|

Updated on: Jun 11, 2024 | 5:23 PM

HD Kumaraswamy and his junior minister: ನಿರ್ಮಲಾ ಸೀತಾರಾಮನ್ ಅವರನ್ನೂ ಸೇರಿಸಿದರೆ ಕರ್ನಾಟಕದ ಐವರಿಗೆ ಮೋದಿ 3.0 ಸಂಪುಟದಲ್ಲಿ ಸಚಿವ ಭಾಗ್ಯ ಸಿಕ್ಕಿದೆ. ಪ್ರಹ್ಲಾದ್ ಜೋಷಿ ಮತ್ತು ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರೆತಿದೆ. ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವಡೇಕರ್ ಮೊದಲಾದವರು ನಿಭಾಯಿಸಿದ ಖಾತೆಗಳು ಎಚ್​ಡಿಕೆಗೆ ಲಭಿಸಿವೆ. ಶೋಭಾ ಕರಂದ್ಲಾಜೆ ಮತ್ತು ವಿ ಸೋಮಣ್ಣಗೂ ಉತ್ತಮ ಎನಿಸುವ ಖಾತೆಗಳು ಸಿಕ್ಕಿವೆ.

ಕೇಂದ್ರದಲ್ಲಿ ಕುಮಾರಸ್ವಾಮಿ ಟೀಮ್​ನಲ್ಲಿರೋದು ಯಾರು? ಶೋಭಾ, ಸೋಮಣ್ಣಗೆ ಯಾರ ಅಡಿಯಲ್ಲಿ ಕೆಲಸ?
ಎಚ್ ಡಿ ಕುಮಾರಸ್ವಾಮಿ
Follow us on

ನವದೆಹಲಿ, ಜೂನ್ 11: ಮೋದಿ 3.0 ಸರ್ಕಾರದಲ್ಲಿ ಕರ್ನಾಟಕದವರಿಗೆ ನಿರೀಕ್ಷಿಸಿದಷ್ಟು ಸಚಿವ ಸ್ಥಾನ ಸಿಕ್ಕಿಲ್ಲವಾದರೂ (Modi cabinet, portfolios) ಪ್ರಮುಖ ಖಾತೆಗಳಂತೂ ದಕ್ಕಿವೆ. ಎಚ್.ಡಿ. ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಷಿ (Pralhad Joshi) ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಸಿಕ್ಕಿದೆ. ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ರಾಜ್ಯ ದರ್ಜೆ ಸಚಿವರಾದರೂ ಪ್ರಮುಖ ಖಾತೆಗಳನ್ನು ನಿರ್ವಹಿಸಲಿದ್ದಾರೆ. ಈ ನಾಲ್ವರಲ್ಲಿ ಕುಮಾರಸ್ವಾಮಿ ಮತ್ತು ವಿ ಸೋಮಣ್ಣ ಇದೇ ಮೊದಲ ಬಾರಿಗೆ ಸಚಿವರಾಗಿರುವುದು. ಸಂಸದರಾಗಿರುವುದು ಕೂಡ ಇದೆ ಮೊದಲು. ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕ ಗುಂಪಿಗೆ ಸೇರಿಸಲಾಗಿದೆಯಾದರೂ ಅವರು ರಾಜ್ಯದ ಸಕ್ರಿಯ ರಾಜಕಾರಣಿ ಅಲ್ಲ.

ಕರ್ನಾಟಕಕ್ಕೆ ಮೋದಿ ಸಂಪುಟದಲ್ಲಿ ಸಿಕ್ಕ ಸ್ಥಾನ ಮಾನ…

  1. ಎಚ್.ಡಿ. ಕುಮಾರಸ್ವಾಮಿ: ಉಕ್ಕು ಸಚಿವ ಮತ್ತು ಬೃಹತ್ ಕೈಗಾರಿಕೆ ಸಚಿವ ಸ್ಥಾನ (ಸಂಪುಟ ದರ್ಜೆ)
  2. ಪ್ರಹ್ಲಾದ್ ಜೋಷಿ: ಗ್ರಾಹಕ ವ್ಯವಹಾರಗಳ ಖಾತೆ, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ; ಹಾಗೂ ಮರುಬಳಕೆ ಇಂಧನ ಸಚಿವ (ಸಂಪುಟ ದರ್ಜೆ)
  3. ವಿ ಸೋಮಣ್ಣ: ಜಲಶಕ್ತಿ ಖಾತೆ ಮತ್ತು ರೈಲ್ವೆ ಖಾತೆ. (ರಾಜ್ಯ ದರ್ಜೆ)
  4. ಶೋಭಾ ಕರಂದ್ಲಾಜೆ: ಎಂಎಸ್​ಎಂಇ ಖಾತೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ (ರಾಜ್ಯ ದರ್ಜೆ)

ಕುಮಾರಸ್ವಾಮಿ ಜೊತೆ ಭೂಪತಿರಾಜು

ಎಚ್.ಡಿ. ಕುಮಾರಸ್ವಾಮಿ ಅವರಿಗೆ ಎರಡು ಖಾತೆ ವಹಿಸಲಾಗಿದೆ. ಈ ಎರಡೂ ಖಾತೆಗಳಿಗೆ ಕುಮಾರಸ್ವಾಮಿಗೆ ಸಹಾಯಕವಾಗಿರುವವರು ಆಂಧ್ರದ ಬಿಜೆಪಿ ಸಂಸದ ಭೂಪತಿ ಶ್ರೀನಿವಾಸ ವರ್ಮಾ. ಅವರನ್ನು ರಾಜ್ಯ ದರ್ಜೆ ಸಚಿವರನ್ನಾಗಿ ಮಾಡಲಾಗಿದೆ.

ಹಿಂದಿನ ಸರ್ಕಾರದಲ್ಲಿ ಉಕ್ಕು ಸಚಿವ ಸ್ಥಾನವನ್ನು ಧರ್ಮೇಂದ್ರ ಪ್ರಧಾನ್, ರಾಮಚಂದ್ರ ಪ್ರಸಾದ್ ಸಿಂಗ್, ಜ್ಯೋತಿರಾದಿತ್ಯ ಸಿಂಗ್ ಅವರು ನಿರ್ವಹಿಸಿದ್ದಾರೆ. ಯಾರೊಬ್ಬರೂ ಕೂಡ ಐದು ವರ್ಷ ಪೂರ್ಣಾವಧಿ ಈ ಖಾತೆಯನ್ನು ಉಳಿಸಿಕೊಂಡಿಲ್ಲ.

ಇದನ್ನೂ ಓದಿ: ಶೀಘ್ರದಲ್ಲೇ ಷೇರು ಮಾರುಕಟ್ಟೆ ಕುಸಿಯುತ್ತೆ ನೋಡ್ತಿರಿ… 2008ಕ್ಕಿಂತಲೂ ಭೀಕರವಾಗಿರುತ್ತೆ: ಅಮೆರಿಕದ ಆರ್ಥಿಕ ತಜ್ಞರ ಎಚ್ಚರಿಕೆ

ಇನ್ನು, ಬೃಹತ್ ಕೈಗಾರಿಕೆ ಖಾತೆಯನ್ನು ಹಿಂದಿನ ಸರ್ಕಾರದಲ್ಲಿ ಅರವಿಂದ್ ಸಾವಂತ್, ಪ್ರಕಾಶ್ ಜಾವಡೇಕರ್ ಮತ್ತು ಮಹೇಂದ್ರನಾಥ್ ಪಾಂಡೆ ನಿರ್ವಹಿಸಿದ್ದಾರೆ. ಇವರಲ್ಲೂ ಯಾರೂ ಕೂಡ ಐದು ವರ್ಷ ಈ ಖಾತೆ ಇಟ್ಟುಕೊಳ್ಳಲು ಆಗಿಲ್ಲ.

ವಿ ಸೋಮಣ್ಣ ಹಾಗೂ ಅವರ ಖಾತೆಗಳ ಸುತ್ತ

ವಿ ಸೋಮಣ್ಣ ಅವರಿಗೆ ಜಲಶಕ್ತಿ ಖಾತೆ ಮತ್ತು ರೈಲ್ವೆ ಖಾತೆಯಲ್ಲಿ ರಾಜ್ಯ ದರ್ಜೆ ಸಚಿವ ಸ್ಥಾನಗಳು ಸಿಕ್ಕಿವೆ. ಜಲ ಶಕ್ತಿ ಸಚಿವಾಲಯದಲ್ಲಿ ಸಂಪುಟ ದರ್ಜೆ ಸಚಿವರಾಗಿರುವುದು ಗುಜರಾತ್​ನ ಚಂದ್ರಕಾಂತ್ ಪಾಟೀಲ್. ಈ ಖಾತೆಯಲ್ಲಿ ಸೋಮಣ್ಣ ಮತ್ತು ರಾಜ್ ಭೂಷಣ್ ಚೌಧರಿ ಕಿರಿಯ ಸಚಿವರಾಗಿರುತ್ತಾರೆ.

ಇನ್ನು, ಅಶ್ವಿನಿ ವೈಷ್ಣವ್ ಅವರು ರೈಲ್ವೆ ಸಚಿವರಾಗಿ ಮುಂದುವರಿದಿದ್ದಾರೆ. ಇಲ್ಲಿ ಇವರಿಗೆ ಸೋಮಣ್ಣ ಜೊತೆ ಸಹಾಯಕವಾಗಿರುವವರು ರವ್ನೀತ್ ಸಿಂಗ್ ಬಿಟ್ಟು.

ಹಿಂದಿನ ಸರ್ಕಾರದಲ್ಲಿ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಜಲಶಕ್ತಿ ಸಚಿವರಾಗಿದ್ದರು. ರಾಜೀವ್ ಚಂದ್ರಶೇಖರ್ ರಾಜ್ಯ ದರ್ಜೆ ಸಚಿವರಾಗಿದ್ದರು.

ಪ್ರಹ್ಲಾದ್ ಜೋಷಿ ಖಾತೆ ಬದಲು

ಹಿಂದಿನ ಸರ್ಕಾರದಲ್ಲಿ ಪ್ರಹ್ಲಾದ್ ಜೋಷಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಈ ಬಾರಿ ಅವರಿಗೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹಾಗೂ ಹೊಸ ಮತ್ತು ಮರಬಳಕೆ ಇಂಧನ ಈ ಎರಡು ಖಾತೆಗಳ ಸಚಿವ ಸ್ಥಾನ ಸಿಕ್ಕಿದೆ.

ಗ್ರಾಹಕ ವ್ಯವಹಾರಗಳ ಖಾತೆಯಲ್ಲಿ ಪ್ರಹ್ಲಾದ್ ಜೋಷಿಗೆ ನೆರವಾಗಲು ಇಬ್ಬರು ರಾಜ್ಯ ದರ್ಜೆ ಸಚಿವರನ್ನು ಆರಿಸಲಾಗಿದೆ. ಬಿಎಲ್ ವರ್ಮಾ ಮತ್ತು ನಿಮುಬೆನ್ ಜಾಂತಿಭಾಯ್ ಬಾಂಭಾನಿಯಾ ಅವರು ಜೋಷಿಗೆ ಸಹಾಯಕವಾಗಿರಲಿದ್ದಾರೆ.

ಇನ್ನು, ರಿನಿವಬಲ್ ಎನರ್ಜಿ ಖಾತೆಯಲ್ಲಿ ರಾಜ್ಯ ದರ್ಜೆ ಸಚಿವರಾಗಿರುವುದು ಶ್ರೀಪಾದ್ ನಾಯ್ಕ್.

ಇದನ್ನೂ ಓದಿ: ದುಬಾರಿಯಾಗಲಿದೆ ಯೂರೋಪ್ ಪ್ರವಾಸ; ಶೆಂಗನ್ ವೀಸಾ ಶುಲ್ಕ ಶೇ. 12ರಷ್ಟು ಹೆಚ್ಚಳ; ಯಾವುದಿದು ವೀಸಾ?

ಸಣ್ಣ ಕೈಗಾರಿಕೆಗಳ ಪ್ರಪಂಚದಲ್ಲಿ ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ ಹಿಂದಿನ ಸರ್ಕಾರದಲ್ಲಿ ಆಹಾರ ಸಂಸ್ಕರಣೆ ಉದ್ಯಮ, ಕೃಷಿ ಮತ್ತು ರೈತ ಕಲ್ಯಾಣ ಖಾತೆಗಳಲ್ಲಿ ರಾಜ್ಯ ದರ್ಜೆ ಸಚಿವರಾಗಿದ್ದರು. ಈ ಬಾರಿ ಎಂಎಸ್​ಎಂಇ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಯಲ್ಲಿ ರಾಜ್ಯ ದರ್ಜೆ ಸಚಿವೆಯಾಗಿದ್ದಾರೆ.

ಇಲ್ಲಿ ಎಂಎಸ್​ಎಂಇ ಖಾತೆಯ ಕ್ಯಾಬಿನೆಟ್ ಸಚಿವರಾಗಿರುವುದು ಜಿತನ್ ರಾಮ್ ಮಾಂಝಿ. ಇನ್ನು ಕಾರ್ಮಿಕ ಮತ್ತು ಉದ್ಯೋಗ ಖಾತೆಯಲ್ಲಿ ಕ್ಯಾಬಿನೆಟ್ ಸಚಿವರಾಗಿರುವುದು ಡಾ. ಮನಸುಖ್ ಮಾಂಡವಿಯ. ಇವರಿಬ್ಬರ ಅಡಿಯಲ್ಲಿ ಶೋಭಾ ಕರಂದ್ಲಾಜೆ ಕರ್ತವ್ಯ ನಿಭಾಯಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Tue, 11 June 24