ಆಂಧ್ರ ಪ್ರದೇಶದಲ್ಲಿ ಮಳೆಯಿಂದ ಸಾವಿನ ಸಂಖ್ಯೆ 25ಕ್ಕೆ ಏರಿಕೆ, 17ಕ್ಕೂ ಅಧಿಕ ಜನ ನಾಪತ್ತೆ, 20,000ಕ್ಕೂ ಅಧಿಕ ಜನರ ಸ್ಥಳಾಂತರ

Andhra Pradesh Rain: ಆಂಧ್ರ ಪ್ರದೇಶದಲ್ಲಿ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ. 17ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಆಂಧ್ರ ಪ್ರದೇಶದಲ್ಲಿ ಮಳೆಯಿಂದ ಸಾವಿನ ಸಂಖ್ಯೆ 25ಕ್ಕೆ ಏರಿಕೆ, 17ಕ್ಕೂ ಅಧಿಕ ಜನ ನಾಪತ್ತೆ, 20,000ಕ್ಕೂ ಅಧಿಕ ಜನರ ಸ್ಥಳಾಂತರ
ಆಂಧ್ರ ಪ್ರದೇಶದ ನೆಲ್ಲೋರ್​ನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಸ್ಥಳೀಯರು (Credits: PTI)

ಭಾರೀ ಮಳೆಯಿಂದಾಗಿ ದಕ್ಷಿಣ ಆಂಧ್ರಪ್ರದೇಶದ ರಾಯಲಸೀಮೆ ಭಾಗದ ಜಿಲ್ಲೆಗಳಾದ ಚಿತ್ತೂರು, ಕಡಪ, ನೆಲ್ಲೂರು ಮತ್ತು ಅನಂತಪುರ ಜಿಲ್ಲೆಗಳು ತತ್ತರಿಸಿವೆ. ಇದುವರೆಗೆ ಸುಮಾರು 20,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಮತ್ತು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ನೂರಕ್ಕೂ ಹೆಚ್ಚು ಗ್ರಾಮಗಳು, ಕಡಪದಲ್ಲಿ ಬಹುತೇಕ ಗ್ರಾಮಗಳು ಪ್ರಸ್ತುತ ಜಲಾವೃತವಾಗಿವೆ. ಸಾವಿನ ಸಂಖ್ಯೆ 25 ಕ್ಕೆ ಏರಿದ್ದು, 17ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರು ಇನ್ನೂ ಪತ್ತೆಯಾಗಿರದ ಕಾರಣ, ಸಾವಿನ ಸಂಖ್ಯೆ ಏರುವ ಅಪಾಯವಿದೆ. ಪ್ರವಾಹದಲ್ಲಿ ಅಸಂಖ್ಯ ಜಾನುವಾರಗಳು ಕೊಚ್ಚಿಹೋಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳ ಮಾಹಿತಿ ಆಧರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೃತರ ಕುಟುಂಬಕ್ಕೆ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

ಭಾರತೀಯ ವಾಯುಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ಹಗಲಿರುಳೆನ್ನದೇ ನಿರತರಾಗಿದ್ದಾರೆ. ಅನಂತಪುರ, ಕಡಪ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸಂಭವಿಸಿದ ಭಾರಿ ಪ್ರವಾಹದಿಂದ ಇದುವರೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ಕನಿಷ್ಠ 64 ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರ ಟಿಪ್ಪಣಿಯಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಶನಿವಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕಡಪ ಮತ್ತು ಚಿತ್ತೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಹಾನಿಯ ಬಗ್ಗೆ ವಿವರಗಳನ್ನು ಪಡೆದ ಅವರು ಪ್ರವಾಹದ ಕಡಿಮೆಯಾದ ತಕ್ಷಣ ಬೆಳೆ ನಷ್ಟದ ಲೆಕ್ಕಾಚಾರವನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಸಿಎಂ ಜತೆ ದೂರವಾಣಿ ಮೂಲಕ ಮಾತನಾಡಿ ಎಲ್ಲ ನೆರವಿನ ಭರವಸೆ ನೀಡಿದ್ದರು.

ಚಿತ್ತೂರು ಮತ್ತು ಕಡಪದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವುದು:

ಪ್ರವಾಹದಿಂದ ಸಿಲುಕಿಕೊಂಡವರಿಗೆ ಆಹಾರ ಕಿಟ್ ವಿತರಿಸುತ್ತಿರುವುದು:

ಗುರುವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಿತ್ತೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಹಲವಾರು ನದಿಗಳು, ಕಾಲುವೆಗಳು ಮತ್ತು ಜಲಮೂಲಗಳು ತುಂಬಿ ಹರಿಯುತ್ತಿವೆ. ಸ್ವರ್ಣಮುಖಿ, ಕಾಳಿಂಗಿ ನದಿಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, 32,000 ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಏಳು ತಂಡಗಳು ಮತ್ತು ಒಂಬತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಕಡಪ ಮತ್ತು ಅನಂತಪುರ ಜಿಲ್ಲೆಗಳಲ್ಲಿ ತಲಾ ಒಂದರಂತೆ ಎರಡು ಹೆಲಿಕಾಪ್ಟರ್‌ಗಳು ಸಹ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿವೆ.

ಇದನ್ನೂ ಓದಿ:

ಮಂಚೇನಹಳ್ಳಿ ಕೆರೆ ಕಟ್ಟೆಯಲ್ಲಿ ನೀರು ಸೋರಿಕೆ; ರಾತ್ರೋರಾತ್ರಿ ದುರಸ್ತಿ ಕಾರ್ಯ ಮಾಡಿದ ಸ್ಥಳೀಯರು, ಜಿಲ್ಲೆಯ 13 ರಸ್ತೆಗಳ ಸಂಚಾರ ಮಾರ್ಗ ಬಂದ್

ಪಶ್ಚಿಮ ಬಂಗಾಳದಲ್ಲಿ ಮಧ್ಯರಾತ್ರಿ ಟಿಎಂಸಿ ಮುಖಂಡನ ಹತ್ಯೆ; ಮನೆಗೇ ಬಂದು ಗುಂಡು ಹೊಡೆದ ದುಷ್ಕರ್ಮಿಗಳು

Click on your DTH Provider to Add TV9 Kannada