ಜಮ್ಮು- ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
Jammu And Kashmir: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಜಿಲ್ಲಾ ಕಮಾಂಡರ್ ಅನ್ನು ಹತ್ಯೆ ಮಾಡಲಾಗಿದೆ.
ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಸ್ಮುಜಿ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಜಿಲ್ಲಾ ಕಮಾಂಡರ್ ಅನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಲಷ್ಕರ್-ಎ-ತೊಯ್ಬಾ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF)ನ ಇಬ್ಬರು ಕಮಾಂಡರ್ಗಳು ಸೇರಿದಂತೆ ಒಟ್ಟು 6 ಉಗ್ರರನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯಂತೆ, ಇಬ್ಬರು ಭಯೋತ್ಪಾದಕರಿದ್ದ ಖಚಿತ ಸುಳಿವಿನ ಮೇರೆಗೆ ಜಮ್ಮು- ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಶನಿವಾರ ಬೆಳಿಗ್ಗೆ ಅಸ್ಮುಜಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಭಯೋತ್ಪಾದಕರ ಇರುವಿಕೆ ಖಚಿತವಾದ ನಂತರ, ಆ ಪ್ರದೇಶದ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಯಿತು ಮತ್ತು ಭಯೋತ್ಪಾದಕರಿಗೆ ಶರಣಾಗುವಂತೆ ತಿಳಿಸಲಾಯಿತು. ಆದರೆ, ಉಗ್ರರು ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಪ್ರತಿದಾಳಿ ನಡೆಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ನಂತರ ನಡೆದ ಎನ್‌ಕೌಂಟರ್‌ನಲ್ಲಿ, ಮಲ್ವಾನ್‌ನ ದೇವ್ಸರದ ಮುದಾಸಿರ್ ಅಹ್ಮದ್ ವಾಗೇ ಹತ್ಯೆಯಾಗಿದ್ದಾನೆ ಎಂದು ತಿಳಿಸಲಾಗಿದೆ. ವಾಗೇ (ಎ+) ವರ್ಗದ ಭಯೋತ್ಪಾದಕನಾಗಿದ್ದು, ಪ್ರಸ್ತುತ ಹಿಜ್ಬುಲ್ ಮುಜಾಹಿದ್ದೀನ್‌ನ ಜಿಲ್ಲಾ ಕಮಾಂಡರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಾಗೇ 2018 ರಿಂದ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಕಾರ್ಯಾಚರಣೆಯ ನಂತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ಸೈಟ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಎಎನ್ಐ ಹಂಚಿಕೊಂಡಿರುವ ಮಾಹಿತಿ:
One terrorist Mudasir Ahmad Wagay, a resident of Malwan, Devsar was killed. He was (A+) categorized terrorist & was presently District Commander of terrorist outfit HM. He was active from 2018. Incriminating material including arms & ammunition recovered from the site: J&K Police
— ANI (@ANI) November 20, 2021
ಬುಧವಾರ, ಭದ್ರತಾ ಪಡೆಗಳು ಕುಲ್ಗಾಮ್ ಜಿಲ್ಲೆಯ ಪೊಂಬೆ ಮತ್ತು ಗೋಪಾಲ್ಪೋರಾ ಗ್ರಾಮಗಳಲ್ಲಿ ಐದು ಸ್ಥಳೀಯ ಭಯೋತ್ಪಾದಕರನ್ನು ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಿದ್ದರು. ಹತರಾದ ಭಯೋತ್ಪಾದಕರ ಪೈಕಿ ಇಬ್ಬರನ್ನು ಕ್ರಮವಾಗಿ ಟಿಆರ್ಎಫ್ ಮತ್ತು ಹುಜ್ಬುಲ್ ಮುಜಾಹಿದ್ದೀನ್‌ನ ಉನ್ನತ ಕಮಾಂಡರ್‌ಗಳಾದ ಶಾಕಿರ್ ನಜರ್ ಮತ್ತು ಅಫಾಕ್ ಸಿಕೇಂದರ್ ಲೋನ್ ಎಂದು ಪೊಲೀಸರು ಗುರುತಿಸಿದ್ದಾರೆ.
ಇದನ್ನೂ ಓದಿ:
Published On - 8:24 am, Sun, 21 November 21