ದೆಹಲಿಯಲ್ಲಿ ಭಾರೀ ಮಳೆ, ರಸ್ತೆ ಮೇಲೆ ನೀರು: ವರ್ಕ್​ ಫ್ರಂ ಹೋಂಗೆ ಆದ್ಯತೆ ಕೊಡಿ ಎಂದ ಟ್ರಾಫಿಕ್ ಪೊಲೀಸರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 23, 2022 | 2:09 PM

ಜನರು ಸಾಧ್ಯವಾದ ಮಟ್ಟಿಗೂ ಮನೆಗಳಲ್ಲಿಯೇ ಇರಬೇಕು. ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಂಗೆ ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಭಾರೀ ಮಳೆ, ರಸ್ತೆ ಮೇಲೆ ನೀರು: ವರ್ಕ್​ ಫ್ರಂ ಹೋಂಗೆ ಆದ್ಯತೆ ಕೊಡಿ ಎಂದ ಟ್ರಾಫಿಕ್ ಪೊಲೀಸರು
ಮಳೆ (ಸಂಗ್ರಹ ಚಿತ್ರ)
Follow us on

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ (ಮೇ 23) ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿರುವುದರಿಂದ ಜನರು ಸಾಧ್ಯವಾದ ಮಟ್ಟಿಗೂ ಮನೆಗಳಲ್ಲಿಯೇ ಇರಬೇಕು. ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಂಗೆ ಅವಕಾಶ ಮಾಡಿಕೊಡಬೇಕು ಎಂದು ಗುರುಗ್ರಾಮ (Gurugram) ಜಿಲ್ಲಾಡಳಿತವು ಸೂಚಿಸಿದೆ. ದೆಹಲಿಗೆ ಹೊಂದಿಕೊಂಡಂತೆ ಇರುವ ಗುರುಗ್ರಾಮದಲ್ಲಿಯೂ ಭರ್ಜರಿ ಮಳೆಯಾಗುತ್ತಿದ್ದು, ರಸ್ತೆಗಳ ಮೇಲೆ ನೀರು ನಿಂತಿದೆ. ಬಹುತೇಕ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ಗುರುಗ್ರಾಮದಲ್ಲಿ ಕಚೇರಿಗಳು ಇರುವವರು ವರ್ಕ್​ ಫ್ರಂ ಹೋಮ್​ಗೆ ಆದ್ಯತೆ ಕೊಡಬೇಕು ಎಂದು ಗುರುಗ್ರಾಮದ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಸಲಹೆ ಮಾಡಿದ್ದಾರೆ. ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಿದ್ದರೆ ಸ್ಥಳೀಯ ಆಡಳಿತ ಸಂಸ್ಥೆಗಳು ಶೀಘ್ರದಲ್ಲಿಯೇ ರಿಪೇರಿ ಕಾಮಗಾರಿ ನಿರ್ವಹಿಸಲೂ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಚೇರಿಗಳಲ್ಲಿ ಉದ್ಯೋಗಿಗಳ ಹಾಜರಾತಿ ಪ್ರಮಾಣ ಕಡಿಮೆಯಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಎಷ್ಟು ಸಾಧ್ಯವೋ ಅಷ್ಟೂ ಜನರಿಗೆ ಮನೆಯಿಂದಲೇ ಕೆಲಸ ಮಾಡಿಸಿ. ಕಾರ್ಖಾನೆಗಳು ಮತ್ತು ಉತ್ಪಾದನಾ ಘಟಕಗಳಿಗೆ ವರ್ಕ್​ ಫ್ರಂ ಹೋಮ್ ಕೊಡುವುದು ಸಾಧ್ಯವಾಗದಿರಬಹುದು. ಆದರೆ ಯಾರಿಗೆಲ್ಲಾ ವರ್ಕ್​ ಫ್ರಂ ಹೋಮ್ ಸಾಧ್ಯವೋ, ಅಂತವರಿಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ಕೊಡಬೇಕು ಎಂದು ಸೂಚಿಸಿದರು.

ಗುರುಗ್ರಾಮದಲ್ಲಿ ಟ್ರಾಫಿಕ್ ನಿರ್ವಹಣೆಗೆಂದೇ 2,500 ಪೊಲೀಸರನ್ನು ನಿಯೋಜಿಸಲಾಗಿದೆ. ನಗರದ ವಿವಿಧೆಡೆ ವಾಹನ ಸಂಚಾರ ಸ್ತಬ್ಧವಾಗಿದ್ದು, ಸಹಜ ಸ್ಥಿತಿ ನೆಲೆಗೊಳಿಸಲು ಪೊಲೀಸರು ಹೆಣಗಾಡುತ್ತಿದ್ದಾರೆ.

ಡಿಸಿಪಿ ರವೀಂದ್ರ ಕುಮಾರ್ ತೋಮಾರ್ ಸಹ ಈ ಬಗ್ಗೆ ಪ್ರಕ್ರಿಯಿಸಿದ್ದು, ನಗರದ ಹಲವೆಡೆ ಮರಗಳು ಬುಡಸಹಿತ ಉರುಳಿವೆ. ಪರಿಸ್ಥಿತಿ ನಿರ್ವಹಣೆಗೆಂದು ಹಲವು ತಂಡಗಳನ್ನು ನಿಯೋಜಿಸಲಾಗಿದೆ. ನಿಂತಿರುವ ನೀರನ್ನು ಪಂಪ್ ಮಾಡಿ ಹೊರಹಾಕಲಾಗುತ್ತಿದೆ. ಹಲವೆಡೆ ವಾಹನ ಸಂಚಾರ ಸ್ಥಗಿತಗೊಂಡಿದೆ. ರಸ್ತೆಗೆ ಇಳಿಯುವ ಮೊದಲು ಹವಾಮಾನ ಮತ್ತು ಟ್ರಾಫಿಕ್ ಜಾಮ್ ಮಾಹಿತಿ ಅವಲೋಕಿಸುವುದು ಒಳ್ಳೆಯದು ಎಂದು ಹೇಳಿದರು.

Published On - 2:08 pm, Mon, 23 May 22