Shocking: ಆಮ್ಲಜನಕ ಕೊರತೆಯಿಂದ ವ್ಯಕ್ತಿ ಸಾವು ಎಂದು ಆರೋಪಿಸಿ ವೈದ್ಯರನ್ನು ಅಮಾನುಷವಾಗಿ ಥಳಿಸಿದ ಜನರು; 24 ಮಂದಿ ಪೊಲೀಸರ ವಶಕ್ಕೆ

Shocking: ಆಮ್ಲಜನಕ ಕೊರತೆಯಿಂದ ವ್ಯಕ್ತಿ ಸಾವು ಎಂದು ಆರೋಪಿಸಿ ವೈದ್ಯರನ್ನು ಅಮಾನುಷವಾಗಿ ಥಳಿಸಿದ ಜನರು; 24 ಮಂದಿ ಪೊಲೀಸರ ವಶಕ್ಕೆ
ಹಲ್ಲೆಯ ದೃಶ್ಯಾವಳಿ

ವೈದ್ಯರ ಮೇಲೆ ಮೃತ ವ್ಯಕ್ತಿಯ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈದ್ಯರಿಗೆ ಕಾಲಿನಿಂದ ಒದ್ದು, ಕೈಗೆ ಸಿಕ್ಕ ವಸ್ತುಗಳಿಂದೆಲ್ಲಾ ಥಳಿಸಿ ಎಳೆದಾಡಲಾಗಿದ್ದು, ಆಮ್ಲಜನಕದ ಕೊರತೆಯಿಂದ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ.

Skanda

|

Jun 02, 2021 | 12:35 PM

ಗುವಾಹಟಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ವೈದ್ಯಕೀಯ ವರ್ಗ ಅವಿರತ ಶ್ರಮಿಸುತ್ತಿದೆ. ಕೆಲವೆಡೆ ಅಕ್ರಮ ನಡೆದಿರುವುದು ಹೌದಾದರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರ ವರ್ಗ ದೊಡ್ಡದಿದೆ ಎಂಬುದನ್ನು ಅಲ್ಲಗಳೆಯಲಾಗದು. ವೈಯಕ್ತಿಕ ಜೀವನವನ್ನು ಬದಿಗೊತ್ತಿ ಸೇವೆಯಲ್ಲಿ ತೊಡಗಿರುವ ವೈದ್ಯರ ಪೈಕಿ ಕನಿಷ್ಠವೆಂದರೂ 594 ಮಂದಿ ಎರಡನೇ ಅಲೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆಂದು ಐಎಂಎ ತಿಳಿಸಿದೆ. ಆದರೆ, ಎಷ್ಟೋ ಕಡೆಗಳಲ್ಲಿ ಮಾಡದ ತಪ್ಪಿಗೆ ವೈದ್ಯರನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ಧವೇ ದೌರ್ಜನ್ಯವೆಸಗಲಾಗುತ್ತಿದೆ. ಅಸ್ಸಾಂ ರಾಜ್ಯದಲ್ಲೂ ಇಂತಹದ್ದೇ ಒಂದು ಘಟನೆ ಜರುಗಿದ್ದು ಆಮ್ಲಜನಕದ ಕೊರತೆಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಸಿಟ್ಟೆಗೆದ್ದ ಸಂಬಂಧಿಕರು ವೈದ್ಯರನ್ನು ಥಳಿಸಿದ್ದಾರೆ. ಘಟನೆ ಪರಿಣಾಮ ವೈದ್ಯರೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಸ್ಸಾಂನ ಗುವಾಹಟಿಯಿಂದ 140 ಕಿ.ಮೀ ದೂರದಲ್ಲಿರುವ ಹೋಜೈನ ಉದಾಲಿ ಮಾಡೆಲ್ ಆಸ್ಪತ್ರೆಯಲ್ಲಿ ಘಟನೆ ಸಂಭವಿಸಿದ್ದು, ವೈದ್ಯರ ಮೇಲೆ ಮೃತ ವ್ಯಕ್ತಿಯ ಸಂಬಂಧಿಕರು ಅಮಾನುಷವಾಗಿ ಹಲ್ಲೆ ನಡೆಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈದ್ಯರಿಗೆ ಕಾಲಿನಿಂದ ಒದ್ದು, ಕೈಗೆ ಸಿಕ್ಕ ವಸ್ತುಗಳಿಂದೆಲ್ಲಾ ಥಳಿಸಿ ಎಳೆದಾಡಲಾಗಿದ್ದು, ಆಮ್ಲಜನಕದ ಕೊರತೆಯಿಂದ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ.

ನಿನ್ನೆ (ಜೂನ್ 1) ಮಧ್ಯಾಹ್ನದ ವೇಳೆಗೆ ಸದರಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ವಿಡಿಯೋ ಆಧರಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ ಪೊಲೀಸರು ತಡರಾತ್ರಿಯೊಳಗೆ ಮುಖ್ಯ ಆರೋಪಿಯನ್ನು ಸೇರಿಸಿ 24 ಜನರನ್ನು ವಶಕ್ಕೆ ಪಡೆದಿದ್ದಾರೆ. ಮೃತಪಟ್ಟ ರೋಗಿಯನ್ನು ಗಿಯಾಜ್ ಉದ್ದಿನ್ ಎಂದು ಗುರುತಿಸಲಾಗಿದ್ದು ಆತನ ಸಂಬಂಧಿಕರು ಉದ್ರಿಕ್ತರಾಗಿ ಹಲ್ಲೆ ನಡೆಸಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಹಲ್ಲೆಗೊಳಗಾದ ವೈದ್ಯ ಡಾ. ಸಯೂಜ್ ಕುಮಾರ್ ಸೇನಾಪತಿ ತಿಳಿಸಿರುವಂತೆ, ನಿನ್ನೆ ಮಧ್ಯಾಹ್ನದ ವೇಳೆಗೆ ರೋಗಿಯನ್ನು ಆಸ್ಪತ್ರೆಗೆ ಕರೆತಂದ ಸಂಬಂಧಿಕರು, ಬೆಳಗ್ಗೆಯಿಂದ ಆತ ಮೂತ್ರ ವಿಸರ್ಜನೆ ಮಾಡಿಲ್ಲ. ಈಗ ಪರಿಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ. ನಂತರ ವೈದ್ಯರು ವ್ಯಕ್ತಿಯನ್ನು ಪರಿಶೀಲಿಸುವಾಗ ಆತ ಮೃತಪಟ್ಟಿರುವುದು ತಿಳಿದುಬಂದಿದೆ. ಆದರೆ, ಈ ವಿಚಾರವನ್ನು ಸಂಬಂಧಿಗಳ ಮುಂದೆ ಪ್ರಸ್ತಾಪಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಅಲ್ಲಿ ನೆರೆದಿದ್ದವರು ವೈದ್ಯರನ್ನೇ ದೂಷಿಸಲು ಆರಂಭಿಸಿದ್ದಾರೆ.

ನಂತರ ಮೃತ ವ್ಯಕ್ತಿಯ ಕಡೆಯವರು ಎನ್ನಲಾದ ಗುಂಪೊಂದು ಆಸ್ಪತ್ರೆಗೆ ನುಗ್ಗಿದ್ದು ದಾಂಧಲೆ ಆರಂಭಿಸಿದೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರಾದರೂ ಕೋಣೆಯೊಂದರಲ್ಲಿ ಅಡಗಿಸಿಕೊಳ್ಳಲೆತ್ನಿಸಿದ ಡಾ. ಸೇನಾಪತಿ ಉದ್ರಿಕ್ತರ ಕೈಗೆ ಸಿಕ್ಕಿದ್ದಾರೆ. ಅಲ್ಲದೇ ಈ ವೇಳೆ ಅವರ ಚಿನ್ನದ ಸರ, ಉಂಗುರ ಹಾಗೂ ಮೊಬೈಲ್​ ಕೂಡಾ ಕಳುವಾಗಿದೆ ಎನ್ನಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ವೈದ್ಯರನ್ನು ತಕ್ಷಣವೇ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ವೈದ್ಯರ ಮೇಲಾಗಿರುವ ಹಲ್ಲೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಭಾರತೀಯ ವೈದ್ಯಕೀಯ ಸಂಘ ಕೂಡ ಘಟನೆಯನ್ನು ಖಂಡಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಸ್ಸಾಂ ರಾಜ್ಯ ಪೊಲೀಸರಿಗೆ ನಿರ್ದೇಶಿಸಿದ್ದು, ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಸಿಬ್ಬಂದಿ ಮೇಲಿನ ಹಿಂಸಾಚಾರ ವಿರುದ್ಧ ತಿರುಗಿಬಿದ್ದ ಐಎಂಎ; ಗೃಹ ಸಚಿವ ಅಮಿತ್​ ಶಾಗೆ ಪತ್ರ 

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕನಿಷ್ಠ 594 ಭಾರತೀಯ ವೈದ್ಯರು ಮೃತಪಟ್ಟಿದ್ದಾರೆ: ಐಎಂಎ ವರದಿ

Follow us on

Related Stories

Most Read Stories

Click on your DTH Provider to Add TV9 Kannada