Omicron Variant: ಒಮಿಕ್ರಾನ್ ಹರಡುವಿಕೆ ಆತಂಕದ ನಡುವೆಯೇ ಗುಡ್ ನ್ಯೂಸ್ ಕೊಟ್ಟ ಎರಡು ಅಧ್ಯಯನಗಳು !
ಇಂಗ್ಲೆಂಡ್ನಲ್ಲಿ ನಡೆದ ಎರಡನೇ ಅಧ್ಯಯನವೂ ಕೂಡ ಇದನ್ನೇ ತೋರಿಸಿದೆ. ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್ ಸೋಂಕಿತರು ಆಸ್ಪತ್ರೆಗೆ ಭೇಟಿ ಕೊಡುವ ಪ್ರಮಾಣ ಶೇ.20-25ರಷ್ಟು ಕಡಿಮೆ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ಪ್ರಮಾಣ ಶೇ.40-45ರಷ್ಟು ಕಡಿಮೆ ಎಂದು ಹೇಳಲಾಗಿದೆ.
ವಾಷಿಂಗ್ಟನ್: ಕೊರೊನಾ ವೈರಸ್(Coronavirus)ನ ಹೊಸ ರೂಪಾಂತರ ಒಮಿಕ್ರಾನ್ (Omicron) ಬಗ್ಗೆ ಸದ್ಯ ಹಲವು ವಿಧದ ಅಧ್ಯಯನಗಳು ನಡೆಯುತ್ತಿವೆ. ಬಹುತೇಕ ಅಧ್ಯಯನಗಳು ಹೇಳುವುದೆಂದರೆ, ಒಮಿಕ್ರಾನ್ ತುಂಬ ಮಾರಣಾಂತಿಕವಲ್ಲ, ಆದರೆ ಕೊವಿಡ್ 19 ನ ಹಿಂದಿನ ರೂಪಾಂತರ ಡೆಲ್ಟಾಕ್ಕಿಂತ ಮೂರುಪಟ್ಟು ವೇಗವಾಗಿ ಪ್ರಸರಣಗೊಳ್ಳುತ್ತದೆ ಎಂದು. ಅದಕ್ಕೆ ತಕ್ಕಂತೆ ಒಮಿಕ್ರಾನ್ ಪ್ರಸರಣ ಈಗಾಗಲೇ ಶುರುವಾಗಿದೆ. ಭಾರತದಲ್ಲೂ 230ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ. ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಬಹದು ಎಂಬ ಆತಂಕದ ಮಧ್ಯೆಯೇ ಬ್ರಿಟನ್ನಲ್ಲಿ ಪಬ್ಲಿಶ್ ಆದ ಎರಡು ಅಧ್ಯಯನ ವರದಿಗಳು ಒಂದು ಗುಡ್ನ್ಯೂಸ್ ಕೊಟ್ಟಿವೆ.
ಡೆಲ್ಟಾ ವೈರಾಣುವಿಗೆ ಹೋಲಿಸಿದರೆ ಒಮಿಕ್ರಾನ್ ಸೋಂಕಿಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತೀರ ಕಡಿಮೆ ಎಂದು ಎರಡೂ ಅಧ್ಯಯನಗಳು ಸ್ಪಷ್ಟಪಡಿಸಿವೆ. ಈ ಅಧ್ಯಯನಗಳಲ್ಲಿ ಒಂದು ಸ್ಕಾಟ್ಲೆಂಡ್ನಲ್ಲಿ ನಡೆದಿದ್ದರೆ ಇನ್ನೊಂದು ಇಂಗ್ಲೆಂಡ್ನಲ್ಲಿ ನಡೆದದ್ದು. ಅದರಲ್ಲಿ ಸ್ಕಾಟ್ಲೆಂಡ್ನಲ್ಲಿ ನಡೆದ ಸಂಶೋಧನೆಯ ಸಹ ಸಂಶೋಧಕ ಜಿಮ್ ಮೆಕ್ಮೆನಾಮಿನ್ ಪ್ರತಿಕ್ರಿಯೆ ನೀಡಿ, ಕೊವಿಡ್ 19 ಸೋಂಕಿನೊಂದಿಗೆ ಅದರ ಡೆಲ್ಟಾ ರೂಪಾಂತರ ವೈರಸ್ ತಗುಲಿದಾಗ ಅಪಾಯ ಜಾಸ್ತಿ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಪ್ರಮಾಣವೂ ಹೆಚ್ಚು. ಆದರೆ ಇದಕ್ಕೆ ಹೋಲಿಸಿದರೆ, ಕೊವಿಡ್ 19 ಸೋಂಕಿನೊಂದಿಗೆ ಒಮಿಕ್ರಾನ್ ತಗುಲಿದರೆ ಗಂಭೀರ ಸ್ವರೂಪಕ್ಕೆ ತಿರುಗುವ ಪ್ರಮಾಣ ಕಡಿಮೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವ ದರವೂ ಇದರಲ್ಲಿ ಕಡಿಮೆ ಇದೆ. ಇದನ್ನೊಂದು ಗುಡ್ ನ್ಯೂಸ್ ಎಂದೇ ನಾವು ಪರಿಗಣಿಸುತ್ತೇವೆ ಎಂದು ಜಿಮ್ ಹೇಳಿದ್ದಾರೆ. ಹಾಗೇ, ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್ ಸೋಂಕಿತರು ಆಸ್ಪತ್ರೆಗೆ ಸೇರುವ ಅಪಾಯ ಮೂರನೇ ಎರಡರಷ್ಟು ಕಡಿಮೆ ಮತ್ತು ಕೊವಿಡ್ 19 ಬೂಸ್ಟರ್ ಲಸಿಕೆ ತೆಗೆದುಕೊಳ್ಳುವುದರಿಂದ ಒಮಿಕ್ರಾನ್ ವಿರುದ್ಧ ಹೆಚ್ಚುವರಿ ರಕ್ಷಣೆ ಪಡೆಯಬಹುದು ಎಂಬುದನ್ನು ಅಧ್ಯಯನ ತೋರಿಸಿದ್ದಾಗಿ ಹೇಳಿದ್ದಾರೆ. ಸ್ಕಾಟ್ಲೆಂಡ್ನಲ್ಲಿ ನಡೆದ ಮೊದಲ ಅಧ್ಯಯನ ಸಣ್ಣಪ್ರಮಾಣದಲ್ಲಿ ನಡೆದಿತ್ತು. 60 ವರ್ಷದ ಯಾರೂ ಆಸ್ಪತ್ರೆಗೆ ದಾಖಲಾಗಲಿಲ್ಲ ಎಂದು ಹೇಳಲಾಗಿದೆ.
ಇಂಗ್ಲೆಂಡ್ನಲ್ಲಿ ನಡೆದ ಎರಡನೇ ಅಧ್ಯಯನವೂ ಕೂಡ ಇದನ್ನೇ ತೋರಿಸಿದೆ. ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್ ಸೋಂಕಿತರು ಆಸ್ಪತ್ರೆಗೆ ಭೇಟಿ ಕೊಡುವ ಪ್ರಮಾಣ ಶೇ.20-25ರಷ್ಟು ಕಡಿಮೆ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವ ಪ್ರಮಾಣ ಶೇ.40-45ರಷ್ಟು ಕಡಿಮೆ ಎಂದು ಹೇಳಲಾಗಿದೆ. ಆದರೆ ಎಷ್ಟೇ ಅಧ್ಯಯನಗಳು ಇದು ಮಾರಣಾಂತಿಕವಲ್ಲ ಎಂದು ಹೇಳುತ್ತಿದ್ದರೂ, ಎಚ್ಚರಿಕೆಯಿಂದ ಇರಬೇಕು, ಹರಡುವಿಕೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ.
ಇದನ್ನೂ ಓದಿ: ಒಮಿಕ್ರಾನ್ ಕೊರೊನಾವೈರಸ್ನ ಅಂತಿಮ ಅಲೆಯೇ? ಏನಂತಾರೆ ತಜ್ಞರು?
Published On - 12:06 pm, Thu, 23 December 21