Annamalai: ನಾನು ರೇಸ್ನಲ್ಲಿಲ್ಲ; ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆಗೆ ನಿರ್ಧಾರ
ಕಳೆದ ಕೆಲವು ದಿನಗಳಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಅವಧಿ ಮುಗಿದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಅವರ ಬದಲಿಯಾಗಿ ನೈನಾರ್ ನಾಗೇಂದ್ರನ್ ಅವರನ್ನು ಘೋಷಿಸಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಈ ಮಾಹಿತಿಯನ್ನು ಇನ್ನೂ ಬಿಜೆಪಿ ದೃಢೀಕರಿಸಿಲ್ಲ. ಇಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೊಯಮತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ತಾವು ಮುಂದಿನ ಅಧ್ಯಕ್ಷ ಸ್ಥಾನದ ರೇಸ್ನಲ್ಲಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು.

ಚೆನ್ನೈ, ಏಪ್ರಿಲ್, 4: ಮುಂಬರುವ 2026ರ ವಿಧಾನಸಭಾ ಚುನಾವಣೆಗೆ ಮುನ್ನ ತಮಿಳುನಾಡು ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ (Tamil Nadu BJP President) ಸ್ಥಾನದಿಂದ ಕೆ. ಅಣ್ಣಾಮಲೈ (K Annamalai) ಕೆಳಗಿಳಿಯಲು ನಿರ್ಧರಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಅವಧಿ ಮುಗಿದಿದ್ದು, ಶೀಘ್ರದಲ್ಲೇ ಹೊಸ ನಾಯಕನನ್ನು ಆಯ್ಕೆ ಮಾಡಲಾಗುವುದು ಮತ್ತು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಅವರ ಬದಲಿಯಾಗಿ ನೈನಾರ್ ನಾಗೇಂದ್ರನ್ ಅವರನ್ನು ಘೋಷಿಸಲಾಗುವುದು ಎಂದು ಹೇಳಲಾಗುತ್ತಿದೆ.ಇಂದು ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ತಮಿಳುನಾಡು ಬಿಜೆಪಿಯಲ್ಲಿ ಯಾವುದೇ ಸ್ಪರ್ಧೆ ಇಲ್ಲ. ನಾವು ಸರ್ವಾನುಮತದಿಂದ ನಾಯಕನನ್ನು ಆಯ್ಕೆ ಮಾಡ್ತೇವೆ. ರಾಜ್ಯ ಬಿಜೆಪಿ ನಾಯಕತ್ವದ ರೇಸ್‌ನಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ.
“ನಾನು ದೆಹಲಿಗೆ ಹೋಗಿ ಹೊಸ ನಾಯಕನನ್ನು ನೇಮಿಸಿದ್ದೇನೆ ಎಂದು ಕೆಲವರು ಹೇಳುತ್ತಾರೆ. ನಾನು ಅಂತಹ ವಿಷಯದಲ್ಲಿ ತೊಡಗುವುದಿಲ್ಲ. ನಾನು ಸ್ಪರ್ಧೆಯಲ್ಲಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ ಬಿಜೆಪಿ ಪಕ್ಷ ಒಳ್ಳೆಯದಾಗಿರಬೇಕು. ಬಿಜೆಪಿ ಒಳ್ಳೆಯ ಜನರು ಬರಬಹುದಾದ ಪಕ್ಷ. ಈ ಪಕ್ಷವನ್ನು ಬೆಳೆಸಲು ಅನೇಕ ಜನರು ತಮ್ಮ ಪ್ರಾಣವನ್ನೇ ನೀಡಿದ್ದಾರೆ. ಹೊಸ ನಾಯಕರು ಆಯ್ಕೆಯಾದಾಗ ನಾವು ಈ ಬಗ್ಗೆ ಮಾತನಾಡುತ್ತೇವೆ” ಎಂದು ಅಣ್ಣಾಮಲೈ ಹೇಳಿದರು.
ಇದನ್ನೂ ಓದಿ: ತಮಿಳುನಾಡಲ್ಲಿ ಮದ್ಯ ಹಗರಣದ ವಿರುದ್ಧ ಪ್ರತಿಭಟನೆಗೂ ಮುನ್ನ ಅಣ್ಣಾಮಲೈ, ಇತರ ಬಿಜೆಪಿ ನಾಯಕರ ಬಂಧನ
ಅಣ್ಣಾಮಲೈ ರಾಜೀನಾಮೆ ನೀಡಲು ಕಾರಣವೇನು?:
ಅಣ್ಣಾಮಲೈ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಕಾರಣ 2026ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಎಐಎಡಿಎಂಕೆ ನಡುವಿನ ಮೈತ್ರಿಯ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳಿಗೆ ಸಂಬಂಧಿಸಿದೆ. ಇತ್ತೀಚೆಗೆ, ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತೊಮ್ಮೆ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವ ವದಂತಿಗಳಿಗೆ ನಾಂದಿ ಹಾಡಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಎನ್‌ಡಿಎ ಜೊತೆ ಮೈತ್ರಿಕೂಟದಲ್ಲಿ ಸ್ಪರ್ಧಿಸಿತ್ತು. ಇದರ ಪರಿಣಾಮವಾಗಿ ಬಿಜೆಪಿ 4 ಸ್ಥಾನಗಳನ್ನು ಗೆದ್ದಿತು.
Coimbatore, Tamil Nadu: State BJP chief K Annamalai says, “There is no contest in Tamil Nadu BJP, we will select a leader unanimously. But I am not in the race. I am not in the BJP state leadership race.” pic.twitter.com/7OjdbOoTWR
— ANI (@ANI) April 4, 2025
ಆದರೆ, 2024ರ ಲೋಕಸಭಾ ಚುನಾವಣೆಗೆ ಮುನ್ನ, ಅಣ್ಣಾಮಲೈ ತಮ್ಮ ಪಕ್ಷದ ನಾಯಕರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಎಐಎಡಿಎಂಕೆ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿತು. ಇದರ ಪರಿಣಾಮವಾಗಿ, 2024ರ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಯಿತು. ಆದರೆ ಎಐಎಡಿಎಂಕೆ ಕೂಡ ಕಳಪೆ ಫಲಿತಾಂಶವನ್ನು ಎದುರಿಸಿತು. 2026ರ ಚುನಾವಣೆಗಳು ಸಮೀಪಿಸುತ್ತಿದ್ದಂತೆ ತಮಿಳುನಾಡು ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಯುಪಿಎಯನ್ನು ಸೋಲಿಸಲು ಬಲವಾದ ಮೈತ್ರಿಕೂಟದ ಅವಶ್ಯಕತೆಯಿರುವುದರಿಂದ ಈ ಎರಡು ಪಕ್ಷಗಳು ಮತ್ತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಎಐಎಡಿಎಂಕೆ ನಾಯಕರಿಂದ ಮೈತ್ರಿ ಬಗ್ಗೆ ಅಮಿತ್ ಶಾ ಭೇಟಿ; ಮಾತಿನ ವರಸೆಯನ್ನೇ ಬದಲಿಸಿದ ಅಣ್ಣಾಮಲೈ
ಮೂಲಗಳ ಪ್ರಕಾರ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಅಣ್ಣಾಮಲೈ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿಕೊಂಡು ಮೈತ್ರಿಕೂಟ ಮುಂದುವರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನು ಪರಿಗಣಿಸಿದ ಬಿಜೆಪಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೈಬಿಡುವ ನಿರ್ಧಾರವನ್ನು ತೆಗೆದುಕೊಂಡಿತು. ಪಳನಿಸ್ವಾಮಿ ಮತ್ತು ಅಮಿತ್ ಶಾ ನಡುವಿನ ಸಭೆಯ ನಂತರ, ಅಣ್ಣಾಮಲೈ ಕೂಡ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದರು. ಈ ಸಮಯದಲ್ಲಿ ಅಣ್ಣಾಮಲೈ ಅವರಿಗೆ ರಾಜೀನಾಮೆ ನೀಡಲು ಸೂಚಿಸಲಾಯಿತು ಎನ್ನಲಾಗಿದೆ.
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ತಮಿಳುನಾಡಿನಲ್ಲಿ ಭ್ರಷ್ಟ ಡಿಎಂಕೆ ಸರ್ಕಾರವನ್ನು ಸೋಲಿಸಲು ಬಿಜೆಪಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅಣ್ಣಾಮಲೈ ಇಂದು ಪುನರುಚ್ಚರಿಸಿದರು. ಪಳನಿಸ್ವಾಮಿ ಮತ್ತು ಅಣ್ಣಾಮಲೈ ಇಬ್ಬರೂ ಗೌಂಡರ್ ಜಾತಿಗೆ ಸೇರಿದವರು, ಪಶ್ಚಿಮ ತಮಿಳುನಾಡಿನ ಒಂದೇ ಪ್ರದೇಶದವರು ಎಂಬುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ. ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆಗೆ ಇದು ಕೂಡ ಒಂದು ಕಾರಣವಾಗಿರಬಹುದು. ಬೇರೆ ಜಾತಿಯ ನಾಯಕನನ್ನು ನೇಮಿಸುವುದರಿಂದ ಚುನಾವಣೆಯಲ್ಲಿ ಅವರಿಗೆ ಅನುಕೂಲವಾಗಬಹುದು ಎಂದು ಬಿಜೆಪಿ ಭಾವಿಸಿರಬಹುದು. ಪ್ರಸ್ತುತ, ಬಿಜೆಪಿ ಅಧ್ಯಕ್ಷ ಹುದ್ದೆಗೆ ತೇವರ್ ಜಾತಿಯ ನಾಯನಾರ್ ನಾಗೇಂದ್ರನ್, ದಲಿತ ನಾಯಕ ಮತ್ತು ಕೇಂದ್ರ ಸಚಿವ ಎಲ್. ಮುರುಗನ್ ಮತ್ತು ನಾದರ್ ಜಾತಿಯ ತಮಿಳಿಸೈ ಸೌಂದರರಾಜನ್ ಸೇರಿದಂತೆ ಹಲವಾರು ಹೆಸರುಗಳು ಕೇಳಿಬರುತ್ತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Fri, 4 April 25