
ಮುಂಬೈ, ಜುಲೈ 7: 26/11 ಮಹಾರಾಷ್ಟ್ರದಲ್ಲಿ ಹಿಂದಿ-ಮರಾಠಿ ಭಾಷಾ ಚರ್ಚೆ ಹೆಚ್ಚುತ್ತಿರುವ ನಡುವೆ ಮುಂಬೈ ದಾಳಿಯ (Mumbai Attack) ಸಮಯದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ ಮಾಜಿ ಮಾರ್ಕೋಸ್ ಕಮಾಂಡೋ ಪ್ರವೀಣ್ ಕುಮಾರ್ ಟಿಯೋಟಿಯಾ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. 26/11 ದಾಳಿಯಲ್ಲಿ ತಾಜ್ ಹೋಟೆಲ್ ಸ್ಥಳಾಂತರಿಸುವ ಸಮಯದಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ ಪ್ರವೀಣ್ ಟಿಯೋಟಿಯಾ ಆ ಕಾರ್ಯಾಚರಣೆಯಲ್ಲಿ 4 ಗುಂಡುಗಳು ತಗುಲಿ ಗಾಯಗೊಂಡಿದ್ದರು.
ಉತ್ತರ ಪ್ರದೇಶ ಮೂಲದ ಪ್ರಶಸ್ತಿ ವಿಜೇತ ಯೋಧ ಪ್ರವೀಣ್ ತಾಜ್ ಹೋಟೆಲ್ ಮೇಲಿನ ದಾಳಿಯ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಜನರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ರಾಜ್ ಠಾಕ್ರೆ ಅವರ ವಾಕ್ಚಾತುರ್ಯವನ್ನು ಪ್ರಶ್ನಿಸಿದರು. “ನಾನು 26/11ರಂದು ಮುಂಬೈಯನ್ನು ಉಳಿಸಿದೆ. ನಾನು ಉತ್ತರ ಪ್ರದೇಶದವನಾದರೂ ಮಹಾರಾಷ್ಟ್ರಕ್ಕಾಗಿ ರಕ್ತ ಹರಿಸಿದ್ದೇನೆ. ನಾನು ತಾಜ್ ಹೋಟೆಲ್ ಅನ್ನು ಉಳಿಸಿದೆ. ರಾಜ್ ಠಾಕ್ರೆ ಅವರ ಯೋಧರು ಎಂದು ಕರೆಯಲ್ಪಡುವವರು ಆಗ ಎಲ್ಲಿದ್ದರು? ವಿನಾಕಾರಣ ಪ್ರಚೋದನಾತ್ಮಕ ಹೇಳಿಕೆ ನೀಡಿ ರಾಷ್ಟ್ರವನ್ನು ವಿಭಜಿಸಬೇಡಿ. ನಗುವಿಗೆ ಯಾವುದೇ ಭಾಷೆಯ ಅಗತ್ಯವಿಲ್ಲ.” ಎಂದು ಅವರು ರಾಜ್ ಠಾಕ್ರೆಗೆ ತರಾಟೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಮೋದಿ ಬಳಿ ಉದ್ಧವ್ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮೈತ್ರಿ ಬಯಸಿದ್ದರು; ಏಕನಾಥ್ ಶಿಂಧೆ ಶಾಕಿಂಗ್ ಹೇಳಿಕೆ
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ ಠಾಕ್ರೆ ಮಹಾರಾಷ್ಟ್ರದಲ್ಲಿ ಮರಾಠಿಯನ್ನು ಜಾರಿಗೊಳಿಸುವ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಪ್ರವೀಣ್ ಈ ಹೇಳಿಕೆಗಳನ್ನು ನೀಡಿದ್ದಾರೆ. “ಗುಜರಾತಿಯಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ, ಅವರು ಮರಾಠಿ ತಿಳಿದಿರಬೇಕು. ಆದರೆ ಅದಕ್ಕಾಗಿ ಜನರನ್ನು ಹೊಡೆಯುವ ಅಗತ್ಯವಿಲ್ಲ. ಆದರೂ, ಯಾರಾದರೂ ನಾಟಕ ಮಾಡಿದರೆ ನೀವು ಅವರ ಕಿವಿಯ ಕೆಳಗೆ ಹೊಡೆಯಬೇಕು. ನೀವು ಯಾರನ್ನಾದ್ರೂ ಹೊಡೆದರೆ ಅದರ ವಿಡಿಯೋ ಮಾಡಬೇಡಿ” ಎಂದು ರಾಜ್ ಠಾಕ್ರೆ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
#WATCH | Delhi: On the Marathi language row, ex-Marine Commando Praveen Kumar Teotia, who led the team during the counter-terrorist operations after the 26/11 attack at Mumbai’s Taj Hotel, says, “When the 26/11 terrorist attack happened, their (MNS) so-called warriors hid and… pic.twitter.com/PYwA5Zt9IB
— ANI (@ANI) July 6, 2025
ಉದ್ಧವ್ ಠಾಕ್ರೆ ಕೂಡ ರಾಜ್ ಠಾಕ್ರೆಯ ನಿಲುವನ್ನು ಸಮರ್ಥಿಸಿಕೊಂಡಿದ್ದರು. “ಹೌದು, ನಾವು ಗೂಂಡಾಗಳು. ನ್ಯಾಯ ಪಡೆಯಲು ನಾವು ಗೂಂಡಾಗಿರಿ ಮಾಡಬೇಕಾದರೆ, ನಾವು ಗೂಂಡಾಗಿರಿ ಮಾಡುತ್ತೇವೆ” ಎಂದು ಉದ್ಧವ್ ಠಾಕ್ರೆ ಘೋಷಿಸಿದ್ದರು.
ಇದನ್ನೂ ಓದಿ: ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ‘ಮಹಾ’ ಸಂಗಮ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ
ಈ ಹಿನ್ನೆಲೆಯಲ್ಲಿ ANI ಜೊತೆ ಮಾತನಾಡಿದ ಪ್ರವೀಣ್ ಟಿಯೋಟಿಯಾ, “26/11 ದಾಳಿಯ ಸಮಯದಲ್ಲಿ ಸೇನಾ ಸಿಬ್ಬಂದಿ ಸೇರಿದಂತೆ ತಮ್ಮ ಜೀವಗಳನ್ನು ಪಣಕ್ಕಿಟ್ಟ ಅನೇಕರು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಉತ್ತರ ಭಾರತದ ರಾಜ್ಯಗಳಿಂದ ಬಂದವರು. 26/11 ಭಯೋತ್ಪಾದಕ ದಾಳಿ ನಡೆದಾಗ ಎಂಎನ್‌ಎಸ್ ಯೋಧರು ಎಂದು ಕರೆಯಲ್ಪಡುವವರು ಅಡಗಿಕೊಂಡಿದ್ದರು. ಅವರು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ, ಅವರ ಕುಟುಂಬದವರು ಎಲ್ಲೂ ಸಹ ಪತ್ತೆಯಾಗಲಿಲ್ಲ. ಆಗ ಅವರೆಲ್ಲ ಎಲ್ಲಿ ಹೋಗಿದ್ದರು? ಮಹಾರಾಷ್ಟ್ರವನ್ನು ಉಳಿಸಿಕೊಳ್ಳಲು ಹೋರಾಡಬೇಕಿತ್ತು” ಎಂದು ಅವರು ಹೇಳಿದ್ದಾರೆ.
“ನಾನು ಭಾಷಾ ಪ್ರೇಮಿಯೂ ಅಲ್ಲ, ವಿರೋಧಿಯೂ ಅಲ್ಲ. ಆದರೆ, ಭಾಷೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಮರಾಠಿ ಮತ್ತು ಮರಾಠಾ ಯೋಧರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ, ಭಾಷೆಯ ಹೆಸರಲ್ಲಿ ನಮ್ಮನ್ನು ವಿಭಜಿಸಲು ಬಿಡಬೇಡಿ. ಭಾಷೆ ರಾಜಕೀಯದ ಭಾಗವಾಗಿರಬಾರದು” ಎಂದು ಪ್ರವೀಣ್ ಮನವಿ ಮಾಡಿದ್ದಾರೆ. ನಿರುದ್ಯೋಗ, ಬಡತನ, ಅಭಿವೃದ್ಧಿ, ಉತ್ಪಾದನೆ, ಕೃಷಿ, ಶಿಕ್ಷಣ, ಆರೋಗ್ಯ, ಅತ್ಯಾಚಾರ, ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳು ಮತ್ತು ಭಯೋತ್ಪಾದನೆ ಗಮನಹರಿಸಬೇಕಾದ ದೇಶದ ದೊಡ್ಡ ಸಮಸ್ಯೆಗಳಾಗಿವೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ