‘ಪೊಲೀಸರನ್ನು ನಂಬಿದ್ದೆ, ಕಾಲ್ತುಳಿತದ ತಪ್ಪನ್ನೆಲ್ಲ ನನ್ನ ಮೇಲೆ ಹೊರಿಸಿಬಿಟ್ಟರು’; ಕರೂರ್​​ನಲ್ಲಿ ಸಿಎಂ ವಿಜಯ್ ಬೇಸರ

ಕಾಲಿವುಡ್ ನಟ ಮತ್ತು ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ವಿಜಯ್ ಸಿಎಂ ಆದ ಬಳಿಕ ಮೊದಲ ಬಾರಿಗೆ ಕರೂರ್ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಇತ್ತೀಚೆಗೆ ನಡೆದ ಭೀಕರ ಕಾಲ್ತುಳಿತ ದುರಂತದ ಕುರಿತು ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ ವಿರುದ್ಧ ಮತ್ತು ಸ್ಥಳೀಯ ಪೊಲೀಸರ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕರೂರ್ ಜಿಲ್ಲೆಯಲ್ಲಿ ಸಿಎಂ ವಿಜಯ್ ಮಾಡಿರುವ ಭಾಷಣದ ಹೈಲೈಟ್ಸ್ ಇಲ್ಲಿದೆ.

ಪೊಲೀಸರನ್ನು ನಂಬಿದ್ದೆ, ಕಾಲ್ತುಳಿತದ ತಪ್ಪನ್ನೆಲ್ಲ ನನ್ನ ಮೇಲೆ ಹೊರಿಸಿಬಿಟ್ಟರು; ಕರೂರ್​​ನಲ್ಲಿ ಸಿಎಂ ವಿಜಯ್ ಬೇಸರ
Cm Vijay
Image Credit source: PTI

Updated on: Jul 10, 2026 | 5:09 PM

ಮುಖ್ಯಾಂಶಗಳು

  • ಕರೂರ್ ಕಾಲ್ತುಳಿತದ ಬಗ್ಗೆ ಸಿಎಂ ವಿಜಯ್ ಮಾತು
  • ಸಿಎಂ ಆದ ಬಳಿಕ ಮೊದಲ ಬಾರಿ ಕರೂರಿಗೆ ವಿಜಯ್ ಭೇಟಿ
  • ಡಿಎಂಕೆ ವಿರುದ್ಧ ಸಿಎಂ ವಾಗ್ದಾಳಿ

ಕರೂರ್, ಜುಲೈ 10: ತಮಿಳುನಾಡಿನ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಪ್ರಚಾರದ ವೇಳೆ ಕರೂರ್​​ನಲ್ಲಿ (Karur Stampede) ಸಿಎಂ ವಿಜಯ್ ಭಾಷಣ ಮಾಡುವಾಗ ಕಾಲ್ತುಳಿತ ಉಂಟಾಗಿ ಸಾಕಷ್ಟು ಜನರು ಮೃತಪಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಘಟನೆ ವಿಜಯ್ (CM Vijay) ರಾಜಕೀಯ ಜೀವನಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಭರ್ಜರಿ ಗೆಲುವು ಸಾಧಿಸಿತ್ತು. ಕರೂರ್​​ನಲ್ಲೂ ವಿಜಯ್ ಅವರ ಪಕ್ಷದ ಅಭ್ಯರ್ಥಿಗಳು ಭಾರೀ ಬಹುಮತ ಪಡೆದಿದ್ದರು. ಇದೀಗ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರೂರ್​​ಗೆ ಭೇಟಿ ನೀಡಿರುವ ಸಿಎಂ ವಿಜಯ್ ಕಾಲ್ತುಳಿತದ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಯಾವ ರೀತಿ ವಿಜಯ್ ಮೇಲೆ ತಪ್ಪು ಹೊರಿಸಿದರು, ಡಿಎಂಕೆ ಯಾವ ರೀತಿ ಇದರ ಲಾಭ ಪಡೆಯಲು ಪ್ರಯತ್ನಿಸಿತು ಎಂಬೆಲ್ಲ ವಿಚಾರಗಳ ಬಗ್ಗೆ ಸಿಎಂ ವಿಜಯ್ ಮಾತನಾಡಿದ್ದಾರೆ.

ಪೊಲೀಸರು ಮುನ್ನೆಚ್ಚರಿಕೆ ನೀಡಬಹುದಿತ್ತು:

41 ಜನರ ಸಾವಿಗೆ ಕಾರಣವಾಗಿದ್ದ 2025ರ ಕರೂರ್‌ ಕಾಲ್ತುಳಿತ ದುರಂತದ ಕುರಿತು ವಿಷಾದ ವ್ಯಕ್ತಪಡಿಸಿದ ಮುಖ್ಯಮಂತ್ರಿ ವಿಜಯ್, “ನಾನು ಪೊಲೀಸರನ್ನು ಸಂಪೂರ್ಣವಾಗಿ ನಂಬಿದ್ದೆ. ಆದರೆ ದುರದೃಷ್ಟವಶಾತ್, ಅವರ ವೈಫಲ್ಯವನ್ನು ಮುಚ್ಚಿಕೊಳ್ಳಲು ಅವರು ಕಾಲ್ತುಳಿತಕ್ಕೆ ನನ್ನನ್ನೇ ಹೊಣೆಗಾರರನ್ನಾಗಿ ಮಾಡಲು ನೋಡಿದರು. ಅಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರುತ್ತಿದ್ದಾರೆ ಮತ್ತು ಪರಿಸ್ಥಿತಿ ಕೈಮೀರುತ್ತಿದೆ ಎಂಬ ಸಣ್ಣ ಸುಳಿವು ಸಿಕ್ಕಿದಾಗ ಪೊಲೀಸರು ನಮಗೆ ಅಥವಾ ನಮ್ಮ ತಂಡಕ್ಕೆ ಮುನ್ನೆಚ್ಚರಿಕೆ ನೀಡಬಹುದಿತ್ತು. ಆದರೆ, ಪೊಲೀಸರು ನಮಗೇನೂ ಹೇಳಲಿಲ್ಲ. ಅವರೇ ನಮ್ಮನ್ನು ಹೈವೇವರೆಗೂ ಕರೆದುಕೊಂಡು ಬಂದರು. ಇದೆಲ್ಲ ಯಾರ ಸೂಚನೆಯ ಮೇರೆಗೆ ನಡೆಯಿತು ಎಂದು ನನಗೆ ಗೊತ್ತಿಲ್ಲ. ಮುಂಚಿತವಾಗಿ ಅಲರ್ಟ್ ಮಾಡಿದ್ದರೆ ನಾವು ಕಾರ್ಯಕ್ರಮದ ಸ್ವರೂಪವನ್ನು ಬದಲಾಯಿಸುತ್ತಿದ್ದೆವು ಅಥವಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೆವು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಕಾವೇರಿ ಜಲ ವಿವಾದ: ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು


ಡಿಎಂಕೆ ವಿರುದ್ಧ ವಾಗ್ದಾಳಿ:

ಕರೂರ್ ಕಾಲ್ತುಳಿತ ಪ್ರಕರಣವನ್ನು ಮುಂದಿಟ್ಟುಕೊಂಡು ಟಿವಿಕೆ ವಿರುದ್ಧ ಮುಗಿಬಿದ್ದ ಡಿಎಂಕೆ ನಾಯಕರನ್ನು ಮುಖ್ಯಮಂತ್ರಿ ವಿಜಯ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಜನರ ಜೀವ ಹೋದ ಇಂತಹ ಅತ್ಯಂತ ನೋವಿನ ದುರಂತದಲ್ಲೂ ಡಿಎಂಕೆ ರಾಜಕೀಯ ಲಾಭವನ್ನು ಹುಡುಕಲು ಹೊರಟಿತು. ಜನರ ಕಣ್ಣೀರನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿದ್ದು ಅತ್ಯಂತ ಖಂಡನೀಯ. ಡಿಎಂಕೆ ನಾನು ಈ ಜಿಲ್ಲೆಗೆ ಬಾರದಂತೆ ನನ್ನನ್ನು ತಡೆಯಿತು” ಎಂದು ಬೇಸರ ಹೊರಹಾಕಿದ್ದಾರೆ.


ಇದನ್ನೂ ಓದಿ: ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ವಿಜಯ್ ಮುಖ್ಯಮಂತ್ರಿಯಾದ ನಂತರ ಕರೂರ್‌ಗೆ ನೀಡಿದ ಮೊದಲ ಅಧಿಕೃತ ಭೇಟಿ ಇದಾಗಿದ್ದು, ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಮತ್ತು ಮೃತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯಾದ್ಯಂತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು ಮತ್ತು ಈ ಘಟನೆಯ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us