ಚುಂಚುರಾ: ಪಶ್ಚಿಮ ಬಂಗಾಳದಲ್ಲಿ ನಾಳೆ ಮೂರನೇ ಹಂತದ ಮತದಾನ ನಡೆಯಲಿದೆ. ಬಿಜೆಪಿಯಂತೂ ಈ ಬಾರಿ ಪಶ್ಚಿಮ ಬಂಗಾಳವನ್ನು ಹೇಗಾದರೂ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಶತಾಯಗತಾಯ ಪ್ರಯತ್ನದಲ್ಲಿದೆ. ಹಾಗಾಗಿ, ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿ ಹಲವು ಅಲ್ಲಿ ಪದೇಪದೆ ಪ್ರಚಾರ ನಡೆಸುತ್ತಿದ್ದಾರೆ. ಹಾಗೇ ಎರಡು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಹೂಗ್ಲಿ ಜಿಲ್ಲೆಯ ತಾರಕೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು.
ಇನ್ನೊಂದೆಡೆ ಮಮತಾ ಬ್ಯಾನರ್ಜಿ ಈ ಬಾರಿಯೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿದು ಹ್ಯಾಟ್ರಿಕ್ ಬಾರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಗುಜರಾತಿಗಳು ಪಶ್ಚಿಮ ಬಂಗಾಳವನ್ನು ಆಳಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಖಡಕ್ ಆಗಿ ಹೇಳಿಬಿಟ್ಟಿದ್ದಾರೆ. ಈ ಬಾರಿ ನಂದಿಗ್ರಾಮದಿಂದ ಸ್ಪರ್ಧೆಗೆ ಇಳಿದಿರುವ ಮಮತಾ ಬ್ಯಾನರ್ಜಿ ಮಾರ್ಚ್ 10ರಂದು ಅಲ್ಲಿ ಪ್ರಚಾರ ನಡೆಸುತ್ತಿರುವ ವೇಳೆ ಬಿದ್ದು ಕಾಲಿಗೆ ಗಾಯಮಾಡಿಕೊಂಡಿದ್ದರು. ತಮ್ಮ ಮೇಲೆ ಹಲ್ಲೆಯಾಗಿದೆ ಎಂದೂ ಪ್ರತಿಪಾದಿಸಿದ್ದರು. ಕಾಲು ಗಾಯಗೊಂಡ ಪರಿಣಾಮ ಅವರು ಗಾಲಿಖುರ್ಚಿಯಲ್ಲೇ ಕುಳಿತು ರೋಡ್ ಶೋ ನಡೆಸುತ್ತಿದ್ದಾರೆ.
ಇದೀಗ ಮಮತಾ ಬ್ಯಾನರ್ಜಿ ಮತ್ತೊಮ್ಮೆ ನರೇಂದ್ರ ಮೋದಿ, ಅಮಿತ್ ಶಾ ಸೇರಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ನಾನು ಒಂದೇ ಕಾಲಿನಲ್ಲಿ ಪಶ್ಚಿಮ ಬಂಗಾಳವನ್ನು ಗೆಲ್ಲುತ್ತೇನೆ. ನಂತರ ದೆಹಲಿಯಲ್ಲಿ ಎರಡೂ ಕಾಲಿಟ್ಟು ಜಯಸಾಧಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರು ತನ್ನನ್ನು ‘ದೀದಿ..ಓ ದೀದಿ’ ಎಂದು ಹಲವು ಬಾರಿ ವ್ಯಂಗ್ಯಮಾಡಿದ್ದಾರೆ. ಹೂಗ್ಲಿಯ ಪ್ರಚಾರದ ವೇಳೆ ಸಹ.. ಹೀಗೇ ಕರೆದು ನಿಂದಿಸಿದರು. ಆದರೆ ನಾನು ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಮೋದಿ ಭಾಷಣದ ವೇಳೆ ಮಮತಾ ಬ್ಯಾನರ್ಜಿಯವರನ್ನು ವ್ಯಂಗ್ಯವಾಗಿ ಕರೆಯುತ್ತಾರೆ. ದೀದಿ.. ಓ ದೀದಿ ಎಂದು ಅಣುಕಿಸುವ ಧ್ವನಿಯಲ್ಲಿ ಕರೆಯುತ್ತಾರೆ. ಇದು ಮಹಿಳಾ ನಿಂದನೆ. ಮಹಿಳೆಯ ರಕ್ಷಣಾ ಕಾನೂನಿನ ಉಲ್ಲಂಘನೆ ಎಂದು ಟಿಎಂಸಿಯ ಕೆಲವು ಮಹಿಳಾ ನಾಯಕಿಯರು ಪ್ರತಿಪಾದಿಸಿದ್ದಾರೆ.