ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಾಣುತ್ತಿರುವ ಆರ್ಎಸ್ಎಸ್, ವಿಶ್ವ ಹಿಂದು ಪರಿಷತ್, ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಮಿತ್ ಶಾರಿಗೆ ದೊಡ್ಡ ನಿರಾಸೆಯಾಗಲಿದೆ. ಅವರ ಕನಸು ಎಂದಿಗೂ ನನಸಾಗುವುದಿಲ್ಲ. ನಾನು ಬದುಕಿ ಇರುವವರೆಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ರೂಪಿಸಲು ಬಿಡುವುದಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ ನಾಯಕ ರಶೆದ್ ಖಾನ್ ತಿಳಿಸಿದ್ದಾರೆ. ಅಲ್ಲದೆ, ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಮುಸ್ಲಿಮರಿಗೆ ಬೆಂಬಲ ನೀಡುತ್ತಿದೆ. ಕಾಂಗ್ರೆಸ್ ತಾರತಮ್ಯ ಮಾಡದೆ ಎಲ್ಲ ಪಕ್ಷದವರನ್ನೂ ಒಂದೇ ರೀತಿ ಕಾಣುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಸ್ಲಾಂ ತೊರೆದು ಹಿಂದು ಧರ್ಮಕ್ಕೆ ಸೇರ್ಪಡೆಯಾಗಿ, ಅವರ ಹೆಸರನ್ನು ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಎಂದು ಬದಲಿಸಿಕೊಂಡಿದ್ದಾರೆ. ಅವರು ಸನಾತನ ಧರ್ಮ ಒಪ್ಪಿಕೊಳ್ಳಲು ಮುಖ್ಯ ಕಾರಣ, ಆ ಧರ್ಮದಲ್ಲಿ ಅವರು ಸೃಷ್ಟಿಸಿಕೊಂಡಿದ್ದ ವಿವಾದ ಮತ್ತು ನಿರಂತರವಾಗಿ ಬರುತ್ತಿದ್ದ ಬೆದರಿಕೆ ಕರೆಗಳು. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ನಲ್ಲಿರುವ ಕೆಲವು ಆಯ್ದ ಭಾಗಗಳು ಹಿಂಸಾಚಾರವನ್ನು ಬೋಧಿಸುತ್ತವೆ. ಹಾಗಾಗಿ ಅವುಗಳನ್ನು ತೆಗೆದುಹಾಕಬೇಕು ಎಂದು ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹಾಗಂತ ಸುಪ್ರೀಂಕೋರ್ಟ್ ಅವರ ಅರ್ಜಿಯನ್ನು ಮಾನ್ಯ ಮಾಡಿರಲಿಲ್ಲ. ಅದನ್ನು ತಿರಸ್ಕರಿಸಿತ್ತು. ಅಷ್ಟೇ ಅಲ್ಲದೆ, ಮೊಹಮ್ಮದ್ ಎನ್ನುವ ಒಂದು ಪುಸ್ತಕ ಬಿಡುಗಡೆ ಮಾಡಿದ್ದರು. ಅದರಲ್ಲಿ ಪ್ರವಾದಿ ಮೊಹಮ್ಮದರ ವಿರುದ್ಧ ಆಕ್ಷೇಪಣೀಯ ಭಾಷೆ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡ ರಿಜ್ವಿ ವಿರುದ್ಧ ಹೈದರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಗೇ, ರಿಜ್ವಿಯ ಈ ನಡವಳಿಕೆ ಹಿಂದೆ ಇಸ್ಲಾಂ ವಿರೋಧಿ ಶಕ್ತಿಗಳಿವೆ ಎಂದೂ ಆರೋಪ ಮಾಡಿದ್ದರು. ಜೀವ ಬೆದರಿಕೆ ಇನ್ನಷ್ಟು ಜಾಸ್ತಿಯಾಗಿತ್ತು. ಈ ವೇಳೆ ಈ ರಶೆದ್ ಖಾನ್ ಕೂಡ ಜಿತೇಂದ್ರ ಅವರ ವಿರುದ್ಧ ತಿರುಗಿಬಿದ್ದಿದ್ದರು. ರಿಜ್ವಿ ಹಿಂದೂ ಧರ್ಮಕ್ಕೆ ಸೇರುವ ಮೂಲಕ ಇಸ್ಲಾಂಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಅವರ ತಲೆಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.