ಐಎಎಫ್ನ 30 ವಾಯುನೆಲೆಗಳಿಗೆ ಆಧುನಿಕ ಸ್ಪರ್ಶ; ಆಧುನೀಕರಣಗೊಳ್ಳಲಿವೆ ಇನ್ನೂ 37 ನೆಲೆಗಳು
ವಾಯುನೆಲೆಗಳ ಮೂಲಸೌಕರ್ಯ, ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಆ ಮೂಲಕ ಪ್ರತಿಕೂಲ ಹವಾಮಾನ ಸ್ಥಿತಿಯಲ್ಲಿಯೂ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ನವದೆಹಲಿ: ಭಾರತೀಯ ವಾಯುಪಡೆಯ (IAF) 30 ವಾಯುನೆಲೆಗಳನ್ನು ಆಧುನೀಕರಣಗೊಳಿಸಲಾಗಿದೆ. ಇನ್ನೂ 37 ವಾಯುನೆಲೆಗಳನ್ನು ಆಧುನೀಕರಣಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ (Lok Sabha) ಲಿಖಿತ ಉತ್ತರ ನೀಡಿದ ರಕ್ಷಣಾ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಭಟ್, ಎರಡು ಹಂತಗಳಲ್ಲಿ ರಕ್ಷಣಾ ವಾಯುನೆಲೆಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಾಯುನೆಲೆಗಳ ಮೂಲಸೌಕರ್ಯ, ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಆ ಮೂಲಕ ಪ್ರತಿಕೂಲ ಹವಾಮಾನ ಸ್ಥಿತಿಯಲ್ಲಿಯೂ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಕೂಲ ಹವಾಮಾನ, ರಾತ್ರಿ ಕಾರ್ಯಾಚರಣೆ ಬಲ ವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ವಾಯುನೆಲೆ ಮೂಲಸೌಕರ್ಯ ಆಧುನೀಕರಣಕ್ಕಾಗಿ ಎರಡು ಒಪ್ಪಂದಗಳಿಗೆ ರಕ್ಷಣಾ ಸಚಿವಾಲಯ ಸಹಿ ಹಾಕಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: IAF AFCAT Recruitment 2022: 12ನೇ ತರಗತಿ ಪಾಸಾದವರಿಗೆ ಭಾರತೀಯ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ
ವಾಯುನೆಲೆಗಳ ಆಧುನೀಕರಣದ ಮೊದಲ ಹಂತದ ಒಪ್ಪಂದಕ್ಕೆ 2011ರ ಮಾರ್ಚ್ 16ರಂದು ಸಹಿ ಹಾಕಲಾಗಿತ್ತು. ಅದರಡಿಯಲ್ಲಿ 30 ವಾಯುನೆಲೆಗಳ ಆಧುನೀಕರಣ ಮಾಡಲಾಗಿದೆ. ಎರಡನೇ ಹಂತದ ಆಧುನೀಕರಣಕ್ಕೆ 2020ರ ಮೇ 8ರಂದು ಸಹಿ ಹಾಕಲಾಗಿತ್ತು. ಇದರಂತೆ 37 ವಾಯುನೆಲೆಗಳ ಆಧುನೀಕರಣ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಮೊದಲ ಹಂತದ ಆಧುನೀಕರಣಕ್ಕೆ 1,215.35 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಎರಡನೇ ಹಂತದ ಆಧುನೀಕರಣಕ್ಕೆ 1,187.17 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ